ADVERTISEMENT

ಯುಪಿಎಸ್‌ಸಿ ಪಟ್ಟಿಯಲ್ಲಿ ಕಾಣಲಿ ‘ಸಂಕಲ್ಪ’: ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2025, 6:20 IST
Last Updated 4 ಆಗಸ್ಟ್ 2025, 6:20 IST
   

ದಾವಣಗೆರೆ: ‘ಕೇಂದ್ರ ಲೋಕ ಸೇವಾ ಆಯೋಗದ (ಯುಪಿಎಸ್‌ಸಿ) ನಾಗರಿಕ ಸೇವಾ ಪರೀಕ್ಷಾ ಫಲಿತಾಂಶದ ಪಟ್ಟಿಯಲ್ಲಿ ‘ಸಂಕಲ್ಪ’ದಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳನ್ನು ಕಾಣುವಂತಾಗಬೇಕು. ಜಿಲ್ಲೆಯ ಯುವಜನಾಂಗ ಆಡಳಿತಾತ್ಮಕ ಸೇವೆಗೆ ಆಯ್ಕೆಯಾಗಬೇಕು’ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹೇಳಿದರು.

ಇಲ್ಲಿನ ಬಿಐಇಟಿ ಕಾಲೇಜು ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ದಾವಣಗೆರೆ ವಿಶ್ವವಿದ್ಯಾಲಯ, ಎಸ್.ಎಸ್. ಕೇರ್‌ ಟ್ರಸ್ಟ್ ಹಾಗೂ ‘ಐಎಎಸ್‌ ಬಾಬಾ’ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗೆ ತೆರೆದಿರುವ ‘ಸಂಕಲ್ಪ’ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಜನಪ್ರತಿನಿಧಿಗಳಾಗಿಯೂ ಸಮಾಜ ಸುಧಾರಣೆ ಮಾಡಲು ಅವಕಾಶಗಳಿವೆ. ಆಡಳಿತಾತ್ಮಕ ಸೇವೆ ಸೇರಿದವರಿಗೆ ಸಾಂವಿಧಾನಿಕ ಅಧಿಕಾರ ಸಿಗುತ್ತದೆ. ಆಗ ಸಮಾಜದ ಎಲ್ಲ ಕ್ಷೇತ್ರ ಹಾಗೂ ಜನಸಮುದಾಯದಲ್ಲಿ ಬದಲಾವಣೆ ತರಲು ಸಾಧ್ಯವಾಗುತ್ತದೆ. ಈ ಹುದ್ದೆಗಳು ಸುಲಭವಾಗಿ ಸಿಗುವುದಿಲ್ಲ. ಸಾಕಷ್ಟು ಕಷ್ಟಪಡಬೇಕು’ ಎಂದರು.

ADVERTISEMENT

‘ನಾಗರಿಕ ಸೇವೆಗೆ ಸಾಮಾನ್ಯ ಜ್ಞಾನದ ಅಗತ್ಯವಿದೆ. ಯುಪಿಎಸ್‌ಸಿ ಪರೀಕ್ಷಾರ್ಥಿಗಳು ಸಾಮಾನ್ಯ ಜ್ಞಾನಕ್ಕೆ ಹೆಚ್ಚು ಒತ್ತು ನೀಡಬೇಕು. ಸಾಮಾನ್ಯ ಜ್ಞಾನದಲ್ಲಿ ಪರಿಣತಿ ಪಡೆದರೆ ಯಶಸ್ಸು ಸುಲಭ. ಪಠ್ಯ ಮತ್ತು ಪ್ರಸಕ್ತ ವಿದ್ಯಮಾನದ ಮೇಲೆ ಗಮನ ಹರಿಸಬೇಕು. ಗ್ರಂಥಾಲಯಕ್ಕೆ ಪ್ರತಿದಿನ ಭೇಟಿ ನೀಡಿ ಪುಸ್ತಕ, ದಿನಪತ್ರಿಕೆಗಳನ್ನು ಓದಬೇಕು’ ಎಂದು ಕಿವಿಮಾತು ಹೇಳಿದರು.

‘ಬದುಕಿನ ಅಗತ್ಯಗಳಿಗೆ ಮಿತಿ ಇದೆ. ಆದರೆ, ದುರಾಸೆಗೆ ಪರಿಮಿತಿ ಇಲ್ಲ. ಅತಿ ಆಸೆಯಿಂದ ನಾಗರಿಕ ಸೇವೆ ಸೇರಲು ಬರುವವರು ಯಶಸ್ಸು ಪಡೆಯಲು ಸಾಧ್ಯ ಇಲ್ಲ. ಪರಂಪರೆಯಿಂದ ಬಂದಿರುವ ಮೌಲ್ಯಗಳಲ್ಲಿ ಸರಿ– ತಪ್ಪು ಗುರುತಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ಸಕಾರಾತ್ಮಕ ಆಲೋಚನೆ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌, ‘ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಕಾರಣಕ್ಕೆ ಉದ್ಯೋಗ ಕಳೆದುಕೊಳ್ಳುವ ಆತಂಕ ಸೃಷ್ಟಿಯಾಗಿದೆ. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಉದ್ಯೋಗಕ್ಕೆ ಪ್ರಾಮುಖ್ಯತೆ ನೀಡಬೇಕಿದೆ. ತರಬೇತಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಕಲ್ಪಿಸಲು ಪ್ರಯತ್ನಿಸುವೆ’ ಎಂದು ಹೇಳಿದರು.

ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ‘ಐಎಎಸ್ ಬಾಬಾ’ ಸಂಸ್ಥಾಪಕ ಎಸ್. ಮೋಹನ್ ಕುಮಾರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.