
ಸತೀಶ ಜಾರಕಿಹೊಳಿ
ದಾವಣಗೆರೆ: ಮುಖ್ಯಮಂತ್ರಿ ಬದಲಾವಣೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಸೃಷ್ಟಿಯಾಗಿರುವ ಗೊಂದಲಗಳಿಗೆ ಪಕ್ಷದ ಹೈಕಮಾಂಡ್ ಶೀಘ್ರದಲ್ಲೇ ತೆರೆ ಎಳೆಯುವ ಅಗತ್ಯವಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
‘ಮುಖ್ಯಮಂತ್ರಿ ಗಾದಿಯ ಕುರಿತಂತೆ ನಡೆಯುತ್ತಿರುವ ಚರ್ಚೆ ಪಕ್ಷದ ನಾಯಕರ ಗಮನಲ್ಲಿದೆ. ಇದು ಶೀಘ್ರ ಇತ್ಯರ್ಥ ಆಗಬೇಕು ಎಂಬುದು ಪಕ್ಷದ ಎಲ್ಲ ಶಾಸಕರ ಅಭಿಮತ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಸ್ಸಾಂ ಕಾಂಗ್ರೆಸ್ ಉಸ್ತುವಾರಿ ಕೂಡ ಹೌದು. ಅವರು ದೆಹಲಿಗೆ ತೆರಳಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ’ ಎಂದು ಚನ್ನಗಿರಿ ತಾಲ್ಲೂಕಿನ ಗೋಪೇನಹಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
‘ದೆಹಲಿಯ ಕರ್ನಾಟಕ ಭವನ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿದೆ. ಹೊಸ ಕಟ್ಟಡ ನಿರ್ಮಾಣದ ವಿಚಾರವಾಗಿ ರಾಷ್ಟ್ರ ರಾಜಧಾನಿಗೆ ತೆರಳುತ್ತಿದ್ದೇನೆ. ಮುಖ್ಯಮಂತ್ರಿ ಹುದ್ದೆಗೆ ಸಂಬಂಧಿಸಿದಂತೆ ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
‘ಸಾಹುಕಾರ್ ನಮ್ಮ ಸಿಎಂ’
ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಅಭಿಮಾನಿಗಳು ‘ಸಾಹುಕಾರ್ ನಮ್ಮ ಸಿಎಂ’ ಎಂಬ ಘೋಷಣೆ ಕೂಗಿದರು. ಭಿತ್ತಿ ಪತ್ರಗಳನ್ನು ಪ್ರದರ್ಶಿಸಿ ಅಭಿಮಾನ ಮೆರೆದರು.
‘2028ರ ಸಾರ್ವತ್ರಿಕ ಚುನಾವಣೆಯ ಬಳಿಕ ಮುಖ್ಯಮಂತ್ರಿ ಹುದ್ದೆಗೆ ಬೇಡಿಕೆ ಇಡಲಿದ್ದೇನೆ. ಪ್ರಸಕ್ತ ಅವಧಿಯಲ್ಲಿ ಆಸೆ ಇರುವವರು ಮುಖ್ಯಮಂತ್ರಿ ಆಗಬಹುದು. ಇದಕ್ಕೆ ನನ್ನ ಬೆಂಬಲವೂ ಇದೆ. ಅಭಿಮಾನಿಗಳು ರಾಜ್ಯದ ಎಲ್ಲೆಡೆ ಹೀಗೆ ಒತ್ತಾಯಿಸುತ್ತಿದ್ದಾರೆ. ಇದರಿಂದ ಗೊಂದಲ ಆಗುವುದು ಬೇಡ’ ಎಂದು ಸುದ್ದಿಗಾರರ ಪ್ರಶ್ನೆಗೆ ಜಾರಕಿಹೊಳಿ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.