
ರಾಮೇಶ್ವರ (ನ್ಯಾಮತಿ): ತಾಲ್ಲೂಕಿನ ತೀರ್ಥರಾಮೇಶ್ವರ ಪುಣ್ಯಕ್ಷೇತ್ರದಲ್ಲಿ ಮಂಗಳವಾರ ಮಹೇಶ್ವರ ಜಾತ್ರೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ರಾಮೇಶ್ವರ ಗ್ರಾಮದ ಪುರುಷರಷ್ಟೇ ಆಚರಿಸುವುದು ಈ ಜಾತ್ರೆಯ ಸಂಪ್ರದಾಯ.
ಗ್ರಾಮ ದೇವತೆಗಳಾದ ಮಲ್ಲಿಕಾರ್ಜುನ ಸ್ವಾಮಿ, ಕುಮಾರರಾಮ ಸ್ವಾಮಿ, ಚಿಕ್ಕಡಮ್ಮದೇವಿ ಉತ್ಸವ ಮೂರ್ತಿಗಳೊಂದಿಗೆ ಸೋಮವಾರ ತೀರ್ಥರಾಮೇಶ್ವರಕ್ಕೆ ತೆರಳಿ ಅಲ್ಲಿಯೇ ಪೂಜಾ ಮಂಟಪವನ್ನು ನಿರ್ಮಿಸಿ, ದೇವರ ಮೂರ್ತಿಗಳನ್ನು ಪ್ರತಷ್ಠಾಪಿಸಲಾಯಿತು. ಮುಂಜಾನೆ ಪವಿತ್ರಗಂಗೆ ಪೂಜೆ ನಂತರ ಅಭಿಷೇಕ, ಮಂಗಳಾರತಿ ಪೂಜಾ ಕಾರ್ಯಕ್ರಮ ನಡೆಸಲಾಯಿತು.
ಈ ಸಮಯದಲ್ಲಿ ಮಹಿಳೆಯರಿಗೆ ಪ್ರವೇಶವಿರುವುದಿಲ್ಲ. ಪುರುಷರೇ ಅಕ್ಕಿಯಿಂದ ತಯಾರಿಸಿದ ಕಿಚಡಿಗೆ (ಅನ್ನ) ಬೆಲ್ಲ, ಬಾಳೆಹಣ್ಣು, ತುಪ್ಪ, ಬೆರೆಸಿದ ಎಡೆಯನ್ನು ತಯಾರಿಸಿ ಸ್ವಾಮಿಗೆ ನೈವೇದ್ಯ ಮಾಡುತ್ತಾರೆ. ನಂತರ ಸಾಮೂಹಿಕ ಪ್ರಸಾದ ವಿತರಣೆ ನಡೆಯುತ್ತದೆ. ಹರಕೆ ಹೊತ್ತ ಸುತ್ತಮುತ್ತಲ ಗ್ರಾಮಸ್ಥರು ಮೀಸಲು ಹಾಲು, ತುಪ್ಪ, ಬಾಳೆಹಣ್ಣು, ಬೆಲ್ಲ ತಂದು ಅರ್ಪಿಸುವ ಮೂಲಕ ಹರಕೆ ತೀರಿಸುತ್ತಾರೆ.
‘ಬುಧವಾರ ಸಂಜೆ ಗ್ರಾಮದೇವತೆಗಳು ಗ್ರಾಮಕ್ಕೆ ಮರಳಿದ ನಂತರ, ಗ್ರಾಮದ ಪುರುಷರಿಗಷ್ಟೇ ಕಿಚಡಿ, ಹಾಲು, ತುಪ್ಪ, ಬಾಳೆಹಣ್ಣು ಪ್ರಸಾದ ವಿತರಣೆ ನಡೆಯುತ್ತದೆ. ಈ ಸಮಯದಲ್ಲಿ ಮಹಿಳೆಯರು ಅತ್ತ ಸುಳಿಯುವಂತಿಲ್ಲ. ಇದು ನಮ್ಮ ಹಿರಿಯರ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ’ ಎಂದು ಗ್ರಾಮದ ಹಿರಿಯರಾದ ಗೊರೋಳ ನಾಗರಾಜಪ್ಪ, ನವೀನ, ಸತೀಶ, ಮಲ್ಲೇಶಪ್ಪ, ತೀರ್ಥಲಿಂಗಪ್ಪ ಹೇಳುತ್ತಾರೆ.
ತಾಲ್ಲೂಕಿನ ಬಿಜೋಗಟ್ಟೆ, ಕೆಂಚಿಕೊಪ್ಪ, ಸೂರಗೊಂಡನಕೊಪ್ಪ ಗ್ರಾಮಗಳಲ್ಲೂ ಮಂಗಳವಾರದಿಂದ ಮಹೇಶ್ವರ ಜಾತ್ರೆಗೆ ಚಾಲನೆ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.