ADVERTISEMENT

ಕೊರೊನಾ ಕತ್ತಲೆಯೊಳಗೆ ಪ್ರೀತಿಯ ಹಣತೆ ಹಚ್ಚೋಣ: ಬೈರತಿ ಬಸವರಾಜ

ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದಲ್ಲಿ ಸಚಿವ ಬೈರತಿ ಬಸವರಾಜ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2021, 13:52 IST
Last Updated 15 ಆಗಸ್ಟ್ 2021, 13:52 IST
ದಾವಣಗೆರೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ  ವಿವಿಧ ತಂಡಗಳಿಂದ ಆಕರ್ಷಕ ಪಥಸಂಚಲನ ನಡೆದವು.–ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ  ವಿವಿಧ ತಂಡಗಳಿಂದ ಆಕರ್ಷಕ ಪಥಸಂಚಲನ ನಡೆದವು.–ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ಕೊರೊನಾ ವೈರಸ್‌ನಿಂದಾಗಿ ಸುತ್ತಲೂ ಕತ್ತಲೆ ಕವಿದಿದೆ. ಅದರೊಳಗೆ ಪ್ರೀತಿಯ ಹಣತೆ ಹಚ್ಚಿ ಸಂಕಷ್ಟಗಳನ್ನು ನಿವಾರಿಸೋಣ. ಪ್ರಧಾನಿಗಳ ಕರೆಯಂತೆ ಆತ್ಮನಿರ್ಭರ ಭಾರತ, ಆತ್ಮನಿರ್ಭರ ಕರ್ನಾಟಕವನ್ನು ನಿರ್ಮಾಣ ಮಾಡೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಹೇಳಿದರು.

ಜಿಲ್ಲಾಡಳಿತದ ವತಿಯಿಂದ ಭಾನುವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ರಾಷ್ಟ್ರ ಧ್ವಜಾರೋಹಣೆ ನೆರವೇರಿಸಿ, ಧ್ವಜವಂದನೆ ಸ್ವೀಕರಿಸಿ, ಪಥ ಸಂಚನ ವೀಕ್ಷಿಸಿ ಸ್ವಾತಂತ್ರ್ಯ ದಿನಾಚರಣೆಯ ಸಂದೇಶ ನೀಡಿದರು.

ಭಾರತದ ಸ್ವಾತಂತ್ರ್ಯಕ್ಕಾಗಿ ಹಲವು ಮಹನೀಯರು ಹೋರಾಟ ಮಾಡಿದ್ದಾರೆ. ಗಾಂಧೀಜಿ ಅವರು ಹೋರಾಟಕ್ಕೆ ಧುಮುಕಿದ ಮೇಲೆ ಹೋರಾಟದ ದಿಕ್ಕಿ ಬದಲಾಯಿತು. 1942ರಲ್ಲಿ ಬ್ರಿಟಿಷರ ತೆರಿಗೆ ನೀತಿ ವಿರೋಧಿಸಿ ದೇಶದಾದ್ಯಂತ ಹೋರಾಟ ನಡೆದಿತ್ತು. ದಾವಣಗೆರೆಯಲ್ಲೂ ಚಳವಳಿಗಳಾಗಿದ್ದವು. ಹಳ್ಳೂರು ನಾಗಪ್ಪ, ಅಕ್ಕಸಾಲೆ ವಿರೂಪಾಕ್ಷಪ್ಪ, ಬಿದಿರಕುಂದಿ ನಿಂಗಪ್ಪ, ಹಮಾಲಿ ತಿಮ್ಮಣ್ಣ, ಹದಡಿ ನಿಂಗಪ್ಪ, ಮಾಗನಹಳ್ಳಿ ಹನುಮಂತಪ್ಪ ಹುತಾತ್ಮರಾಗಿದ್ದರು ಎಂದು ನೆನಪಿಸಿಕೊಂಡರು.

ADVERTISEMENT

ಸ್ವಾತಂತ್ರ್ಯ ಹೋರಾಟಗಾರರಿಗೆ ಸರ್ಕಾರ ಗೌರವ ಸಲ್ಲಿಸುವ ಕೆಲಸ ಮಾಡುತ್ತಿದ್ದು, ಆಗಸ್ಟ್ 15 ಮತ್ತು ಜನವರಿ 26 ಎರಡು ದಿನಗಳನ್ನು ಸಂಗೊಳ್ಳಿ ರಾಯಣ್ಣ ಸಂಸ್ಮರಣೆಯ ದಿನಗಳೆಂದು ಗೌರವ ಸಮರ್ಪಣೆಯ ಆದೇಶ ಹೊರಡಿಸಲಾಗಿದೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದ ಕೂಡಲೇ ಘೋಷಿಸಿದಂತೆ ಆಗಸ್ಟ್ ಒಂದರಿಂದಲೇ ಅನ್ವಯವಾಗುವಂತೆ ವಿಧವಾ ವೇತನ ಹಾಗೂ ಅಂಗವಿಕಲರ ವೇತನವನ್ನು ₹ 600ದಿಂದ ₹ 800ಕ್ಕೆ, ಸಂಧ್ಯಾಸುರಕ್ಷಾ ವೇತನವನ್ನು ₹ 1000 ದಿಂದ 1200ಕ್ಕೆ ಹೆಚ್ಚಿಸಿ ಆದೇಶ ಹೊರಡಿಸಿದೆ. ಇದು ಜನರಿಗೆ ಉಪಯೋಗವಾಗಲಿದೆ ಎಂದು ವಿವರಿಸಿದರು.

ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ಈವರೆಗೆ 5.72 ಲಕ್ಷ ಮೊದಲನೇ ಡೋಸ್, 1.38 ಲಕ್ಷ ಎರಡನೆ ಡೋಸ್ ನೀಡಲಾಗಿದೆ. ಚಿಗಟೇರಿ ಜಿಲ್ಲಾಸ್ಪತ್ರೆ, ಇಎಸ್‍ಐ ಆಸ್ಪತ್ರೆ ಹಾಗೂ ಜಿಲ್ಲೆಯ 4 ಸಾರ್ವಜನಿಕ ಆಸ್ಪತ್ರೆಗಳಲ್ಲಿ ಆಮ್ಜನಕ ಘಟಕ ಸ್ಥಾಪಿಸಲಾಗಿದೆ. ಮೂರನೇ ಅಲೆ ತಡೆಗಟ್ಟಲು ಜಿಲ್ಲೆಯ ಅಂಗನವಾಡಿಯ 66,203 ಮಕ್ಕಳು ಹಾಗೂ 49,226 ಶಾಲಾ ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡಲಾಗಿದೆ ಎಂದು ತಿಳಿಸಿದರು.

ಕೋವಿಡ್‍ನಿಂದ ಸಂಕಷ್ಟಕ್ಕೆ ಒಳಗಾದ ಹೂವು, ಹಣ್ಣು, ತರಕಾರಿ ಬೆಳೆಯುವ 278 ರೈತರಿಗೆ ₹ 1.53 ಕೋಟಿ ಪರಿಹಾರ ನೀಡಲಾಗಿದೆ. ಅಲ್ಲದೆ ನಿರ್ಗತಿಕರು, ಕೂಲಿ ಕಾರ್ಮಿಕರು, ಬಡವರಿಗೆ ಇಂದಿರಾ ಕ್ಯಾಂಟೀನ್ ಮೂಲಕ ಉಚಿತವಾಗಿ ಉಪಾಹಾರ ಹಾಗೂ ಊಟ ಪೂರೈಕೆ ಮಾಡಲಾಗಿದೆ. ಸಂಕಷ್ಟದಲ್ಲಿ ಇರುವವರಿಗೆ ಪರಿಹಾರ ದಿನ ನೀಡಲಾಗಿದೆ ಎಂದರು.

ಜಗಳೂರು ಕ್ಷೇತ್ರದಲ್ಲಿ ₹ 660 ಕೋಟಿ ಅನುದಾನದಲ್ಲಿ 57 ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆ, ಚನ್ನಗಿರಿ ತಾಲ್ಲೂಕು ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಮುಂದುವರಿದ ಭಾಗಕ್ಕೆ ₹ 167 ಕೋಟಿ ಅನುದಾನದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕುಗಳ ವ್ಯಾಪ್ತಿಯ 130 ಕೆರೆಗಳ ನೀರು ತುಂಬಿಸುವ ₹ 518 ಕೋಟಿ ರೂ. ಗಳ ಯೋಜನೆಗೆ ಡಿಪಿಆರ್ ತಯಾರಿಸಲಾಗುತ್ತಿದೆ ಎಂದು ವಿವರಿಸಿದರು.

ವಿವಿಧ ಇಲಾಖೆಗಳಲ್ಲಿ ವಿವಿಧ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳ ವಿವರ ನೀಡಿದರು.

ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಎಸ್.ಎ. ರವೀಂದ್ರನಾಥ್, ಮೇಯರ್ ಎಸ್.ಟಿ. ವೀರೇಶ್, ಧೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪಂಚಾಯಿತಿ ಸಿಇಒ ಡಾ. ವಿಜಯ ಮಹಾಂತೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಐಜಿಪಿ ರವಿ ಎಸ್‌., ಜಿಲ್ಲಾ ಪೊಲೀಸ್‌ ವರಿಷ್ಠಧಿಕಾರಿ ಸಿ.ಬಿ. ರಿಷ್ಯಂತ್, ಎಎಸ್‍ಪಿ ಎಂ. ರಾಜೀವ್, ಡಿವೈಎಸ್‍ಪಿಗಳಾದ ನಾಗೇಶ್ ಐತಾಳ್, ಪ್ರಕಾಶ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.