ADVERTISEMENT

ದಾವಣಗೆರೆ: ಮೇ ಸಾಹಿತ್ಯ ಮೇಳ ಉದ್ಘಾಟಿಸಲಿರುವ ದುಡಿವ ಕೈಗಳು

ಬೀದಿ ವ್ಯಾಪಾರಿ, ಬೀಡಿ ಕಾರ್ಮಿಕರು, ಪೌರಕಾರ್ಮಿಕರು, ಪರಿಸರ ಪ್ರೇಮಿ, ಕೃಷಿಕ, ಕಾಟನ್‌ಮಿಲ್‌ ಕಾರ್ಮಿಕರು ಭಾಗಿ

ಬಾಲಕೃಷ್ಣ ಪಿ.ಎಚ್‌
Published 27 ಮೇ 2022, 4:09 IST
Last Updated 27 ಮೇ 2022, 4:09 IST
ಸಾಲುಮರದ ವೀರಾಚಾರಿ
ಸಾಲುಮರದ ವೀರಾಚಾರಿ   

ದಾವಣಗೆರೆ: ರಾಜ್ಯ, ರಾಷ್ಟ್ರಮಟ್ಟದ ಕಾರ್ಯಕ್ರಮಗಳು ಅಂದರೆ ಆ ಮಟ್ಟದಲ್ಲಿ ಹೆಸರು ಗಳಿಸಿದ ಚಿಂತಕರು, ತಜ್ಞರು ಇಲ್ಲವೇ ರಾಜಕಾರಣಿಗಳು ಉದ್ಘಾಟನೆ ಮಾಡುವುದು ಸಾಮಾನ್ಯ. ಅದಕ್ಕೆ ಅಪವಾದ ಎಂಬಂತೆ ಮೇ 27 ಮತ್ತು 28ರಂದು ನಡೆಯಲಿರುವ ಮೇ ಸಾಹಿತ್ಯ ಮೇಳ ಎಂಬ ರಾಜ್ಯಮಟ್ಟದ ಕಾರ್ಯಕ್ರಮವನ್ನು ದುಡಿವ ಕೈಗಳು ಚಾಲನೆ ನೀಡಲಿವೆ.

ಬೀದಿ ಬದಿ ವ್ಯಾಪಾರಿ, ಬೀಡಿ ಕಾರ್ಮಿಕರು, ಪೌರಕಾರ್ಮಿಕರು, ಪರಿಸರಪ್ರೇಮಿಗಳು, ಕಾಟನ್‌ಮಿಲ್‌ ಕಾರ್ಮಿಕರು ಹೀಗೆ ಐದು ಮಂದಿ ಸೇರಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಧಾರವಾಡದಲ್ಲಿ ದೇವಸ್ಥಾನದ ಬಳಿ ಕಲ್ಲಂಗಡಿ ಮಾರಾಟ ಮಾಡುತ್ತಿದ್ದಾಗ ಇಲ್ಲಿ ಕಲ್ಲಂಗಡಿ ಮಾರುವಂತಿಲ್ಲ ಎಂದು ಕೆಲವು ಪುಂಡರು ಕಲ್ಲಂಗಡಿಗಳನ್ನು ಹಾಳು ಮಾಡಿದ ಪ್ರಕರಣ ದೇಶವ್ಯಾಪಿ ಸುದ್ದಿಯಾಗಿತ್ತು. ‘ನೀವು ದುಡ್ಡು ಕೊಡೋದು ಬೇಡ, ಒಯ್ದು ತಿನ್ನಿ. ಒಡೆದು ಹಾಳುಮಾಡಬೇಡಿ’ ಎಂದು ಆಗ ಅಂಗಲಾಚಿದ್ದ ಬಡ ವ್ಯಾಪಾರಿ ನಬೀಸಾಬ್‌ ಈ ಚಾಲನೆ ನೀಡುವವರಲ್ಲಿ ಒಬ್ಬರಾಗಿದ್ದಾರೆ.

ADVERTISEMENT

ಪತಿ ಪೌರಕಾರ್ಮಿಕರಾಗಿರುವಾಗಲೇ ಅವರ ಪರವಾಗಿ 8 ವರ್ಷ ಕೆಲಸ ಮಾಡಿ, ಬಳಿಕ ತಾನೇ ಕಾಯಂ ಪೌರಕಾರ್ಮಿಕಳಾಗಿ 22 ವರ್ಷಗಳಿಂದ ಅಣಜಿ ಹನುಮಕ್ಕ ದುಡಿಯುತ್ತಿದ್ದಾರೆ. ನಿತ್ಯ ಪೊರಕೆ ಹಿಡಿದು ರಸ್ತೆ ಗುಡಿಸಿ ದಾವಣಗೆರೆ ನಗರವನ್ನು ಸ್ವಚ್ಛಗೊಳಿಸುವ ಅವರೂ ಚಾಲನೆ ನೀಡಲಿದ್ದಾರೆ.

ಶಾಲೆಯ ಮೆಟ್ಟಿಲು ಹತ್ತದ, 10ನೇ ವರ್ಷದಿಂದಲೇ ಬೀಡಿ ಕಟ್ಟಲು ಆರಂಭಿಸಿ ಸುಮಾರು 3 ದಶಕಗಳಿಂದ ಅದೇ ವೃತ್ತಿಯಲ್ಲಿ ನಾಜೀಮಾಬಾನು ತೊಡಗಿಸಿಕೊಂಡಿದ್ದಾರೆ. ಹೆಣ್ಣಾಗಿ ಹುಟ್ಟಿದ ಮೇಲೆ ಮನೆ ನಿರ್ವಹಿಸುವುದರ ಜತೆಗೆ ಏನೇ ಕಷ್ಟ, ಹಿಂಸೆಗಳು ಬಂದರೂ ಸಹಿಸಿಕೊಳ್ಳಬೇಕು ಎಂಬ ಸಂಪ್ರದಾಯದ ಕುಟುಂಬದಿಂದ ಬಂದಿರುವ ನಾಜೀಮಾಬಾನು ನೆರಳು ಬೀಡಿ ಕಾರ್ಮಿಕರ ಯೂನಿಯನ್‌ ಸದಸ್ಯರಾದ ಮೇಲೆ ಶ್ರಮದ ಮೌಲ್ಯ, ಕಾರ್ಮಿಕರ ಹಕ್ಕುಗಳ ಬಗ್ಗೆ ತಿಳಿದುಕೊಂಡಿದ್ದಾರೆ.

ಆಂಜನೇಯ ಕಾಟನ್ ಮಿಲ್‌ನಲ್ಲಿ ಹಲವು ದಶಕಗಳಿಂದ ಕೆಲಸ ಮಾಡುತ್ತಿರುವ ಕಮಲಮ್ಮ, 6 ದಶಕಗಳಿಂದ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಹೊನ್ನೂರ ಗೊಲ್ಲರಹಟ್ಟಿಯ 75 ವರ್ಷದ ಗೋಪಾಲಪ್ಪ, ನಿತ್ಯ ಪರಿಸರದ ಬಗ್ಗೆಯೇ ಯೋಚಿಸುತ್ತಾ 2500ಕ್ಕೂ ಅಧಿಕ ಗಿಡಗಳನ್ನು ನೆಟ್ಟು ಬೆಳೆಸಿ ಮರಗಳನ್ನಾಗಿ ಮಾಡಿರುವ ಸಾಲುಮರದ ವೀರಾಚಾರಿ ಚಾಲನೆ ನೀಡಲಿದ್ದಾರೆ.

₹300ಕ್ಕೆ ನಿತ್ಯ ದುಡಿಯುವ ನನ್ನನ್ನು ಈ ರೀತಿಯ ದೊಡ್ಡ ಕಾರ್ಯಕ್ರಮದ ಉದ್ಘಾಟನೆಗೆ ಕರೆದು ದೊಡ್ಡ ಗೌರವ ನೀಡಿದ್ದಾರೆ. ಅಲ್ಲಿ ಗಿಡ ಮತ್ತು ನೀರಿನ ಬಗ್ಗೆ ಜಾಗೃತಿ ಮೂಡಿಸುತ್ತೇನೆ.

-ಸಾಲುಮರದ ವೀರಾಚಾರಿ, ಪರಿಸರ ಪ್ರೇಮಿ

ಬೀಡಿ ಕಟ್ಟಿ ಜಿವನ ನಡೆಸುವವರು ನಾವು. ನಮ್ಮನ್ನು ಮೇ ಸಾಹಿತ್ಯ ಮೇಳಕ್ಕೆ ಕರೆದಿರುವುದು ಖುಷಿಯಾಗಿದೆ. ಎಲ್ಲ ಬೀಡಿ ಕಾರ್ಮಿಕ ಮಹಿಳೆಯರ ಪರವಾಗಿ ಭಾಗವಹಿಸುತ್ತೇನೆ.

-ನಾಜೀಮಾಬಾನು, ಬೀಡಿ ಕಾರ್ಮಿಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.