ADVERTISEMENT

ಹೊಸ ಆವಿಷ್ಕಾರ ರೈತರಿಗೆ ತಲುಪಲಿ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2020, 10:01 IST
Last Updated 8 ಮಾರ್ಚ್ 2020, 10:01 IST
ಚಿತ್ರ : 07 ಎಚ್‍ಎನ್‍ಎಲ್-1ಇಪಿ : 2ಇಪಿ : ಹೊನ್ನಾಳಿ ಹಿರೇಕಲ್ಮಠದಲ್ಲಿ ನಡೆದ ರಾಜ್ಯಮಟ್ಟದ ಕೃಷಿಮೇಳದಲ್ಲಿ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಮಾತನಾಡಿದರು.
ಚಿತ್ರ : 07 ಎಚ್‍ಎನ್‍ಎಲ್-1ಇಪಿ : 2ಇಪಿ : ಹೊನ್ನಾಳಿ ಹಿರೇಕಲ್ಮಠದಲ್ಲಿ ನಡೆದ ರಾಜ್ಯಮಟ್ಟದ ಕೃಷಿಮೇಳದಲ್ಲಿ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಮಾತನಾಡಿದರು.   

ಹೊನ್ನಾಳಿ: ಕೃಷಿಮೇಳಗಳ ಮೂಲ ಉದ್ದೇಶ ರೈತರು ಭಾಗವಹಿಸಬೇಕು. ಅದರ ಉಪಯೋಗ ಪಡೆದುಕೊಳ್ಳಬೇಕು. ಹೊಸ ಆವಿಷ್ಕಾರಗಳನ್ನು ಕೃಷಿಕರಿಗೆ ತಲುಪಿಸಿದಾಗ ಮಾತ್ರ ಸಂಶೋಧನೆ ಸಫಲವಾಗುತ್ತದೆ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಹೇಳಿದರು.

ಶನಿವಾರ ಹಿರೇಕಲ್ಮಠದಲ್ಲಿ ಮೂರನೇ ದಿನದ ರಾಜ್ಯಮಟ್ಟದ ಕೃಷಿಮೇಳದ ಸಮಾರೋಪ ಸಮಾರಂಭದಲ್ಲಿ ವಾಣಿಜ್ಯ ಸಂಕೀರ್ಣಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿ ವಿಶ್ವವಿದ್ಯಾಲಯಗಳು ಸಂಶೋಧನೆಗಳ ಕಡೆಗೆ ಹೆಚ್ಚು ಗಮನ ಕೊಡಬೇಕು. ಹಸಿರು ಕ್ರಾಂತಿಯಾದ ನಂತರ ದೇಶ ಸ್ವಾವಲಂಬಿಯಾಯಿತು ಎಂದರು.

ADVERTISEMENT

ಸಣ್ಣ ರೈತರಿಗೆ ಎಲ್ಲಾ ಬೆಳೆಗಳ ಬಗ್ಗೆ ಜ್ಞಾನ ಇರಬೇಕಾಗುತ್ತದೆ. ಲ್ಯಾಬ್ ಗಳಲ್ಲಿ ಆಗುವ ಬೆಳವಣಿಗೆಗಳ ಬಗ್ಗೆ ರೈತರಿಗೆ ಮಾಹಿತಿ ಕೊಡಬೇಕಾಗುತ್ತದೆ. ರೈತರು ಬೆಳೆದ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಿ ಕೊಡಬೇಕಾದ ಕರ್ತವ್ಯ ಸರ್ಕಾರಗಳದ್ದು ಎಂದು ತಿಳಿಸಿದರು.

ಕೃಷಿ ಕ್ಷೇತ್ರ ಕಡಿಮೆಯಾಗುತ್ತಿದೆ. ಕೃಷಿಕರೂ ಕಡಿಮೆಯಾಗುತ್ತಿದ್ದಾರೆ. ಒಂದು ಕಾಲದಲ್ಲಿ ಹಳ್ಳಿಗಾಡಿನಲ್ಲಿ ಶೇ 80ರಷ್ಟು ಜನ ವಾಸ ಮಾಡುತ್ತಿದ್ದರು. ಆದರೆ ಇಂದು ಸುಮಾರು ಶೇ 62ರಷ್ಟು ಜನ ವಾಸ ಮಾಡುತ್ತಿದ್ದಾರೆ. ಜನರು ಪಟ್ಟಣಕ್ಕೆ ವಲಸೆ ಹೋಗುತ್ತಿರುವುದು ಇದಕ್ಕೆ ಕಾರಣ ಎಂದು ವಿಶ್ಲೇಷಿಸಿದರು.

ಯುವಕರು ಕೃಷಿಯಿಂದ ವಿಮುಖರಾಗುತ್ತಿದ್ದರೆ. ಹೀಗಾಗಿ ಹಳ್ಳಿಗಳ ಜನಸಂಖ್ಯೆ ಕಡಿಮೆಯಾಗುತ್ತಿದೆ. ಪಟ್ಟಣದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ 70 ಲಕ್ಷ ಕೃಷಿ ಕುಟುಂಬಗಳು ಇವೆ. ಅದರಲ್ಲಿ ಶೇ 80ಕ್ಕೂ ಹೆಚ್ಚು ಮಂದಿ ಸಣ್ಣ, ಅತಿ ಸಣ್ಣ ರೈತರು. ಅವರ ಕಷ್ಟ ಹೇಳತೀರದು ಎಂದರು.

‘ರೈತರು ಬೆಳೆದ ವಸ್ತುಗಳಿಗೆ ನಾಯಯುತವಾದ ಬೆಲೆ ಕೊಡಬೇಕಾದದ್ದು ಅವಶ್ಯ. ಮಧ್ಯವರ್ತಿಗಳು ಶೋಷಣೆ ಮಾಡುವುದನ್ನು ತಪ್ಪಿಸಬೇಕಾಗಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಈ ನಿಟ್ಟಿನಲ್ಲಿ ಚಿಂತನೆ ಮಾಡಿ ಆನ್‍ಲೈನ್‌ನಲ್ಲಿ ಮಾರುಕಟ್ಟೆ ವ್ಯವಸ್ಥೆ ಜಾರಿಗೆ ತಂದಿದ್ದೆ. ಇದನ್ನು ಕೇಂದ್ರ ಸರ್ಕಾರ ಇಡೀ ದೇಶಕ್ಕೆ ಅನ್ವಯಿಸಿತು’ ಎಂದು ತಿಳಿಸಿದರು.

‘ಬೆಲೆ ನಿಗದಿ ಆಯೋಗ ರಚನೆ ಮಾಡಿದ್ದೆ. ನೀರಾವರಿಗೆ ₹ 58 ಸಾವಿರ ಕೋಟಿ ಖರ್ಚು ಮಾಡಿದೆ. ಕೃಷಿ ಹೊಂಡಗಳನ್ನು ನಿರ್ಮಿಸಲು ರೈತರಿಗೆ ಅನುದಾನ ಕೊಟ್ಟಿದ್ದೆ. ಮುಂದಿನ ದಿನಗಳಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ರೈತರ ಪರವಾಗಿ ಚಿಂತನೆ ನಡೆಸಬೇಕು. ಮಾರುಕಟ್ಟೆ ದರ ಅವನೇ ನಿಗದಿ ಮಾಡುವಂತೆ ಕ್ರಮ ಕೈಗೊಳ್ಳಬೇಕು. ಕೃಷಿ ಲಾಭದಾಯವಾಗಬೇಕು’ ಎಂದು ಹೇಳಿದರು.

ಶ್ರೀಶೈಲ, ಕಾಶಿಶ್ರೀಗಳು ಸಾನಿಧ್ಯ ವಹಿಸಿದ್ದರು. ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಸೊಲ್ಲಾಪುರದ ಜಯಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಶ್ರೀಕಂಠ ಶಿವಾಚಾರ್ಯರು, ಓಂಕಾರ ಶಿವಾಚಾರ್ಯ ಸ್ವಾಮೀಜಿ, ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು, ರೇಣುಕ ಶಿವಾಚಾರ್ಯರು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ವಿಧಾನಪರಿಷತ್ ಸದಸ್ಯರಾದ ಪ್ರಸನ್ನಕುಮಾರ್, ಅಬ್ದುಲ್ ಜಬ್ಬಾರ್, ಮಾಜಿ ಶಾಸಕ ಡಿ.ಜಿ. ಶಾಂತನಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯರಾದ ದೀಪಾ ಜಗದೀಶ್, ಎಂ.ಆರ್. ಮಹೇಶ್, ಸುಮಾ ರೇಣುಕಾಚಾರ್ಯ, ಮುಖಂಡರಾದ ಬಿ. ಸಿದ್ದಪ್ಪ, ಎಚ್.ಎ, ಉಮಾಪತಿ, ಎಂ. ರಮೇಶ್, ಎಚ್.ಬಿ. ಮೋಹನ್, ಕೆಂಗೋ ಹನುಮಂತಪ್ಪ, ಹೊಸಕೇರಿ ಸುರೇಶ್, ಬಿ.ಎಲ್. ಕುಮಾರಸ್ವಾಮಿ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.