ADVERTISEMENT

ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ನಿಲ್ಲದು: ತೋಂಟದಾರ್ಯ ಶ್ರೀ

​ಪ್ರಜಾವಾಣಿ ವಾರ್ತೆ
Published 7 ಮೇ 2019, 20:00 IST
Last Updated 7 ಮೇ 2019, 20:00 IST
ತೋಂಟದ ಸಿದ್ಧರಾಮ ಸ್ವಾಮೀಜಿ
ತೋಂಟದ ಸಿದ್ಧರಾಮ ಸ್ವಾಮೀಜಿ   

ಉಚ್ಚಂಗಿದುರ್ಗ: ‘ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟವನ್ನು ರಾಜಕಾರಣಿಗಳು ತಮ್ಮ ಉದ್ದೇಶಕ್ಕೆ ಬಳಸಿಕೊಳ್ಳುತ್ತಾರೆ. ರಾಜಕಾರಣಿಗಳು ಬರುತ್ತಾರೆ; ಹೋಗುತ್ತಾರೆ. ಆದರೆ, ಗುರಿ ಮುಟ್ಟುವ ತನಕ ಹೋರಾಟ ನಿಲ್ಲುವುದಿಲ್ಲ’ ಎಂದು ಗದಗದ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ಹೇಳಿದರು.

ಅರಸೀಕೆರೆ ಗ್ರಾಮದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಗೃಹ ಸಚಿವ ಎಂ.ಬಿ. ಪಾಟೀಲ ಬದ್ಧತೆಯಿಂದ ನಡೆದುಕೊಂಡಿದ್ದು, ಹೋರಾಟದಿಂದ ಹಿಂದೆ ಸರಿದಿಲ್ಲ. ಲಿಂಗಾಯತ ಧರ್ಮ ಹೋರಾಟದಿಂದ ಕಾಂಗ್ರೆಸ್‍ಗೆ ಹಿನ್ನಡೆಯಾಯಿತು ಎಂದಿರುವ ಸಚಿವ ಡಿ.ಕೆ. ಶಿವಕುಮಾರ್ ಲಿಂಗಾಯತರಲ್ಲ. ಅವರ ಬಗ್ಗೆ ಮಾತನಾಡದೇ ಇರುವುದು ಸೂಕ್ತ’ ಎಂದು ತಿರುಗೇಟು ನೀಡಿದರು.

‘ಆಡಳಿತ ವಿರೋಧಿ ಅಲೆಯಿಂದ ಕೊಚ್ಚಿ ಹೋಗಬೇಕಿದ್ದ ಕಾಂಗ್ರೆಸ್‌ ಪಕ್ಷವು, ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದ ಫಲವಾಗಿ ಮತ್ತೆ ಅಧಿಕಾರದಲ್ಲಿದೆ. ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಶಿಫಾರಸು ಮಾಡಿದ್ದರಿಂದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಸೀಟುಗಳು ಕಡಿಮೆಯಾಗಿಲ್ಲ. ಆಡಳಿತ ಪಕ್ಷಕ್ಕೆ ವಿರೋಧಿ ಅಲೆ ಇತ್ತು’ ಎಂದು ಪ್ರತಿಪಾದಿಸಿದರು.

ADVERTISEMENT

‘ಬೆಳಗಾವಿ ಜಿಲ್ಲೆಯಲ್ಲಿ ಈ ಹಿಂದೆ ಕಾಂಗ್ರೆಸ್‌ನ ಆರು ಶಾಸಕರಿದ್ದರು. ಈಗ 10 ಶಾಸಕರಿದ್ದಾರೆ. ಲಿಂಗಾಯತರು ಕಾಂಗ್ರೆಸ್‍ ಬೆಂಬಲಿಸಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ. ಹೋರಾಟದಿಂದ ಕಾಂಗ್ರೆಸ್‍ಗೆ ಹಿನ್ನಡೆಯಾಯಿತು ಎಂಬುದನ್ನು ಒಪ್ಪುವುದಿಲ್ಲ’ ಎಂದು ತಿಳಿಸಿದರು.

‘ಮಾತೆ ಮಹಾದೇವಿ, ತೋಂಟದಾರ್ಯ ಶ್ರೀಗಳ ಅಗಲಿಕೆಯಿಂದ ಹೋರಾಟ ನಿಂತಿಲ್ಲ. ಜಾಗತಿಕ ಲಿಂಗಾಯತ ಮಹಾಸಭಾಗೆ ಸದಸ್ಯತ್ವ ದೊರಕಿಸಿಕೊಡುವ ಮೂಲಕ ಜನಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಅವರ ಆದರ್ಶಗಳನ್ನು ಮುಂದಿಟ್ಟುಕೊಂಡು ಹೋರಾಟ ತೀವ್ರಗೊಳಿಸುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.