ADVERTISEMENT

ಹರಪನಹಳ್ಳಿಯಲ್ಲೇ ಉಪವಿಭಾಗ ಉಳಿಸಲು ಸರ್ಕಾರದ ತೀರ್ಮಾನ ಮರುಪರಿಶೀಲಿಸಿ: ಸಿದ್ದೇಶ್ವರ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2018, 13:34 IST
Last Updated 20 ಅಕ್ಟೋಬರ್ 2018, 13:34 IST
ಜಿ.ಎಂ. ಸಿದ್ದೇಶ್ವರ
ಜಿ.ಎಂ. ಸಿದ್ದೇಶ್ವರ   

ದಾವಣಗೆರೆ: ಹರಪನಹಳ್ಳಿ ಉಪವಿಭಾಗಾಧಿಕಾರಿ ಕಚೇರಿಯನ್ನು ಮರುವಿನ್ಯಾಸಗೊಳಿಸುವ ತೀರ್ಮಾನವನ್ನು ಮರುಪರಿಶೀಲಿಸಿ, ಹರಪನಹಳ್ಳಿಯಲ್ಲಿಯೇ ಉಪವಿಭಾಗಾಧಿಕಾರಿ ಕಚೇರಿಯನ್ನು ಮುಂದುರಿಸಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಅವರು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

‘ಹರಪನಹಳ್ಳಿಯ ಉಪವಿಭಾಗಾಧಿಕಾರಿ ಕಚೇರಿಯನ್ನು ಅಕ್ಟೋಬರ್‌ 15ರಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಆದೇಶದಂತೆ ಮರುವಿನ್ಯಾಸಗೊಳಿಸಿ ಹರಪನಹಳ್ಳಿ ಉಪವಿಭಾಗದಲ್ಲಿದ್ದ ಹರಪನಹಳ್ಳಿಯನ್ನು ಹೊಸಪೇಟೆ ಉಪವಿಭಾಗಕ್ಕೆ ಹಾಗೂ ಜಗಳೂರನ್ನು ದಾವಣಗೆರೆ ಉಪವಿಭಾಗಕ್ಕೆ ಸೇರಿಸಲು ತೀರ್ಮಾನಿಸಲಾಗಿದೆ ಎಂಬ ಅಂಶ ಗೊತ್ತಾಗಿದೆ. ಆದರೆ, ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಎಚ್‌. ಪಟೇಲರ ದೂರದೃಷ್ಟಿಯಿಂದ 1997ರಲ್ಲಿ ದಾವಣಗೆಗೆ ಜಿಲ್ಲೆಯಾದಾಗಿನಿಂದಲೂ ಹರಪನಹಳ್ಳಿ ಉಪವಿಭಾಗವಾಗಿ ಕಾರ್ಯನಿರ್ವಹಿಸುತ್ತ ಬಂದಿದೆ. ನಾಲ್ಕು ಹೋಬಳಿಗಳನ್ನು ಹೊಂದಿರುವ ಈ ತಾಲ್ಲೂಕನ್ನು ನಂಜುಂಡಪ್ಪ ವರದಿ ಪ್ರಕಾರ ಅತ್ಯಂತ ಹಿಂದುಳಿದ ತಾಲ್ಲೂಕು ಎಂದು ಗುರುತಿಸಲಾಗಿದೆ. ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಅತ್ಯಂತ ಹಿಂದುಳಿದ ತಾಲ್ಲೂಕಿನಲ್ಲಿರುವ ಯಾವುದೇ ಸರ್ಕಾರಿ ಕಚೇರಿಗಳನ್ನು ಸ್ಥಳಾಂತರಿಸುವುದು ಅವೈಜ್ಞಾನಿಕ ಎಂಬುದು ನನ್ನ ಭಾವನೆ. ಇಲ್ಲಿನ ಸರ್ಕಾರಿ ಕಚೇರಿಗಳನ್ನು ಸಬಲೀಕರಣಗೊಳಿಸುವತ್ತ ಸರ್ಕಾರ ಗಮನ ಹರಿಸಬೇಕೆ ಹೊರತು, ಸ್ಥಳಾಂತರ ಮಾಡುವುದು ಸಮಂಜಸವಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹರಪನಹಳ್ಳಿಯಿಂದ ಹೊಸಪೇಟೆ 80 ಕಿ.ಮೀ ದೂರದಲ್ಲಿದೆ. ಹರಪನಹಳ್ಳಿ ತಾಲ್ಲೂಕು ಕೇಂದ್ರದಿಂದ 40ರಿಂದ 50 ಕಿ.ಮೀ ದೂರವಿರುವ ಗ್ರಾಮಗಳ ಜನರು ಹೊಸಪೇಟೆಗೆ ಹೋಗಲು ನೂರಕ್ಕೂ ಹೆಚ್ಚು ಕಿ.ಮೀ. ಕ್ರಮಿಸಬೇಕು. ತಾಲ್ಲೂಕಿನ ಜನರಿಗೆ ಆರ್ಥಿಕವಾಗಿ ಭಾರಿ ಹೊರೆಯಾದಂತಾಗಲಿದೆ ಎಂದು ಸಂಸದರು ತಿಳಿಸಿದ್ದಾರೆ.

ADVERTISEMENT

ಒಂದು ಕಡೆ ‘371 ಜೆ’ ಕಲಂ ಅಡಿ ಸವಲತ್ತು ನೀಡುವ ನಿರ್ಧಾರ ಕೈಗೊಂಡು, ಇನ್ನೊಂದು ಕಡೆ ಸರ್ಕಾರಿ ಕಚೇರಿಗಳನ್ನು ಸ್ಥಳಾಂತರಿಸಿ ಸಾರ್ವಜನಿಕರಿಗೆ ಆರ್ಥಿಕ ಹೊರೆ ಹೆಚ್ಚಿಸುವುದು ಯಾವ ನ್ಯಾಯ?

‘371 ಜೆ’ ಕಲಂ ಸೌಲಭ್ಯ ಪಡೆಯಲು ತಾಲ್ಲೂಕಿನ ಜನ ಈಗಾಗಲೇ ನಿರಂತರ ಹೋರಾಟ ಮಾಡಿದ್ದಾರೆ. ಈಗ ಪುನಃ ಉಪವಿಭಾಗವನ್ನು ಹರಪನಹಳ್ಳಿಯಲ್ಲಿಯೇ ಉಳಿಸಿಕೊಳ್ಳಲು ಮತ್ತೊಂದು ಸುತ್ತಿನ ಹೋರಾಟ ಮಾಡಲು ಸಾರ್ವಜನಿಕರು, ಸಂಘ-ಸಂಸ್ಥೆಗಳ ಮತ್ತು ಮಠಾಧೀಶರ ಕೈಗೆ ಸರ್ಕಾರವೇ ಶಸ್ತ್ರ ನೀಡಿದಂತಾಗಿದೆ. ಹೀಗಾಗಿ ತೀರ್ಮಾನವನ್ನು ಮರುಪರಿಶೀಲಿಸಿ ಹರಪನಹಳ್ಳಿಯಲ್ಲಿಯೇ ಉಪವಿಭಾಗವನ್ನು ಮುಂದುರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.