ADVERTISEMENT

ಸರ್ಕಾರದ ಅನುದಾನ ಪಡೆಯದೇ ನಿರ್ಮಾಣ: ಮಲೇಬೆನ್ನೂರಿಗೆ ಮೆರುಗು ತಂದ ಪೊಲೀಸ್‌ ಉದ್ಯಾನ

ಹಸಿರು ಹೊದಿಕೆಯಿಂದ ಕಂಗೊಳಿಸುತ್ತಿದೆ ಪಾರ್ಕ್‌

ಎಂ.ನಟರಾಜನ್
Published 25 ಜನವರಿ 2022, 3:17 IST
Last Updated 25 ಜನವರಿ 2022, 3:17 IST
ಮಲೇಬೆನ್ನೂರಿನಲ್ಲಿರುವ ಪೊಲೀಸ್ ಠಾಣೆಯ ಉದ್ಯಾನ.
ಮಲೇಬೆನ್ನೂರಿನಲ್ಲಿರುವ ಪೊಲೀಸ್ ಠಾಣೆಯ ಉದ್ಯಾನ.   

ಮಲೇಬೆನ್ನೂರು: ಖಾಕಿ ಖದರಿನ ನಡುವೆ ಹಸಿರು ಹೊದಿಕೆ ಹೊತ್ತ ಎರಡು ಉದ್ಯಾನಗಳು ಪಟ್ಟಣದ ಪೊಲೀಸ್ ಠಾಣೆಯ ಮೆರುಗು ಹಚ್ಚಿಸಿ ಜನಮನ ಸೆಳೆಯುತ್ತಿವೆ.

ಬಸವೇಶ್ವರ ದೇವಾಲಯದ ಜಮೀನಿನ ಬೃಹತ್ ಪ್ರದೇಶದಲ್ಲಿಯ ಪೊಲೀಸ್ ಠಾಣೆಯ ಪಕ್ಕದಲ್ಲಿ 5 ವರ್ಷಗಳ ಹಿಂದೆ ನಿರ್ಮಿಸಿದ ಉದ್ಯಾನ ವಿವಿಧ ಬಗೆಯ ಹೂಗಿಡಗಳು, ಅಶೋಕ ವೃಕ್ಷ, ನೆರಳೆ ಹಣ್ಣು, ಕಣಗಿಲೆ, ಗುಲಾಬಿ ಹೂವಿನ ಗಿಡಗಳು ಹಾಗೂ ಹಸಿರು ಹೊದಿಕೆ ಹೊದ್ದು ಕಂಗೊಳಿಸುತ್ತಿದೆ.

ಒಳಭಾಗದ ಗಣೇಶ ದೇವಾಲಯದ ಎದುರಿಗೆ ಎರಡು ವರ್ಷಗಳ ಹಿಂದೆ ನಿರ್ಮಿಸಿದ ಔಷಧ ಸಸ್ಯಗಳ ಉದ್ಯಾನ ಹಾಗೂ ಹೂದೋಟ ಪೊಲೀಸ್ ಠಾಣೆಗೆ ಮುಕುಟ ಪ್ರಾಯವಾಗಿದೆ. ಬಿಲ್ವಪತ್ರೆ, ಶತಾವರಿ, ಅಶ್ವಗಂಧ, ಬಿಲ್ವ, ಅರಳಿ, ಔದುಂಬರ, ದೊಡ್ಡಪತ್ರೆ, ಕೆಸ, ಗರಿಕೆ, ಅಮೃತಬಳ್ಳಿ, ತುಳಸಿ, ಮಾವು, ಬೇವು, ಮಾವು, ಬನ್ನಿ ಸೇರಿ ಹಲವಾರು ಮರಗಿಡಗಳು ಹಸನಾಗಿ ಬೆಳೆದು ನಿಂತಿವೆ. ಗುಲಾಬಿ, ದಾಸವಾಳ, ಸೇವಂತಿಗೆ, ಕಾಬಾಳೆ, ಮಲ್ಲಿಗೆಯಂಥ ಹಲವು ಬಗೆಯ ಅಲಂಕಾರಿಕ ಹೂಗಿಡಗಳು ನಳನಳಿಸುತ್ತಿವೆ.

ADVERTISEMENT

ಉದ್ಯಾನ ನಿರ್ಮಾಣಕ್ಕೆ ಕಾರಣರಾದ ಎಸ್ಐ ಉಮೇಶ್, ವೀರಬಸಪ್ಪ ಕುಸಲಾಪುರ ಅವರ ಕಾರ್ಯವೈಖರಿಗೆ ಉದ್ಯಾನದ ಬೆಳವಣಿಗೆಗೆ ಸಹಕಾರ ನೀಡಿದ ಪೊಲೀಸ್ ಇಲಾಖೆಯ ಅಧಿಕಾರಿಗಳಾದ ದೇವರಾಜ್, ರವಿಕುಮಾರ್, ಸುನಿಲ್ ಕುಮಾರ್ ಹಾಗೂ ಸಿಬ್ಬಂದಿಯ ಶ್ರಮಕ್ಕೆ ಪಟ್ಟಣದ ನಾಗರಿಕರು ಮೆಚ್ಚುಗೆ ಸೂಚಿಸಿದ್ದಾರೆ. ಎರಡೂ ಉದ್ಯಾನಗಳನ್ನು ಸರ್ಕಾರದಿಂದ ಅನುದಾನ ಪಡೆಯದೇ ನಿರ್ಮಿಸಿ, ನಿರ್ವಹಿಸುತ್ತಿರುವುದು ವಿಶೇಷ.

ಪೊಲೀಸ್ ಠಾಣೆಯ ನೆಡುತೋಪು ಸಸ್ಯ ಕಾಶಿಯನ್ನು ನೆನಪಿಸುತ್ತದೆ. ಹಲವು ಬಗೆಯ ಮರಗಳನ್ನು ಅರಣ್ಯ ಇಲಾಖೆಯ ಸಹಯೋಗದಲ್ಲಿ ನಿರ್ಮಿಸಿದ್ದು, ಪಕ್ಷಿಗಳ ತಾಣವಾಗಿದೆ. ವಾಯುವಿಹಾರಿಗಳಿಗೆ ಉತ್ತಮ ತಾಣವೆನಿಸಿದೆ.

ಉದ್ಯಾನ ಹಾಗೂ ಬಡಾವಣೆಗೆ 5 ಲಕ್ಷ ಲೀಟರ್‌ ಮೇಲ್ಮಟ್ಟದ ನೀರಿನ ಸಂಗ್ರಹಾಗಾರದ ಅಗತ್ಯವಿದೆ ಎನ್ನುತ್ತಾರೆ ಎಸ್ಐ ರವಿಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.