ADVERTISEMENT

ಮಲೇಬೆನ್ನೂರು ತರಾಸು ಜನ್ಮಸ್ಥಳ: 1920 ಏ. 21 ತರಾಸು ಜನ್ಮದಿನ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2019, 13:36 IST
Last Updated 21 ಏಪ್ರಿಲ್ 2019, 13:36 IST
ನವೀಕರಣಗೊಂಡ ಮಲೇಬೆನ್ನೂರಿನ ಜೋಯಿಸರ ಬೀದಿಯ ತರಾಸು ಹುಟ್ಟಿದ ಮನೆ
ನವೀಕರಣಗೊಂಡ ಮಲೇಬೆನ್ನೂರಿನ ಜೋಯಿಸರ ಬೀದಿಯ ತರಾಸು ಹುಟ್ಟಿದ ಮನೆ   

ಮಲೇಬೆನ್ನೂರು: ಖ್ಯಾತ ಕಾದಂಬರಿಕಾರಿ ತಳುಕಿನ ರಾಮರಾವ್ ಸುಬ್ಬರಾಯರು (ತರಾಸು) ಹುಟ್ಟಿದ್ದು ಮಲೇಬೆನ್ನೂರಿನ ಜೋಯಿಸರ ಬೀದಿಯ ಕಪ್ಪುಹಂಚಿನ ಮನೆಯಲ್ಲಿ.

ಇದು ಬಹುತೇಕರಿಗೆ ತಿಳಿದಿಲ್ಲ. 1920 ಏಪ್ರಿಲ್‌ 21 ತರಾಸು ಜನ್ಮದಿನ.

ಆಗ ಚಿತ್ರದುರ್ಗ ಜಿಲ್ಲೆಯ ಹರಿಹರ ತಾಲ್ಲೂಕಿಗೆ ಸೇರಿದ್ದ ಮಲೇಬೆನ್ನೂರಿನಲ್ಲಿ ಕಂದಾಯ ಇಲಾಖೆ ಅಮಲ್ದಾರರಾಗಿ ತರಾಸು ತಂದೆ ರಾಮರಾಯರು ಸೇವೆಯಲ್ಲಿದ್ದರು.

ADVERTISEMENT

ತಂದೆಗೆ 1920ರಲ್ಲಿ ಮಲೇಬೆನ್ನೂರಿಗೆ ವರ್ಗಾವಣೆ ಆಗಿತ್ತು. ಸಂಪ್ರದಾಯಸ್ಥ ಆಂಧ್ರಪ್ರದೇಶದ ಬ್ರಾಹ್ಮಣ ಮನೆತನದ ಕುಟುಂಬ ಮನೆ ಹುಡುಕಾಟದಲ್ಲಿತ್ತು. ಆಗಿನ ಕಾಲದಲ್ಲಿ ಮನೆ ಬಾಡಿಗೆ ನೀಡುವ ಸಂಪ್ರದಾಯ ಇರಲಿಲ್ಲ.

ಕಾಲಕರ್ಮ ಸಂಯೋಗ ಎಂಬಂತೆ ಗ್ರಾಮದ ಶಿಕ್ಷಕ ಕನ್ನಡ ಪಂಡಿತ ಹಂಚಿನಮನೆ ಕೃಷ್ಣಶಾಸ್ತ್ರಿ (ಇವರ ಪೂರ್ವಜರೂ ಆಂಧ್ರ ಪ್ರದೇಶದವರು. ವಿಜಯ ನಗರ ಸಂಸ್ಥಾನದಲ್ಲಿದ್ದರು) ಮೈಸೂರಿಗೆ ಶಿಕ್ಷಕರ ತರಬೇತಿ ಪಡೆಯಲು ಹೋಗಿದ್ದರು.

ಆಗ ಶಾಸ್ತ್ರಿಗಳ ಮನೆ ಮುಂಭಾಗ ಎರಡು ಕೊಠಡಿ ಖಾಲಿ ಇತ್ತು. ಅದರಲ್ಲಿ ಕೆಲ ತಿಂಗಳು ರಾಮರಾಯರು ವಾಸವಾಗಿದ್ದ ವೇಳೆ ತರಾಸು ಹುಟ್ಟಿದರು.

ಹುಟ್ಟಿದ ಊರು ಮಲೇಬೆನ್ನೂರಿಗೆ 1970ರಲ್ಲಿ ತರಾಸು ಒಮ್ಮೆ ಭೇಟಿ ನೀಡಿ ಹುಟ್ಟಿದ ಸ್ಥಳ ನೋಡಿ ಒಂದು ಲೋಟ ಹಾಲು ಕುಡಿದು ಹೋಗಿದ್ದರು ಎಂದು ಹಂಚಿನಮನೆಯ ನಿವೃತ್ತ ಶಿಕ್ಷಕ ಹಂಚಿನ ಮನೆ ದತ್ತಾತ್ರೇಯ ಶಾಸ್ತ್ರಿ ನೆನಪು ಬಿಚ್ಚಿಟ್ಟರು.

ಈಗ ಕಪ್ಪು ಹಂಚಿನಮನೆ ಕಟ್ಟಡ ನವೀಕರಣವಾಗಿದೆ. ಆರ್‌ಸಿಸಿ ಛಾವಣಿ ಎರಡು ರೂಮುಗಳ ಕಟ್ಟಡವಿದ್ದು, ಗಣಕಯಂತ್ರ ತರಬೇತಿ ಶಾಲೆ ನಡೆಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.