ದಾವಣಗೆರೆ: ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಟ್ಟು 5,684 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ. ₹10,37,26,307 ಮೊತ್ತದ ವ್ಯವಹಾರವನ್ನು ನ್ಯಾಯಾಧೀಶರು ಇತ್ಯರ್ಥಪಡಿಸಿದರು.
7,19,455 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಮುಕ್ತಾಯಗೊಳಿಸಿ, ₹61,46,80,196 ಮೊತ್ತವನ್ನು ಸರ್ಕಾರಕ್ಕೆ ರಾಜೀ ಸಂಧಾನದ ಮೂಲಕ ಭರಿಸಿಕೊಡಲಾಗಿದೆ.
ಮತ್ತೆ ಒಂದಾದ 24 ಜೋಡಿಗಳು:
ದಾವಣಗೆರೆ ಕೌಟುಂಬಿಕ ನ್ಯಾಯಾಲಯದಲ್ಲಿ ವಿವಾಹ ವಿಚ್ಚೇದನ ಮತ್ತು ಜೀವನಾಂಶಕ್ಕಾಗಿ ಪ್ರಕರಣ ದಾಖಲಿಸಿದ್ದ 20 ಜೋಡಿಗಳು ಒಂದಾಗಿ ಮತ್ತೊಮ್ಮೆ ಸಹಬಾಳ್ವೆ ನಡೆಸಲು ನಿರ್ಧರಿಸಿದರು. ಅದರಂತೆ ಹರಿಹರ ತಾಲ್ಲೂಕು ನ್ಯಾಯಾಲಯದಲ್ಲಿ 3, ಚನ್ನಗಿರಿ ತಾಲ್ಲೂಕು ನ್ಯಾಯಾಲಯದಲ್ಲಿ 1 ಪ್ರಕರಣದಲ್ಲಿ ದಂಪತಿ ಮತ್ತೆ ಒಂದಾದರು.
ಮರು ಹೊಂದಾಣಿಕೆಯಾದ ಜೋಡಿಗಳಿಗೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು, ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು, ವಕೀಲರ ಸಂಘದ ಅಧ್ಯಕ್ಷರು ಅಭಿನಂಧನೆ ಸಲ್ಲಿಸಿ, ಹಾರೈಸಿದರು.
46 ಅಪರಾಧಿಕ ಪ್ರಕರಣ, 142 ಚೆಕ್ ಅಮಾನ್ಯ ಪ್ರಕರಣ, 29 ಬ್ಯಾಂಕ್ ವಸೂಲಾತಿ ಕೇಸ್, 15 ಇತರೆ ಹಣ ವಸೂಲಾತಿ, 55 ಅಪಘಾತ ಪರಿಹಾರ ಪ್ರಕರಣ, 88 ವಿದ್ಯುತ್ ಕಳವು ಪ್ರಕರಣ, 35 ಪಾಲು ವಿಭಾಗಕ್ಕಾಗಿ ದಾಖಲಿಸಿದ ದಾವೆ, 54 ಮೋಟಾರು ವಾಹನ ಪರಿಹಾರ ಜಾರಿ ಅರ್ಜಿ, 65 ಇತರೆ ಜಾರಿ ಅರ್ಜಿಗಳು ಅಲ್ಲದೆ ಹಲವು ಕಾರಣಕ್ಕಾಗಿ ದಾಖಲಿಸಿದ 60 ದಾವೆಗಳು ಮತ್ತು ಜೀವನಾಂಶ ಕೋರಿ ದಾಖಲಿಸಿದ್ದ 47 ದಾವೆಗಳು ರಾಜೀ ಮೂಲಕ ಇತ್ಯರ್ಥಗೊಂಡಿವೆ.
ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಾದ ವೇಲಾ ಡಿ.ಕೆ., ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಕರೆಣ್ಣವರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಟಿ.ಆರ್.ಗುರುಬಸವರಾಜ ಹಾಗೂ ಇನ್ನಿತರ ನ್ಯಾಯಾಧೀಶರು, ವಕೀಲರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.