ADVERTISEMENT

ದಾವಣಗೆರೆ: ವಿದ್ಯಾರ್ಥಿಗಳ ಕಲಿಕೆಗೆ ವರವಾದ ಮಾದರಿಯ ಅಭಿವೃದ್ಧಿ

ಅನಿತಾ ಎಚ್.
Published 6 ಫೆಬ್ರುವರಿ 2025, 6:03 IST
Last Updated 6 ಫೆಬ್ರುವರಿ 2025, 6:03 IST
ದಾವಣಗೆರೆಯ ಆಜಾದ್‌ ನಗರದಲ್ಲಿರುವ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕಲ್ಲಿನ ಹಾಸು ಹಾಕಿರುವುದು – ಪ್ರಜಾವಾಣಿ ಚಿತ್ರ/ ವಿಜಯ್‌ ಜಾಧವ್‌
ದಾವಣಗೆರೆಯ ಆಜಾದ್‌ ನಗರದಲ್ಲಿರುವ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕಲ್ಲಿನ ಹಾಸು ಹಾಕಿರುವುದು – ಪ್ರಜಾವಾಣಿ ಚಿತ್ರ/ ವಿಜಯ್‌ ಜಾಧವ್‌   

ದಾವಣಗೆರೆ: ಗಾಂಜಾ, ಮದ್ಯ ವ್ಯಸನಿಗಳು ಸೇರಿದಂತೆ ಇತರ ಅನೈತಿಕ ಚಟುವಟಿಕೆಗಳ ತಾಣವಾಗಿದ್ದ, ಹಂದಿಗಳು, ಬೀಡಾಡಿ ದನಗಳ ಆವಾಸ ಸ್ಥಾನವಾಗಿದ್ದ ಇಲ್ಲಿನ ಆಜಾದ್‌ ನಗರದಲ್ಲಿರುವ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸರ್ಕಾರಿ ಉರ್ದು ಶಾಲೆ ಮತ್ತು ಕಾಲೇಜು ಮದೀನಾ ಟ್ರಸ್ಟ್‌ ನೀಡಿದ ನೆರವಿನಿಂದ ಮಾದರಿಯ ಅಭಿವೃದ್ಧಿ ಕಂಡಿದೆ.

ಆಜಾದ್‌ ನಗರ, ಮಹಾವೀರ ನಗರ, ಬಾಷಾನಗರ, ಮಂಡಕ್ಕಿ ಭಟ್ಟಿ, ಬೀಡಿ ಲೇ ಔಟ್‌, ದೇವರ ಹಟ್ಟಿ, ಎಲೆ ಬೇತೂರು ಮುಂತಾದ ಕೊಳೆಗೇರಿಗಳಲ್ಲಿನ ಅಲ್ಪಸಂಖ್ಯಾತ ಸಮುದಾಯದ ಮಕ್ಕಳಿಗೆ ಈ ಶಾಲೆ ಆಸರೆಯಾಗಿದೆ. ಆದರೆ, ಅಕ್ರಮಗಳ ಕಾರಣ ಶಾಲೆ ಸಂಪೂರ್ಣ ಕಳೆಗುಂದಿತ್ತು. ಶಾಲೆ ಪ್ರವೇಶಿಸಲು ಎರಡು ದ್ವಾರಗಳಿದ್ದು, ಗೇಟ್‌ ಇರದಿದ್ದರಿಂದ ಶಾಲೆ ಮುಗಿದ ಬಳಿಕ ಆವರಣವು ಬೀಡಾಡಿ ದನಗಳು ಹಾಗೂ ಹಂದಿಗಳಿಂದ ತುಂಬಿರುತ್ತಿತ್ತು. ಮಂಡಕ್ಕಿ ಭಟ್ಟಿಯವರು ಅಕ್ಕಿಯನ್ನು ಇಲ್ಲಿಗೇ ತಂದು ಒಣಗಿಸುತ್ತಿದ್ದರು. ಶಿಕ್ಷಕರು ಪ್ರತಿದಿನ ಮುಂಚಿತವಾಗಿ ಬಂದು ದನ, ಹಂದಿಗಳನ್ನು ಓಡಿಸಿ, ಆವರಣವನ್ನು ಸ್ವಚ್ಛಗೊಳಿಸಿ ಪ್ರಾರ್ಥನೆ, ಆಟ–ಪಾಠ ನಡೆಸಬೇಕಾದ ಸ್ಥಿತಿ ಇತ್ತು.

ಖಾಸಗಿ ಶಾಲೆ– ಕಾಲೇಜು ಆರಂಭಿಸುವ ಯೋಚನೆಯಲ್ಲಿದ್ದ ಮದೀನಾ ಟ್ರಸ್ಟ್‌ನ ಕಾರ್ಯದರ್ಶಿ ನೂರ್‌ ಅಹಮ್ಮದ್‌ ಶಾಲೆಯ ದುಃಸ್ಥಿತಿ ಮನಗಂಡು ‘ಶಾಲೆಗಾಗಿ ನಾವು ನೀವು’ ಕಾರ್ಯಕ್ರಮದಡಿ 2016ರಲ್ಲಿ ಈ ಶಾಲೆಯನ್ನೇ ದತ್ತು ಪಡೆದರು. ಮೊದಲಿಗೆ ಶಾಲೆಯ ಪ್ರವೇಶ ದ್ವಾರಗಳಿಗೆ ₹ 3 ಲಕ್ಷ ವೆಚ್ಚದಲ್ಲಿ ಸುಸಜ್ಜಿತವಾದ ಎರಡು ಗೇಟ್‌ಗಳನ್ನು ಅಳವಡಿಸಲು ನೆರವಾದರು. ಶಾಲೆಯ ಕೊಠಡಿಗಳ ಹಾಗೂ ಆವರಣದಲ್ಲಿ ತುಂಬಿದ್ದ ಕಸ ತೆಗೆಸಿ, ಕಿಟಕಿ, ಬಾಗಿಲು ದುರಸ್ತಿ ಮಾಡಿಸಲು ಕೈಜೋಡಿಸಿದರು. ಮಾಸಿದ್ದ ಗೋಡೆಗಳಿಗೆ ಬಣ್ಣ ಬಳಿಸಿದರು. ಪ್ರಾಥಮಿಕ ಶಾಲೆ ಮೈದಾನದಲ್ಲಿ ಗುಂಡಿಗಳು ನಿರ್ಮಾಣವಾಗಿದ್ದರಿಂದ ಮಳೆಗಾಲದಲ್ಲಿ ನೀರು ನಿಂತಾಗ ವಿದ್ಯಾರ್ಥಿಗಳು ತರಗತಿಗಳಿಗೆ ತೆರಳಲು ಪ್ರಯಾಸಪಡಬೇಕಿತ್ತು. ₹ 5 ಲಕ್ಷ ವೆಚ್ಚದಲ್ಲಿ ಮೈದಾನಕ್ಕೆ ಮಣ್ಣು ಹೊಡೆಸಿ, ಅದರ ಮೇಲೆ ಕಲ್ಲಿನ ಹಾಸು ಹಾಕಿಸಿ, ಧ್ವಜಸ್ತಂಭ ನಿರ್ಮಿಸಿ ಕೊಡಲಾಗಿದೆ. ಶಾಲಾ ಕಾರಿಡಾರ್‌ಗೆ ಕಬ್ಬಿಣದ ಗ್ರಿಲ್‌ ಅಳವಡಿಸುವ ಮೂಲಕ ಯಾರೂ ತರಗತಿ ಪ್ರವೇಶಿಸದಂತೆ, ಬೀಗ ಒಡೆದು ಕಳ್ಳತನ ಮಾಡದಂತೆ ಸೂಕ್ತ ಬಂದೋಬಸ್ತ್‌ ಮಾಡಿಸಲಾಗಿದೆ. ₹ 5 ಲಕ್ಷ ವೆಚ್ಚದಲ್ಲಿ ಊಟದ ಮನೆಯನ್ನು ವ್ಯವಸ್ಥಿತಗೊಳಿಸಲಾಗಿದೆ.

ADVERTISEMENT

ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗಲೆಂದು ವಿಜ್ಞಾನ ಪ್ರಯೋಗಾಲಯವನ್ನು ಅಭಿವೃದ್ಧಿಪಡಿಸಲಾಗಿದೆ. ಸರ್ಕಾರದಿಂದ ಬಿಡುಗಡೆಯಾಗಿದ್ದ ₹ 30,000 ಅನುದಾನ ಏನಕ್ಕೂ ಸಾಲದ್ದರಿಂದ ₹ 2.50 ಲಕ್ಷ ವೆಚ್ಚದ ಪೀಠೋಪಕರಣಗಳನ್ನು ಟ್ರಸ್ಟ್‌ ವತಿಯಿಂದ ಕೊಡಿಸಲಾಗಿದೆ. ಸ್ಮಾರ್ಟ್‌ ಸಿಟಿ ವತಿಯಿಂದ 10 ಕಂಪ್ಯೂಟರ್‌ ನೀಡಿದ್ದರಿಂದ ಕಂಪ್ಯೂಟರ್‌ ಪ್ರಯೋಗಾಲಯಕ್ಕೆ ಟೈಲ್ಸ್‌ ಹಾಕಿಸಿ, ವಿದ್ಯುತ್‌ ಸಂಪರ್ಕ ಹಾಗೂ ಪೀಠೋಪಕರಣವನ್ನು ₹ 5 ಲಕ್ಷಕ್ಕೂ ಹೆಚ್ಚು ವೆಚ್ಚದಲ್ಲಿ ಒದಗಿಸಲಾಗಿದೆ. ನಿತ್ಯದ ಪ್ರಾರ್ಥನೆಗೆ ಧ್ವನಿವರ್ಧಕದ ವ್ಯವಸ್ಥೆ ಹಾಗೂ ಮುಖ್ಯಶಿಕ್ಷಕರು, ಶಿಕ್ಷಕರ ಕೊಠಡಿಗೆ ಅಗತ್ಯ ಕುರ್ಚಿ ಹಾಗೂ ಮೇಜುಗಳನ್ನು ನೀಡಲಾಗಿದೆ.

ದಾವಣಗೆರೆಯ ಆಜಾದ್‌ ನಗರದಲ್ಲಿರುವ ಸರ್ಕಾರಿ ಉರ್ದು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕಲ್ಪಿಸಿರುವ ಸುಸಜ್ಜಿತ ಕಂಪ್ಯೂಟರ್‌ ಲ್ಯಾಬ್‌  – ಪ್ರಜಾವಾಣಿ ಚಿತ್ರ/ ವಿಜಯ್‌ ಜಾಧವ್‌

2018ರಲ್ಲಿ ಇದೇ ಶಾಲೆಯ ಆವರಣದಲ್ಲಿ ವಿದ್ಯಾರ್ಥಿನಿಯರಿಗಾಗಿ ಪಿಯುಸಿ ವಿಭಾಗ ಆರಂಭಿಸಿ, ನಾಲ್ಕು ವರ್ಷಗಳವರೆಗೆ ವಿವಿಧ ವಿಷಯಗಳಿಗೆ ಉಪನ್ಯಾಸಕರನ್ನು ನೇಮಿಸಿ ಟ್ರಸ್ಟ್‌ ಮೂಲಕವೇ ವೇತನ ಪಾವತಿಸಲಾಗಿದೆ. ಎರಡು ವರ್ಷಗಳಿಂದ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಸರ್ಕಾರ ಉಪನ್ಯಾಸಕರನ್ನು ನಿಯುಕ್ತಿಗೊಳಿಸಿದೆ. ಶಾಲೆಯ ಭೌತಿಕ ಸ್ಥಿತಿ ಸುಧಾರಣೆ, ಕಲಿಕಾ ಸೌಲಭ್ಯಗಳಿಂದಾಗಿ ಗುಣಮಟ್ಟದ ಕಲಿಕೆ ಸಾಧ್ಯವಾಗಿರುವುದಕ್ಕೆ ಪಾಲಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದಾವಣಗೆರೆಯ ಆಜಾದ್‌ ನಗರದಲ್ಲಿರುವ ಸರ್ಕಾರಿ ಉರ್ದು ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರಯೋಜನಕ್ಕೆ ನಿರ್ಮಿಸಿರುವ ವಿಜ್ಞಾನ ಪ್ರಯೋಗಾಲಯ

‘ನಾನು 2018ರಲ್ಲಿ ಶಾಲೆಗೆ ವರ್ಗಾವಣೆಯಾಗಿ ಬಂದೆ. ಟ್ರಸ್ಟ್‌ ಸಹಕಾರದಿಂದಾಗಿ ಶಾಲೆ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಪಸಕ್ತ ವರ್ಷದಲ್ಲಿ 1ರಿಂದ 10ನೇ ತರಗತಿವರೆಗೆ 650 ವಿದ್ಯಾರ್ಥಿಗಳು ಓದುತ್ತಿದ್ದಾರೆ. ವಿಜ್ಞಾನ ಮತ್ತು ಕಂಪ್ಯೂಟರ್‌ ಪ್ರಯೋಗಾಲಯಗಳು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿವೆ. ಆದರೂ ಕೆಲವರು ಕಸವನ್ನು ತಂದು ಕಂಪೌಂಡ್‌ ಒಳಗೆ ಸುರಿಯುತ್ತಿರುವವರನ್ನು ಪತ್ತೆ ಮಾಡಲು ಸಿ.ಸಿ. ಟಿವಿ ಕ್ಯಾಮೆರಾ ಅಳವಡಿಸುವ ಚಿಂತನೆ ಇದೆ. ಶಾಲಾ ಆವರಣವನ್ನು ಹಸಿರಾಗಿಸಲು ಗಿಡಗಳನ್ನು ಬೆಳೆಸುವ ಯೋಜನೆ ಇದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ’ ಎನ್ನುತ್ತಾರೆ ಮುಖ್ಯಶಿಕ್ಷಕ ಮುಜೀಬ್‌ ಸಾಬ್‌.

ಸಮುದಾಯದ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯಲಿ ಎಂಬ ಉದ್ದೇಶದಿಂದ ಶಾಲೆಯನ್ನು ದತ್ತು ಪಡೆದು ವಿವಿಧ ಅಭಿವೃದ್ಧಿ ಕೆಲಸಗಳನ್ನು ಟ್ರಸ್ಟ್‌ ಮೂಲಕ ನಡೆಸಿಕೊಂಡು ಬರಲಾಗುತ್ತಿದೆ
ನೂರ್‌ ಅಹಮ್ಮದ್‌ ಕಾರ್ಯದರ್ಶಿ ಮದೀನಾ ಟ್ರಸ್ಟ್‌
ಮದೀನಾ ಟ್ರಸ್ಟ್‌ ಎಸ್‌ಡಿಎಂಸಿ ಸದಸ್ಯರು ಹಾಗೂ ಶಿಕ್ಷಕರು ಶಾಲೆಯ ಸುರಕ್ಷತೆ ಮತ್ತು ಅಭಿವೃದ್ಧಿಗೆ ಕ್ರಮ ವಹಿಸಿರುವುದನ್ನು ಪರಿಶೀಲಿಸಿದ್ದೇನೆ. ಎಲ್ಲರ ಸಹಕಾರದಿಂದ ಬಡಮಕ್ಕಳಿಗೆ ಅನುಕೂಲವಾಗಿದೆ
ಜಿ.ಕೊಟ್ರೇಶ್‌ ಡಿಡಿಪಿಐ ಶಾಲಾ ಶಿಕ್ಷಣ ಇಲಾಖೆ ದಾವಣಗೆರೆ

ಪೊಲೀಸ್‌ ಬೀಟ್‌ಗೆ ಮನವಿ

‘ಪಿಯುಸಿಯ ಕಲಾ ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಓದುತ್ತಿದ್ದಾರೆ. ಕಾಲೇಜು ಆರಂಭವಾಗುವ ಮತ್ತು ಬಿಡುವ ವೇಳೆಗೆ ಪೋಲಿ ಹುಡುಗರು ಬಂದು ನಿಲ್ಲುತ್ತಾರೆ. ಇದರಿಂದ ಪಾಲಕರು ಹೆದರಿ ಮರುದಿನ ತಮ್ಮ ಹೆಣ್ಣುಮಕ್ಕಳನ್ನು ಶಾಲೆಗೇ ಕಳುಹಿಸುವುದಿಲ್ಲ. ಅಂತಹವರ ಮನೆಗೆ ತೆರಳಿ ಮನವೊಲಿಸಿ ವಿದ್ಯಾರ್ಥಿನಿಯರನ್ನು ಕರೆತರಬೇಕಾದ ಸ್ಥಿತಿ ಇದೆ. ಪೊಲೀಸ್‌ ಬೀಟ್‌ ಕಲ್ಪಿಸಿದರೆ ಅನುಕೂಲವಾಗುತ್ತದೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರು ಈ ಬಗ್ಗೆ ತುರ್ತಾಗಿ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡುತ್ತಾರೆ ಮುಖ್ಯಶಿಕ್ಷಕ ಮುಜೀಬ್‌ ಸಾಬ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.