ADVERTISEMENT

ತಳ ಸಮುದಾಯದ ನಾಯಕರನ್ನು ಗುರುತಿಸಿ

ಜಿಲ್ಲಾ ಮಾದಿಗ ಮಹಾಸಭಾ ಅಧ್ಯಕ್ಷ ಬಿ.ಎಚ್‌. ವೀರಭದ್ರಪ್ಪ ಮನವಿ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 4:41 IST
Last Updated 27 ನವೆಂಬರ್ 2025, 4:41 IST
ದಾವಣಗೆರೆಯ ಚೇತನಾ ಹೋಟೆಲ್‌ನಲ್ಲಿ ಬುಧವಾರ ಆಯೋಜಿಸಿದ್ದ ಸಂವಿಧಾನ ಸಮರ್ಪಣಾ ದಿನಾಚರಣೆಯಲ್ಲಿ ನಟ ಚೇತನ್‌ ಅಹಿಂಸಾ ಮಾತನಾಡಿದರು –ಪ್ರಜಾವಾಣಿ ಚಿತ್ರ
ದಾವಣಗೆರೆಯ ಚೇತನಾ ಹೋಟೆಲ್‌ನಲ್ಲಿ ಬುಧವಾರ ಆಯೋಜಿಸಿದ್ದ ಸಂವಿಧಾನ ಸಮರ್ಪಣಾ ದಿನಾಚರಣೆಯಲ್ಲಿ ನಟ ಚೇತನ್‌ ಅಹಿಂಸಾ ಮಾತನಾಡಿದರು –ಪ್ರಜಾವಾಣಿ ಚಿತ್ರ   

ದಾವಣಗೆರೆ: ತಳ ಸಮುದಾಯದ ಮುಖಂಡರನ್ನು ಕಾಂಗ್ರೆಸ್‌ ಗುರುತಿಸಿ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಬೇಕು. ಆಗ ಮಾತ್ರ ಸಮುದಾಯ ಪಕ್ಷದೊಂದಿಗೆ ಗಟ್ಟಿಯಾಗಿ ಉಳಿಯಲು ಸಾಧ್ಯ ಎಂದು ಜಿಲ್ಲಾ ಮಾದಿಗ ಮಹಾಸಭಾದ ಅಧ್ಯಕ್ಷ ಬಿ.ಎಚ್‌. ವೀರಭದ್ರಪ್ಪ ಮನವಿ ಮಾಡಿದರು.

ಇಲ್ಲಿನ ಚೇತನಾ ಹೋಟೆಲ್‌ ಸಭಾಂಗಣದಲ್ಲಿ ಜಿಲ್ಲಾ ಮಾದಿಗ ಮಹಾಸಭಾ ವತಿಯಿಂದ ಬುಧವಾರ ಆಯೋಜಿಸಿದ್ದ ಸಂವಿಧಾನ ಸಮರ್ಪಣಾ ದಿನಾಚರಣೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕೆಪಿಸಿಸಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎನ್‌.ಎಸ್‌. ಬೋಸರಾಜು ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುತಿಸಿ ಸಚಿವ ಸ್ಥಾನ ಕಲ್ಪಿಸಿದರು. ಕಾಂಗ್ರೆಸ್‌ಗೆ ದುಡಿದ ಹಲವರಲ್ಲಿ ಇದು ಆಶಾಭಾವನೆ ಮೂಡಿಸಿದೆ. ಇವರಂತೆಯೇ ತಳ ಸಮುದಾಯದ ಮುಖಂಡರನ್ನು ಗುರುತಿಸಬೇಕು. ವಿಧಾನಪರಿಷತ್‌ಗೆ ನೇಮಕ ಮಾಡುವಾಗ ಪರಿಗಣಿಸಬೇಕು’ ಎಂದು ಕೋರಿದರು.

ADVERTISEMENT

‘ನಿತ್ಯ ಮೂರು ಹೊತ್ತು ಊಟ ಹಾಗೂ ಸೂರು ಇಲ್ಲದ ಕಾಲದಿಂದಲೂ ಜಿಲ್ಲೆಯಲ್ಲಿ ಕಾಂಗ್ರೆಸ್ ಕಟ್ಟಿದ್ದೇವೆ. ಶಾಮನೂರು ಶಿವಶಂಕರಪ್ಪ ಅವರೊಂದಿಗೆ ಪಕ್ಷದ ಏಳಿಗೆಗೆ ದುಡಿದಿದ್ದೇವೆ. ನಿಷ್ಠಾವಂತ ಕಾರ್ಯಕರ್ತರನ್ನು ಪಕ್ಷ ಗಮನಿಸಬೇಕು’ ಎಂದರು.

‘ಒಳಮೀಸಲಾತಿಗೆ ರಾಜ್ಯದಲ್ಲಿ ಸಾಕಷ್ಟು ಹೋರಾಟ ಮಾಡಿದ್ದೇವೆ. ಇದರ ಫಲವಾಗಿ ಸರ್ಕಾರ ಒಳಮೀಸಲಾತಿ ಕಲ್ಪಿಸಿದೆ.‌ ಮಹಾಸಭಾ ನೇತೃತ್ವದಲ್ಲಿ ಸಮುದಾಯ ಒಗ್ಗೂಡಿ ಕೆಲಸ ಮಾಡಬೇಕಿದೆ. ರಾಜಕೀಯ ಪ್ರಾತಿನಿಧ್ಯ ಸಿಗದಿದ್ದರೂ ಸಮುದಾಯದ ಹಿತಾಸಕ್ತಿಯ ಪರವಾಗಿ ಕಾರ್ಯನಿರ್ವಹಿಸುತ್ತೇನೆ’ ಎಂದು ಹೇಳಿದರು.

ನಟ ಚೇತನ್‌ ಅಹಿಂಸಾ, ಮಹಾಸಭಾದ ಗೌರವಾಧ್ಯಕ್ಷ ರವಿ ನಾರಾಯಣ, ಉಪಾಧ್ಯಕ್ಷರಾದ ಎಲ್.ಎಂ. ಹನುಮಂತಪ್ಪ, ಕೆ. ಚಂದ್ರಪ್ಪ, ಶೇಖರಪ್ಪ, ಎಚ್. ಮಲ್ಲೇಶ್, ಸುರೇಶ್ ಕುಣಿಬೆಳಕೆರೆ, ಪ್ರಧಾನ ಕಾರ್ಯದರ್ಶಿ ಹೆಗ್ಗೆರೆ ರಂಗಪ್ಪ, ಸಹ ಕಾರ್ಯದರ್ಶಿ ಸಿ. ಬಸವರಾಜ, ಎಸ್. ಮಲ್ಲಿಕಾರ್ಜುನ್, ರಾಕೇಶ್, ಸಂಘಟನಾ ಕಾರ್ಯದರ್ಶಿ ತಮ್ಮಣ್ಣ, ಎಲ್.ಎಚ್. ಸಾಗರ್, ಶಂಬಣ್ಣ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.