ADVERTISEMENT

ಮೆಕ್ಕೆಜೋಳ ಬೆಳೆಗೆ ಲದ್ದಿಹುಳುಗಳ ಹಾವಳಿ

ಬರದಿಂದ ಚೇತರಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದ ರೈತರಿಗೆ ಕಂಟಕ

ಪ್ರಜಾವಾಣಿ ವಿಶೇಷ
Published 31 ಜುಲೈ 2024, 6:04 IST
Last Updated 31 ಜುಲೈ 2024, 6:04 IST
ಜಗಳೂರು ತಾಲ್ಲೂಕಿನ ಗೊಲ್ಲರಹಟ್ಟಿ ಗ್ರಾಮದಲ್ಲಿ ಲದ್ದಿಹುಳುಗಳು ಮೆಕ್ಕೆಜೋಳ ಸಸಿಯ ಎಲೆ ಮತ್ತು ಸುಳಿಯನ್ನು ಕೊರೆದು ತಿಂದಿರುವುದು
ಜಗಳೂರು ತಾಲ್ಲೂಕಿನ ಗೊಲ್ಲರಹಟ್ಟಿ ಗ್ರಾಮದಲ್ಲಿ ಲದ್ದಿಹುಳುಗಳು ಮೆಕ್ಕೆಜೋಳ ಸಸಿಯ ಎಲೆ ಮತ್ತು ಸುಳಿಯನ್ನು ಕೊರೆದು ತಿಂದಿರುವುದು   

ಜಗಳೂರು: ಜಿಲ್ಲೆಯಲ್ಲೇ ಅತಿಹೆಚ್ಚು ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯುವ ಪ್ರದೇಶದ ಎಂಬ ಖ್ಯಾತಿ ಹೊಂದಿರುವ ಜಗಳೂರಿನ ಮೆಕ್ಕೆಜೋಳ ಬೆಳೆದ ರೈತರು ಲದ್ದಿಹುಳುಗಳ ಹಾವಳಿಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ತಾಲ್ಲೂಕಿನಲ್ಲಿ ಈ ಬಾರಿ ಉತ್ತಮ ಮುಂಗಾರು ಸುರಿದ ಕಾರಣ ಎಲ್ಲೆಡೆ ಮೆಕ್ಕೆಜೋಳ ಬೆಳೆ ನಳನಳಿಸುತ್ತಿದೆ. ಕಳೆದ ವರ್ಷ ತೀವ್ರ ಬರಗಾಲದಿಂದ ಹೈರಾಣಾಗಿದ್ದ ರೈತರು ಈ ಬಾರಿ ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದರು. ಇದೀಗ ರೋಗ ಬಾಧೆಯಿಂದ ಇಳುವರಿ ಕುಸಿದು ನಷ್ಟ ನುಭವಿಸುವ ಆತಂಕದಲ್ಲಿದ್ದಾರೆ.

ಈ ಮುಂಗಾರು ಹಂಗಾಮಿನಲ್ಲಿ 35,000 ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಕಸಬಾ ಹೋಬಳಿಯಲ್ಲಿ ಲದ್ದಿಹುಳು ಕಾಟ ವ್ಯಾಪಕವಾಗಿದೆ. ಸೊಕ್ಕೆ ಮತ್ತು ಬಿಳಿಚೋಡು ಹೋಬಳಿ ವ್ಯಾಪ್ತಿಯಲ್ಲಿ ಸ್ವಲ್ಪ ಕಡಿಮೆ ಇದೆ. ಕಸಬಾ ಹೋಬಳಿಯ ಉದ್ದಗಟ್ಟ, ಜಗಳೂರು ಗೊಲ್ಲರಹಟ್ಟಿ, ಭರಮಸಮುದ್ರ, ದೊಣೆಹಳ್ಳಿ ಹಾಗೂ ತೊರೆಸಾಲು ಪ್ರದೇಶದ ಹಿರೇಮಲ್ಲನಹೊಳೆ, ಮುಸ್ಟೂರು, ಸಿದ್ದಿಹಳ್ಳಿ ಪ್ರದೇಶದಲ್ಲಿ ಹುಳು ಹಾವಳಿ ಹೆಚ್ಚಿದೆ.

ADVERTISEMENT

‘ಬಿತ್ತನೆಯಾದಾಗಿನಿಂದ ಇದುವರೆಗೂ ನಿರಂತರವಾಗಿ ತುಂತುರು ಮಳೆಯಾಗುತ್ತಿದ್ದು, ಮೆಕ್ಕೆಜೋಳ ಸೊಂಪಾಗಿ ಬೆಳೆದಿದೆ. ಒಂದೆರೆಡು ವಾರಗಳಿಂದ ಅಲ್ಲಲ್ಲಿ ಕಾಣಸಿಕೊಂಡಿದ್ದ ಲದ್ದಿಹುಳು ಕಾಟ ಇತ್ತೀಚೆಗೆ ಇಡೀ ಹೊಲಕ್ಕೆ ಹರಡಿದೆ. ಸುಳಿಯನ್ನು ಕೊರೆದು ತಿನ್ನುವುದಲ್ಲದೇ ಹೊಸದಾಗಿ ಚಿಗುರುವ ಎಲೆಗಳನ್ನು ಹುಳುಗಳು ತಿಂದುಹಾಕುತ್ತವೆ. ರಾತ್ರಿ ಕಳೆದು ಬೆಳೆಗಾಗುವುದರೊಳಗೆ ಹೊಲದಿಂದ ಹೊಲಕ್ಕೆ ಹುಳುಬಾಧೆ ವ್ಯಾಪಕವಾಗಿ ಹರಡುತ್ತಿದ್ದು, ಆತಂಕ ಮೂಡಿಸಿದೆ’ ಎಂದು ಗೊಲ್ಲರಹಟ್ಟಿ ಗ್ರಾಮದ ರೈತ ವಿ. ವೆಂಕಟೇಶ್ ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.

‘ಕಳೆದ ವರ್ಷದ ತೀವ್ರ ಬರಗಾಲದ ಪರಿಣಾಮ ಸಾಕಷ್ಟು ನಷ್ಟವಾಗಿ ಸಾಲ ಮಾಡಿಕೊಂಡಿದ್ದೇವೆ. ಈ ಬಾರಿ ಒಂದಿಷ್ಟು ಒಳ್ಳೆಯ ಇಳುವರಿ ಬರಬಹುದು. ಸಾಲದ ಹೊರೆ ಸ್ವಲ್ಪ ಕಡಿಮೆಯಾಗಬಹುದು ಅಂದುಕೊಂಡರೆ ಹುಳುಬಾಧೆ ಕಾಡುತ್ತಿದೆ. ಔಷಧ ಸಿಂಪಡಿಸಿದರೂ ಸಂಪೂರ್ಣ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಬೀಜ, ಗೊಬ್ಬರ, ಬೇಸಾಯಕ್ಕಾಗಿ ಸಾಲ ಮಾಡಿ ಕೃಷಿ ಮಾಡಿದ್ದೇವೆ. ಏನು ಮಾಡಬೇಕೋ ತೋಚದಾಗಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ವಿ. ವೆಂಕಟೇಶ್

ಸುಳಿಗೆ ಕೀಟನಾಶಕ ಸಿಂಪಡಿಸಿ

ಲದ್ದಿಹುಳು ಮೆಕ್ಕೆಜೋಳದ ಸುಳಿಯಲ್ಲಿದ್ದುಕೊಂಡು ತೀವ್ರ ಗತಿಯಲ್ಲಿ ಸಸಿಯ ಎಲೆಗಳನ್ನು ತಿನ್ನುತ್ತಾ ಲದ್ದಿ ಹಾಕುತ್ತಾ ಸಾಗುತ್ತದೆ. ಮುಂದೆ ಕಾಳುಕಟ್ಟುವ ಹಂತದಲ್ಲಿ ಎಳೆಯ ತೆನೆಯನ್ನು ತಿನ್ನುತ್ತವೆ. ಇದರಿಂದ ಬೆಳವಣಿಗೆ ಕುಂಠಿತವಾಗುತ್ತದೆ. ಇಳುವರಿ ಪ್ರಮಾಣ ತೀವ್ರಗತಿಯಲ್ಲಿ ಕುಸಿಯುತ್ತದೆ. ಏಕಬೆಳೆ ಪದ್ಧತಿಯಿಂದ ಹುಳುಬಾಧೆ ಹೆಚ್ಚುತ್ತಿದ್ದು ರೈತರು ಎಚ್ಚೆತ್ತುಕೊಳ್ಳಬೇಕು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಿಥುನ್ ಕಿಮಾವತ್ ತಿಳಿಸಿದ್ದಾರೆ. ನಿರಂತರವಾಗಿ ಮಳೆ ಸುರಿದಲ್ಲಿ ಸುಳಿಯಲ್ಲಿ ಮಳೆ ನೀರು ಶೇಖರಣೆಗೊಂಡು ಹುಳು ಹಾವಳಿ ಕಡಿಮೆಯಾಗುತ್ತದೆ. ಮಳೆ ಕಡಿಮೆಯಾಗಿ ಬಿಸಿಲು ಹೆಚ್ಚಾದೊಡನೆ ಮತ್ತೆ ಹುಳುಗಳ ಕಾಟ ಜಾಸ್ತಿಯಾಗುವ ಸಂಭವ ಇರುತ್ತದೆ. ಪ್ರತಿ ಲೀಟರ್‌ ನೀರಿಗೆ ಇಮಾಮ್ಯಾಕ್ಟಿನ್ ಬೆಂಜೋಯೇಟ್ ಕೀಟನಾಶಕವನ್ನು 0.4 ಗ್ರಾಂ ಮತ್ತು ಆಲ್- 19 ಲಘು ಪೋಷಕಾಂಶವನ್ನು 3 ಗ್ರಾಂನಂತೆ ಏಕಕಾಲದಲ್ಲಿ ಸುಳಿಗೆ ನೇರವಾಗಿ ಸಿಂಪಡಿಸಬೇಕು. ಇದರಿಂದ ಹುಳು ಕಾಟ ಸಂಪೂರ್ಣ ನಿಯಂತ್ರಿಸಬಹುದು ಎಂದು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.