ADVERTISEMENT

ಮೆಕ್ಕೆಜೋಳ: ಬೆಳೆಗಾರರಿಗೆ ದೊರೆಯದ ಮಾರುಕಟ್ಟೆ ಮಧ್ಯಪ್ರವೇಶ ದರ

ರಾಮಮೂರ್ತಿ ಪಿ.
Published 17 ಜನವರಿ 2026, 1:32 IST
Last Updated 17 ಜನವರಿ 2026, 1:32 IST
ದಾವಣಗೆರೆ ಎಪಿಎಂಸಿಯಲ್ಲಿ ಮೆಕ್ಕೆಜೋಳ ತೂಕಮಾಡಿ ಚೀಲಕ್ಕೆ ತುಂಬುತ್ತಿರುವ ಕಾರ್ಮಿಕರು 
ದಾವಣಗೆರೆ ಎಪಿಎಂಸಿಯಲ್ಲಿ ಮೆಕ್ಕೆಜೋಳ ತೂಕಮಾಡಿ ಚೀಲಕ್ಕೆ ತುಂಬುತ್ತಿರುವ ಕಾರ್ಮಿಕರು    

ದಾವಣಗೆರೆ: ರಾಜ್ಯದ ಆಯ್ದ ಎಪಿಎಂಸಿಗಳಲ್ಲಿ ಜನವರಿ 9ರಿಂದ ಮಾರುಕಟ್ಟೆ ಮಧ್ಯಪ್ರವೇಶ ದರ (ಎಂಐಪಿ) ಯೋಜನೆಯಡಿ ರೈತರಿಂದ ಮೆಕ್ಕೆಜೋಳ ಖರೀದಿಸಲಾಗುತ್ತಿದೆ. ಆದರೆ, ಕಡಿಮೆ ದರಕ್ಕೆ ಈಗಾಗಲೇ ಮೆಕ್ಕೆಜೋಳ ಮಾರಾಟ ಮಾಡಿರುವ ರೈತರಿಗೆ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.

ಮಾರುಕಟ್ಟೆಯಲ್ಲಿ ಕಡಿಮೆ ದರಕ್ಕೆ ಮೆಕ್ಕೆಜೋಳ ಮಾರಾಟವಾಗುತ್ತಿರುವ ಕಾರಣಕ್ಕೆ ಬೆಳೆಗಾರರಿಗೆ ಆಗುತ್ತಿರುವ ಆರ್ಥಿಕ ನಷ್ಟವನ್ನು ತಪ್ಪಿಸಲು ರಾಜ್ಯ ಸರ್ಕಾರ 2025–26ನೇ ಮುಂಗಾರು ಹಂಗಾಮಿಗೆ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯಡಿ ಮೆಕ್ಕೆಜೋಳ ಖರೀದಿಗೆ ಜ.4ರಂದು ಆದೇಶಿಸಿದೆ. ವಿಳಂಬವಾಗಿದ್ದರಿಂದ ಬಹುತೇಕ ರೈತರಿಗೆ ಅನುಕೂಲ ಆಗಿಲ್ಲ ಎಂದು ರೈತರು ಹೇಳಿದ್ದಾರೆ.

ಮೆಕ್ಕೆಜೋಳದ ಉತ್ಪಾದನೆಯ ಆಧಾರದ ಮೇಲೆ ರಾಜ್ಯದ ಹಾವೇರಿ, ವಿಜಯನಗರ, ಗದಗ, ಬೆಳಗಾವಿ, ಕೊಪ್ಪಳ, ವಿಜಯಪುರ, ಹಾಸನ, ದಾವಣಗೆರೆ, ಚಿತ್ರದುರ್ಗ, ಬಾಗಲಕೋಟೆ ಹಾಗೂ ಧಾರವಾಡ ಜಿಲ್ಲೆಗಳ ಎಪಿಎಂಸಿಗಳಲ್ಲಿ ಮಾರುಕಟ್ಟೆ ಮಧ್ಯಪ್ರವೇಶ ದರ ಯೋಜನೆಯಡಿ ಒಟ್ಟು 40 ಲಕ್ಷ ಕ್ವಿಂಟಲ್‌ ಮೆಕ್ಕೆಜೋಳ ಖರೀದಿಗೆ ಸರ್ಕಾರ ಮುಂದಾಗಿದ್ದು, ಸಮರ್ಪಕವಾಗಿ ಪ್ರಚಾರವನ್ನೂ ನೀಡಲಾಗಿಲ್ಲ ಎಂದೂ ರೈತರು ದೂರಿದ್ದಾರೆ.

ADVERTISEMENT

ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ ₹2,150ಕ್ಕಿಂತ ಕಡಿಮೆ ಬೆಲೆಗೆ ಮೆಕ್ಕೆಜೋಳ ಮಾರಾಟವಾದಲ್ಲಿ ಮಾತ್ರ ವ್ಯತ್ಯಾಸದ ಮೊತ್ತವನ್ನು ಸರ್ಕಾರ ಪಾವತಿಸಲಿದೆ. ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಯೋಜನೆಯ ಪ್ರತಿಫಲ ಸಿಗದು. ರೈತರಿಂದ ಪ್ರತಿ ಎಕರೆಗೆ 12 ಕ್ವಿಂಟಲ್‌ಗಳಂತೆ ಗರಿಷ್ಠ 50 ಕ್ವಿಂಟಲ್‌ಗೆ ಮಾತ್ರ ವ್ಯತ್ಯಾಸದ ದರವನ್ನು ಪರಿಗಣಿಸಲಾಗುತ್ತಿದೆ.

ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ₹1,950ರಂತೆ ಮಾರಾಟವಾದರೆ ಬೆಳೆಗಾರರಿಗೆ ₹200 ದೊರೆಯಲಿದೆ. ₹2,000ರಂತೆ ಮಾರಾಟವಾದರೆ ₹150 ದೊರೆಯಲಿದೆ. ಇದೇ ಮಾದರಿಯಲ್ಲಿ ಬೆಳೆಗಾರರಿಗೆ ಕನಿಷ್ಠ ದರ ₹2,150 ದೊರೆಯಲಿದೆ.

ರಾಜ್ಯದಲ್ಲಿ 2025–26ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಒಟ್ಟು 17.64 ಲಕ್ಷ ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬೆಳೆದಿದ್ದು, 53.80 ಲಕ್ಷ ಟನ್‌ ಉತ್ಪಾದನೆ ನಿರೀಕ್ಷಿಸಲಾಗಿತ್ತು ಎಂದು ಕೃಷಿ ಇಲಾಖೆ ತಿಳಿಸಿದೆ.

ದಾವಣಗೆರೆಯ ಎಪಿಎಂಸಿಯಲ್ಲಿ ಜ.16ರವರೆಗೆ 157 ರೈತರು ಯೋಜನೆಯಡಿ ನೋಂದಾಯಿಸಿದ್ದು, ಒಟ್ಟು 2,591 ಕ್ವಿಂಟಲ್‌ ಮೆಕ್ಕೆಜೋಳದ ಟೆಂಡರ್‌ (ಖರೀದಿ) ಮುಗಿದಿದೆ. ಇಲ್ಲಿನ ಎಪಿಎಂಸಿಯಲ್ಲಿ ಶುಕ್ರವಾರ ಮೆಕ್ಕೆಜೋಳ ಕ್ವಿಂಟಲ್‌ಗೆ ಕನಿಷ್ಠ ₹1,849, ಗರಿಷ್ಠ ₹1,969, ಸರಾಸರಿ ₹1,918 ರಂತೆ ಮಾರಾಟವಾಯಿತು. 

‘ದಾವಣಗೆರೆ, ಚನ್ನಗಿರಿ, ಹರಿಹರ, ಹೊನ್ನಾಳಿ ಮತ್ತು ಜಗಳೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಂದ ಎಂಐಪಿ ಅನುಷ್ಠಾನಗೊಳಿಸಲಾಗಿದ್ದರೂ ಉತ್ತಮ ದರದ ನಿರೀಕ್ಷೆಯಲ್ಲಿರುವ ಬೆಳೆಗಾರರಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ’ ಎಂದೂ ರೈತ ಮುಖಂಡ ಕೊಳೇನಹಳ್ಳಿ ಬಿ.ಎಂ.ಸತೀಶ್ ತಿಳಿಸಿದ್ದಾರೆ.

ನೋಂದಣಿ ಹೇಗೆ?: 

ರೈತರು ಫ್ರೂಟ್‌ ಐಡಿ, ಆಧಾರ್ ಕಾರ್ಡ್‌, ಪಹಣಿ ಹಾಗೂ ಬ್ಯಾಂಕ್ ಪಾಸ್‌ಬುಕ್ ಪ್ರತಿ ನೀಡಿ ಸಮೀಪದ ಎಪಿಎಂಸಿಗಳಲ್ಲಿ ಯೋಜನೆಗೆ ಹೆಸರು ನೋಂದಾಯಿಸಬಹುದು. ಮೆಕ್ಕೆಜೋಳ ಮಾರಾಟವಾದ ಬಳಿಕ ರಸೀದಿ, ರೈತರ ಪಟ್ಟಿ, ತೂಕದ ಪಟ್ಟಿ, ಗ್ರೇಡರ್ ಸರ್ಟಿಫಿಕೇಟ್, ಆಧಾರ್ ಕಾರ್ಡ್‌, ಪಹಣಿ ಹಾಗೂ ವ್ಯಾಪಾರದ ಬಿಲ್ ಪ್ರತಿಯನ್ನು ಆಡಳಿತ ಕಚೇರಿಯ ಈ ಟೆಂಡರ್‌ ಕೊಠಡಿಯಲ್ಲಿ ಸಲ್ಲಿಸಬೇಕು.

ಮೆಕ್ಕೆಜೋಳ ಖರೀದಿಸಿದ ವ್ಯಾಪಾರಿಗಳು ರೈತರಿಗೆ ಅಂದೇ ಹಣ ಪಾವತಿಸಿದರೆ, ಸರ್ಕಾರ ನೀಡುವ ಮಾರುಕಟ್ಟೆ ಮಧ್ಯಪ್ರವೇಶ ದರದ ಮೊತ್ತವು ಕೆಲ ದಿನಗಳ ಬಳಿಕ ನೇರ ಪಾವತಿ ಮೂಲಕ ದೊರೆಯಲಿದೆ ಎಂದು ಎಪಿಎಂಸಿಯ ಸಹಾಯಕ ಕಾರ್ಯದರ್ಶಿ ಗಿರೀಶ ನಾಯ್ಕ ತಿಳಿಸಿದರು.

ಜಿಲ್ಲೆಯಲ್ಲಿ ಅರ್ಧದಷ್ಟು ರೈತರು ಈಗಾಗಲೇ ಮೆಕ್ಕೆಜೋಳ ಮಾರಾಟ ಮಾಡಿದ್ದಾರೆ. ರಸೀದಿ ಎಪಿಎಂಸಿ ದಾಖಲೆ ಆಧರಿಸಿ ಈಗಾಗಲೇ ಮಾರಾಟ ಮಾಡಿದ ರೈತರಿಗೂ ಸರ್ಕಾರ ಮಾರುಕಟ್ಟೆ ಮಧ್ಯಪ್ರವೇಶ ದರ ಪಾವತಿಸಲಿ
ಕೊಳೇನಹಳ್ಳಿ ಬಿ.ಎಂ.ಸತೀಶ್ ರೈತ ಮುಖಂಡ

‘ಮೊದಲೇ ಮಾರಾಟ ಮಾಡಿದ ರೈತರಿಗೆ ಅನ್ಯಾಯ’

‘ಜಿಲ್ಲೆಯಲ್ಲಿ ಸಣ್ಣ ಅತಿಸಣ್ಣ ರೈತರು ಕ್ವಿಂಟಲ್‌ಗೆ ₹1500 ರಿಂದ ₹1700ರಂತೆ ಮೆಕ್ಕೆಜೋಳ ಮಾರಾಟ ಮಾಡಿದ್ದಾರೆ. ಕಡಿಮೆ ದರಕ್ಕೆ ಉತ್ಪನ್ನ ಮಾರಾಟ ಮಾಡಿದ ರೈತರ ಬಗ್ಗೆ ಸರ್ಕಾರದ ಆದೇಶದಲ್ಲಿ ಉಲ್ಲೇಖವೇ ಇಲ್ಲ’ ಎಂದು ರೈತ ಮುಖಂಡ ಹುಚ್ಚವ್ವನಳ್ಳಿ ಮಂಜುನಾಥ್ ಬೇಸರಿಸಿದರು. ‘ಜಿಲ್ಲೆಯಲ್ಲಿ 128647 ಹೆಕ್ಟೇರ್‌ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿತ್ತು. 643235 ಟನ್ ಇಳುವರಿ ನಿರೀಕ್ಷಿಸಲಾಗಿತ್ತು. ಈಗಾಗಲೇ ಮೆಕ್ಕೆಜೋಳ ಮಾರಾಟ ಮಾಡಿದ ರೈತರಿಗೆ ಸರ್ಕಾರದ ನಡೆಯಿಂದ ಅನ್ಯಾಯವಾಗಲಿದೆ’ ಎಂದರು. ‘ಸಾಲ ಮಾಡಿ ಬೆಳೆ ಬೆಳೆದ ರೈತರು ಕಟಾವಿನ ಬಳಿಕ ಹೆಚ್ಚು ದಿನ ಉತ್ಪನ್ನ ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮೊದಲೇ ಮಾರಾಟ ಮಾಡಿರುವ ರೈತರಿಗೆ ಅಗತ್ಯ ದಾಖಲೆ ಪಡೆದು ಪರಿಹಾರ ನೀಡಲಿ’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.