
ಚನ್ನಗಿರಿ: ತಾಲ್ಲೂಕಿನ ಚಿಕ್ಕೂಲಿಕೆರೆ ಗ್ರಾಮದಲ್ಲಿ ಮಂಗಳವಾರ ಮಹೇಶ್ವರ ಸ್ವಾಮಿ ಜಾತ್ರೆ ಅದ್ದೂರಿಯಾಗಿ ಆರಂಭಗೊಂಡಿದ್ದು, ಡಿ. 19ರವರೆಗೆ ನಡೆಯಲಿದೆ.
ಮಂಗಳವಾರ ಬೆಳಿಗ್ಗೆ 7ಕ್ಕೆ ಗ್ರಾಮದ ಶಿವಲಿಂಗಪ್ಪ ಅವರ ಮನೆಯಿಂದ ಹೊರಟ ಮಹೇಶ್ವರ ದೇವರ ಉತ್ಸವ 9 ಗಂಟೆಗೆ ನಿಜಲಿಂಗಪ್ಪ ಅವರ ತೋಟಕ್ಕೆ ತಲುಪಿ ಅಲ್ಲಿ ನಿರ್ಮಿಸಿದ ಬಾಳೆ ದಿಂಡಿನ ಚಪ್ಪರದಲ್ಲಿ ಪ್ರತಿಷ್ಠಾಪಿಸಲಾಯಿತು.
ಉತ್ಸವ ಆರಂಭಕ್ಕೆ ಪಾಂಡೋಮಟ್ಟಿ ವಿರಕ್ತ ಮಠದ ಗುರುಬಸವ ಸ್ವಾಮೀಜಿ ಚಾಲನೆ ನೀಡಿ ಉತ್ಸವದ ಮೆರವಣಿಗೆಯಲ್ಲಿ ಭಾಗಿಯಾದರು. ನಂತರ ಗ್ರಾಮಸ್ಥರು ಮಹೇಶ್ವರ ದೇವರಿಗೆ ಪೂಜೆ ಸಲ್ಲಿಸಿದರು.
ನಂತರ ತೋಟದಲ್ಲಿ ಬೆಲ್ಲ, ಬಾಳೆಹಣ್ಣು, ತುಪ್ಪ, ಹಾಲನ್ನು ಅನ್ನದೊಂದಿಗೆ ಮಿಶ್ರಣ ಮಾಡಿ ಪ್ರಸಾದ ವಿತರಿಸಲಾಯಿತು. ಮಂಗಳವಾರದಿಂದ ಶುಕ್ರವಾರದವರೆಗೂ ಪ್ರಸಾದ ವಿತರಿಸಲಾಗುತ್ತದೆ. ಈ ಜಾತ್ರೆಗೆ ತಾಲ್ಲೂಕಿನ ಹತ್ತಾರು ಗ್ರಾಮಗಳಿಂದ ಭಕ್ತರು ಬಂದು ದೇವರ ದರ್ಶನ ಪಡೆದುಕೊಂಡು ಪ್ರಸಾದವನ್ನು ಸೇವಿಸುವುದು ವಿಶೇಷ. ಜಾತ್ರೆಗೆ ಗ್ರಾಮದ ಎಲ್ಲ ಕುಟುಂಬಗಳ ಪುರುಷರು ಕಡ್ಡಾಯವಾಗಿ ಭಾಗವಹಿಸುತ್ತಾರೆ. 60 ವರ್ಷಗಳಿಂದ ನಿರಂತರವಾಗಿ ಜಾತ್ರೆ ನಡೆದುಕೊಂಡು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.