ADVERTISEMENT

ಲಿಂಗಾಪುರ: ಬ್ರಹ್ಮದೇವರ ಕಟ್ಟೆಯಲ್ಲಿ ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 6:19 IST
Last Updated 23 ಫೆಬ್ರುವರಿ 2026, 6:19 IST
ಸಾಸ್ವೆಹಳ್ಳಿ ಸಮೀಪದ ಲಿಂಗಾಪುರ ಗ್ರಾಮದ ಹೊರವಲಯದಲ್ಲಿರುವ ಅಶ್ವತ್ಥ ಮರದ ಕೆಳಗಿನ ಬ್ರಹ್ಮದೇವರ ಕಟ್ಟೆಯಲ್ಲಿ ವಿಶೇಷ ಪೂಜೆಗೆ ಉತ್ಸವ ಮೂರ್ತಿಗಳೊಂದಿಗೆ ತೆರಳುತ್ತಿರುವ ಗ್ರಾಮಸ್ಥರು
ಸಾಸ್ವೆಹಳ್ಳಿ ಸಮೀಪದ ಲಿಂಗಾಪುರ ಗ್ರಾಮದ ಹೊರವಲಯದಲ್ಲಿರುವ ಅಶ್ವತ್ಥ ಮರದ ಕೆಳಗಿನ ಬ್ರಹ್ಮದೇವರ ಕಟ್ಟೆಯಲ್ಲಿ ವಿಶೇಷ ಪೂಜೆಗೆ ಉತ್ಸವ ಮೂರ್ತಿಗಳೊಂದಿಗೆ ತೆರಳುತ್ತಿರುವ ಗ್ರಾಮಸ್ಥರು   

ಸಾಸ್ವೆಹಳ್ಳಿ: ಸಮೀಪದ ಲಿಂಗಾಪುರ ಗ್ರಾಮದ ಹೊರವಲಯದಲ್ಲಿರುವ ಅಶ್ವತ್ಥ ಮರದ ಕೆಳಗಿನ ಬ್ರಹ್ಮದೇವರ ಕಟ್ಟೆಯಲ್ಲಿ ವಾರ್ಷಿಕ ವಿಶೇಷ ಪೂಜೆ ಹಾಗೂ ಹಬ್ಬವನ್ನು ಸಂಪ್ರದಾಯಬದ್ಧವಾಗಿ ಆಚರಿಸಲಾಯಿತು.

ಫಾಲ್ಗುಣ ಮಾಸದ ಮಹಾಶಿವರಾತ್ರಿ ನಂತರ ಬರುವ ಅಮಾವಾಸ್ಯೆಯ ಮೊದಲ ಶನಿವಾರ ಮತ್ತು ಭಾನುವಾರದಂದು ಗ್ರಾಮಸ್ಥರೆಲ್ಲರೂ ಸೇರಿ ಈ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.

ಶನಿವಾರ ಹನುಮಂತ ದೇವರ ದಿನವಾದ್ದರಿಂದ, ಗ್ರಾಮ ದೇವತೆ ಹನುಮಂತಪ್ಪನಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಬ್ರಹ್ಮದೇವರ ಕಟ್ಟೆಯ ಬಳಿ ಹನುಮಂತ ದೇವರನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುವುದು ಇಲ್ಲಿನ ವಾಡಿಕೆ. ಈ ಪದ್ಧತಿಯಿಂದ ಗ್ರಾಮಕ್ಕೆ ಒಳಿತಾಗುತ್ತದೆ ಎಂಬ ನಂಬಿಕೆ ಇದೆ ಎಂದು ಗ್ರಾಮದ ಮುಖಂಡರು ತಿಳಿಸಿದ್ದಾರೆ.

ADVERTISEMENT

ಶನಿವಾರ ಬೆಳಿಗ್ಗೆ ಗ್ರಾಮದ ಮಹಿಳೆಯರು ಹಾಗೂ ಮುಖಂಡರು ಕಾಲ್ನಡಿಗೆಯ ಮೂಲಕ ಕಟ್ಟೆಗೆ ತೆರಳಿ ಪೂಜೆ ಸಲ್ಲಿಸಿದರು. ಮನೆಗಳಲ್ಲಿ ತಯಾರಿಸಿದ ಹೋಳಿಗೆ, ಪಾಯಸ, ಬುತ್ತಿ ಹಾಗೂ ರೊಟ್ಟಿಗಳನ್ನು ದೇವರಿಗೆ ನೈವೇದ್ಯವಾಗಿ ಅರ್ಪಿಸಿ ಹರಿವಾಣದೊಂದಿಗೆ ಪೂಜೆ ನೆರವೇರಿಸಲಾಯಿತು. ನಂತರ ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಿತು.

ಭಾನುವಾರ ಬೆಳಿಗ್ಗೆ ಗ್ರಾಮಸ್ಥರು ಮತ್ತೆ ಕಟ್ಟೆಗೆ ತೆರಳಿ ಪಾನಕ ಬಂಡಿ ಉತ್ಸವ ಹಾಗೂ ಬಲಿಸೇವೆಯನ್ನು ನೆರವೇರಿಸಿದರು. ಮಳೆ-ಬೆಳೆ ಚೆನ್ನಾಗಿ ಆಗಲಿ ಮತ್ತು ರೈತರು ಸುಖವಾಗಿರಲಿ ಎಂದು ಈ ಸಂದರ್ಭದಲ್ಲಿ ಪ್ರಾರ್ಥಿಸಲಾಯಿತು. ಅನಾದಿಕಾಲದಿಂದ ನಡೆದುಬಂದಿರುವ ಈ ಆಚರಣೆಯಲ್ಲಿ ಲಿಂಗಾಪುರ ಹಾಗೂ ಸುತ್ತಮುತ್ತಲ ಗ್ರಾಮಗಳ ಭಕ್ತರು ಪಾಲ್ಗೊಂಡು ಹರಕೆ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.