ADVERTISEMENT

ಒಂದೇ ಕನಸ್ಸನ್ನು ಕಾಣಿ, ಸಾಕಾರಗೊಳಿಸಿ

ದೆಹಲಿಯ ಬಸವಾಶ್ರಮದ ಮಹಂತ ದೇವರಿಗೆ ಜೆ.ಎಸ್‌. ಪಟೇಲ್ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2019, 11:02 IST
Last Updated 12 ಏಪ್ರಿಲ್ 2019, 11:02 IST
ದಾವಣಗೆರೆಯ ಚಿಂದೋಡಿ ಕಲಾ ಕ್ಷೇತ್ರದಲ್ಲಿ ಜೆ.ಎಚ್‌.ಕಾಲೇಜುವತಿಯಿಂದ ದೆಹಲಿಯ ಬಸವಾಶ್ರಮದ ಮಹಂತ ದೇವರು ಅವರಿಗೆ ಸಮಾಜವಾದಿ ಜೆ.ಎಚ್.ಪಟೇಲ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ದಾವಣಗೆರೆಯ ಚಿಂದೋಡಿ ಕಲಾ ಕ್ಷೇತ್ರದಲ್ಲಿ ಜೆ.ಎಚ್‌.ಕಾಲೇಜುವತಿಯಿಂದ ದೆಹಲಿಯ ಬಸವಾಶ್ರಮದ ಮಹಂತ ದೇವರು ಅವರಿಗೆ ಸಮಾಜವಾದಿ ಜೆ.ಎಚ್.ಪಟೇಲ್ ಪ್ರಶಸ್ತಿ ಪ್ರದಾನ ಮಾಡಲಾಯಿತು.   

ದಾವಣಗೆರೆ: ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿ ಮಾಡುವುದು ಯುವಕರ ಮೇಲಿದೆ ಎಂದು ದೆಹಲಿಯ ಬಸವಾಶ್ರಮದ ಮಹಂತ ದೇವರು ಅಭಿಪ್ರಾಯಪಟ್ಟರು.

ದಾವಣಗೆರೆಯ ಜೆ.ಎಚ್‌. ಪಟೇಲ್ ಕಾಲೇಜುವತಿಯಿಂದ ಚಿಂದೋಡಿ ಲೀಲಾ ಕಲಾ ಕ್ಷೇತ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾಜವಾದಿ ಜೆ.ಎಚ್.ಪಟೇಲ್‌ ಪ್ರಶಸ್ತಿ ಪ್ರದಾನ ಹಾಗೂ ಯಂಗ್ಸ್‌ ಸ್ಟ್ರಿಂಗ್ಸ್‌ –2019 ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಭಾರತದ 130 ಕೋಟಿ ಜನಸಂಖ್ಯೆಯಲ್ಲಿ 58 ಕೋಟಿ ಯುವಕರು ಇದ್ದು, ಅವರೇ ದೇಶದ ಸುಪ್ರೀಂ ಪವರ್. ದೇಶದ ಸಮಸ್ಯೆಗಳನ್ನು ಅರಿತು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ನಿಟ್ಟಿನಲ್ಲಿ ಶ್ರಮಿಸಬೇಕು. ವಿದ್ಯಾರ್ಥಿ ಜೀವನ ಜ್ಞಾನದ ಜೀವನ ಆಗಬೇಕು ಎಂದರು.

ADVERTISEMENT

ಅಬ್ದುಲ್ ಕಲಾಂ ಅವರು ಹೇಳಿದ ಹಾಗೆಯೇ ದಿನಕ್ಕೊಂದು ಕನಸ್ಸು ಕಾಣಬೇಡಿ, ಜೀವನದಲ್ಲಿ ಒಂದೇ ಕನಸು ಕಾಣಬೇಕು. ಆ ಕನಸ್ಸಿನ ಸಾಮ್ರಾಜ್ಯಕ್ಕೆ ಅಧಿಪತಿಗಳಾಗಬೇಕು. ಜಗತ್ತು ನಿಮ್ಮ ಕಡೆ ತಿರುಗಿ ನೋಡುವಂತಹ ಕನಸು ಕಾಣಬೇಕು. ಕಂಡ ಕನಸ್ಸಿನೊಳಗೆ ಮೈಮರೆತು ಮಲಗದಿರಿ ಎಂದು ಸಲಹೆ ನೀಡಿದರು.

ಪ್ರಶಸ್ತಿಗಳು ಮಾರಾಟದ ಸರಕಾಗಬಾರದು

ಇಂದಿನ ದಿನಗಳಲ್ಲಿ ಪ್ರಶಸ್ತಿಗಳು ನಿಜವಾದ ಸೇವೆ ಮಾಡುವವರಿಗೆ ಸಿಗುತ್ತಿಲ್ಲ. ಬದಲಾಗಿ ಕೇವಲ ರಾಜಕೀಯವಾಗಿ, ಆರ್ಥಿಕವಾಗಿ ಪ್ರಬಲರಾಗಿರುವವರ ಪಾಲಾಗುತ್ತಿವೆ. ಹಣ ಕೊಟ್ಟು ಪ್ರಶಸ್ತಿ ಹಾಗೂ ಡಾಕ್ಟರೇಟ್ ಪದವಿಗಳನ್ನು ಪಡೆದುಕೊಳ್ಳುತ್ತಿದ್ದು, ಕೇವಲ ಮಾರಾಟದ ಸರಕುಗಳಾಗಿರುವುದು ವಿಷಾದದ ಸಂಗತಿ ಎಂದರು.

ಪ್ರಶಸ್ತಿಗಳು ಪಾರದರ್ಶಕವಾಗಿರಬೇಕು. ಇವರು ಯಾವ ಸಾಧನೆ ಮಾಡಿ ಪ್ರಶಸ್ತಿ ಪಡೆದುಕೊಂಡರೊ ಎಂದು ಟೀಕಿಸುವಂತೆ ಇರಬಾರದು. ಜೆ.ಎಚ್. ಪಟೇಲ್ ಪ್ರಶಸ್ತಿ ಪಡೆದುಕೊಂಡಿರುವುದು ನನ್ನ ಇಡೀ ಜೀವನದ ಸಾಧನೆ. ಏಕೆಂದರೆ ಬಸವ ಕಲ್ಯಾಣ, ಕೂಡಲ ಸಂಗಮ ಸೇರಿ ಬಸವಣ್ಣನ ‌ಕ್ಷೇತ್ರಗಳನ್ನು ಪವಿತ್ರ ಕ್ಷೇತ್ರಗಳನ್ನಾಗಿ ಮಾಡಲು ಅನುದಾನ ಬಿಡುಗಡೆ ಮಾಡಿದ ರಾಜ್ಯದ ಮೊದಲ ಮುಖ್ಯಮಂತ್ರಿ ಜೆ.ಎಚ್‌. ಪಟೇಲ್ ಎಂದು ಶ್ಲಾಘಿಸಿದರು.

ಭಾಲ್ಕಿ ಸಿದ್ದರಾಮೇಶ್ವರ ಮಠದ ಸಿದ್ದರಾಮೇಶ್ವರ ಪಟ್ಟದೇವರು, ಜೆ.ಎಚ್‌.ಪಟೇಲ್‌ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಡಾ.ಎಚ್. ವಿಶ್ವನಾಥ್, ಕಾಲೇಜು ನಿರ್ದೇಶಕರಾದ ಎಂ. ಗುರುಸಿದ್ದಸ್ವಾಮಿ, ಕಲಿವೀರ ಕಳ್ಳೀಮನಿ, ನಿವೃತ್ತ ಶಿಕ್ಷಣ ಸಂಯೋಜಕ ಎ.ಎಚ್‌. ವಿವೇಕಾನಂದಸ್ವಾಮಿ, ಎಂ.ಸಿ.ಸಿ. ಯೂತ್ ಕ್ಲಬ್‌ ಅಧ್ಯಕ್ಷ ಆರ್.ಬಿ. ಹನುಮಂತಪ್ಪ, ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಎನ್‌.ಉಮೇಶ್‌ಬಾಬು, ಪರಿಸರ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಗಿರೀಶ್‌ ದೇವರಮನೆ. ಕಾಲೇಜಿನ ಪ್ರಾಂಶುಪಾಲ ಪ್ರತಿಭಾ ಪಿ.ದೊಗ್ಗಳ್ಳಿ ಪಾಲ್ಗೊಂಡಿದ್ದರು. ಕಾರ್ಯದರ್ಶಿ ದೊಗ್ಗಳ್ಳಿಗೌಡ್ರು ಪುಟ್ಟರಾಜು ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.