ADVERTISEMENT

ಭದ್ರಾ ನಾಲಾ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 5:11 IST
Last Updated 12 ಡಿಸೆಂಬರ್ 2025, 5:11 IST
ಮಲೇಬೆನ್ನೂರು ಪಟ್ಟಣದ ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಯ ಭದ್ರಾ ನಾಲಾ 3ನೇ ವಿಭಾಗೀಯ ಕಚೇರಿ ಎದುರು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು 
ಮಲೇಬೆನ್ನೂರು ಪಟ್ಟಣದ ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಯ ಭದ್ರಾ ನಾಲಾ 3ನೇ ವಿಭಾಗೀಯ ಕಚೇರಿ ಎದುರು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು    

ಮಲೇಬೆನ್ನೂರು: ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಯ ಭದ್ರಾ ನಾಲೆಯ 3ನೇ ವಿಭಾಗೀಯ ಕಚೇರಿ ಎದುರು ಗ್ರಾಮಾಂತರ ಭಾರತೀಯ ಜನತಾ ಪಕ್ಷದ ವತಿಯಿಂದ ಭದ್ರಾ ನಾಲೆ ದುರಸ್ತಿಗೆ ಅನುದಾನ ನೀಡಲು ಆಗ್ರಹಿಸಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಹರಿಹರಕ್ಕೆ ಬಿಜೆಪಿ ಶಾಸಕರು ಇರುವ ಕಾರಣ ಚಿಕ್ಕಾಸು ಅನುದಾನ ನೀಡಿಲ್ಲ ಎಂದು ಬಿಜೆಪಿ ಮುಖಂಡ ಹನಗವಾಡಿ ವೀರೇಶ್ ಹರಿಹಾಯ್ದರು.

ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ಭದ್ರಾನಾಲೆ ದುರಸ್ತಿಗೆ ಹೊನ್ನಾಳಿ, ಮಾಯಕೊಂಡ ಹಾಗೂ ಚನ್ನಗಿರಿ ತಾಲ್ಲೂಕಿಗೆ ಅನುದಾನ ನೀಡಿರುವ ದಾಖಲೆ ಬಿಡುಗಡೆ ಮಾಡಿದರು.

ADVERTISEMENT

‘ನಾಲೆ ದುರಸ್ತಿ ಅಂದಾಜು ಪಟ್ಟಿ ಸಲ್ಲಿಸಿದರೂ ಹರಿಹರ ತಾಲ್ಲೂಕಿಗೆ ಒಂದು ರೂಪಾಯಿ ಅನುದಾನ ನೀಡಿಲ್ಲ. ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ’ ಎಂದು ಮುಖ್ಯಮಂತ್ರಿ, ಜಲ ಸಂಪನ್ಮೂಲ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ, ಸಂಸದರು, ಕಾಡಾ ಅಧ್ಯಕ್ಷರ ವಿರುದ್ಧ ಘೋಷಣೆ ಕೂಗಿದರು.

‘ಭದ್ರಾ ನಾಲೆ, ಕಟ್ಟಡಗಳಾದ ಡ್ರಾಪ್‌, ಪೈಪ್‌ ಔಟ್‌ಲೆಟ್‌, ಸೇವಾ ರಸ್ತೆ, ಹೊಲಗಾಲುವೆ ಹಾಳಾಗಿವೆ. ಜಾಲಿ ಜಂಗಲ್‌ ಬೆಳೆದಿದ್ದು, ಹೂಳು ತುಂಬಿ ನೀರು ಹರಿಯದೆ ಕೊನೆಭಾಗದ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ’ ಎಂದು ರೈತರಾದ ನಿಟ್ಟೂರು ಧನಂಜಯ, ಜಿಗಳಿ ಚಕ್ಕಡಿ ಚಂದ್ರಪ್ಪ, ರೈತ ಮುಖಂಡ ಮುದೇಗೌಡ್ರ ತಿಪ್ಪೇಶ, ಕುಂದೂರು ಮಂಜಣ್ಣ ಹೊಳೆಸಿರಿಗೆರೆ ಗುಳದಹಳ್ಳಿ ಮಂಹಾತೇಶ್‌, ಬೂದಾಳ್‌ ಅಂಜನಪ್ಪ ದೂರಿದರು.

ಘಟನಾ ಸ್ಥಳಕ್ಕೆ ಬಂದ ಕಾರ್ಯಪಾಲಕ ಎಂಜಿನಿಯರ್‌ ಪ್ರವೀಣ ಹಾಗೂ ಎಇಇ ಕೃಷ್ಣಮೂರ್ತಿ ರೈತರ ಅಹವಾಲು ಆಲಿಸಿದರು.

ಸೂಪರಿಂಟೆಂಡಿಂಗ್ ಎಂಜಿನಿಯರ್‌ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ನಂತರ ಡಿ. 13ಕ್ಕೆ ಭದ್ರಾ ನಾಲೆ ವೀಕ್ಷಣೆ ಮಾಡುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.

ಜಿಗಳಿ ಗ್ರಾಮದ ಇಂದೂಧರ್‌ ಎನ್.‌ ರುದ್ರಗೌಡ, ಬಿಜೆಪಿ ಜಿಲ್ಲಾ ಘಟಕದ ಕಾರ್ಯದರ್ಶಿ ಐರಣಿ ಅಣ್ಣಪ್ಪ, ಬಿಜೆಪಿ ಗ್ರಾಮಾಂತರ ಘಟಕದ ಅಧ್ಯಕ್ಷ ಹಿಂಡಸಗಟ್ಟೆ ಲಿಂಗರಾಜ್‌, ಆದಾಪುರ ವೀರೇಶ್‌, ನಿರಂಜನ್‌, ಐರಣಿ ಮಹೇಶ್‌, ಸಿದ್ದೇಶ್‌ ಹಾಗೂ ಅಚ್ಚುಕಟ್ಟು ವ್ಯಾಪ್ತಿಯ ರೈತರು ಪಾಲ್ಗೊಂಡಿದ್ದರು. 

ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು  ಎಂಜಿನಿಯರುಗಳಿಗೆ ಮನವಿ ಅರ್ಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.