ADVERTISEMENT

ಮಳಲ್ಕೆರೆ ಪಿಡಿಒ ಎಸಿಬಿ ಬಲೆಗೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2019, 12:32 IST
Last Updated 26 ಸೆಪ್ಟೆಂಬರ್ 2019, 12:32 IST

ದಾವಣಗೆರೆ: ಸರ್ಕಾರಿ ವಕೀಲರಿಗೆ ನೀಡಲು ಹಣ ಕೊಡಬೇಕು ಎಂದು ಸುಳ್ಳು ಮಾಹಿತಿ ನೀಡಿ ಲಂಚ ಪಡೆಯುತ್ತಿದ್ದ ವೇಳೆ ಮಳಲ್ಕೆರೆ ಪಿಡಿಒ ನಿಂಗಾಚಾರಿ ಗುರುವಾರ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾನೆ.

ಮಳಲ್ಕೆರೆಯ ಮಹೇಶ್ವರಪ್ಪ ಅವರು ಪಿತ್ರಾರ್ಜಿತ ಆಸ್ತಿಯಲ್ಲಿ ಮನೆ ಕಟ್ಟಿಕೊಂಡಿದ್ದರು. ಸ್ವಲ್ಪ ಜಾಗ ಖಾಲಿ ಬಿಟ್ಟಿದ್ದರು. ಅದರ ಪಕ್ಕದಲ್ಲಿ ಇರುವ ನಿವೇಶನವನ್ನು ಮಳಲ್ಕೆರೆ ಗ್ರಾಮ ಪಂಚಾಯಿತಿಯು ಬೇರೆಯವರಿಗೆ ಮಂಜೂರು ಮಾಡಿತ್ತು. ನಿವೇಶನ ಮಂಜೂರು ಮಾಡಿಸಿಕೊಂಡವರು ಮಹೇಶ್ವರಪ್ಪ ಅವರ ಖಾಲಿ ಜಾಗವೂ ಅದರಲ್ಲಿ ಸೇರಿದ ಎನ್ನ ತೊಡಗಿದ್ದರು. ಮಹೇಶ್ವರಪ್ಪ ಗ್ರಾಮ ಪಂಚಾಯಿತಿಯಿಂದ ಈ ಸೊತ್ತು ಮಾಡಿಸಿಕೊಂಡಿದ್ದರು. ಅದಕ್ಕಾಗಿ ಗ್ರಾಮ ಪಂಚಾಯಿತಿ ಮತ್ತು ಮಹೇಶ್ವರಪ್ಪ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಿ ದೂರು ದಾಖಲಿಸಿದ್ದರು. ಈ ಪ್ರಕರಣದಲ್ಲಿ ಪಂಚಾಯಿತಿ ಪರ ವಾದಿಸಲು ಸರ್ಕಾರದಿಂದ ವಕೀಲರನ್ನು ನೇಮಿಸಲಾಗಿತ್ತು.

ಆ ಸರ್ಕಾರಿ ವಕೀಲರ ಶುಲ್ಕವನ್ನು ಭರಿಸಬೇಕು. ಎರಡು ಪ್ರಕರಣ ದಾಖಲಾಗಿರುವುದರಿಂದ ಒಂದು ಪ್ರಕರಣಕ್ಕೆ ₹ 5,500ರಂತೆ ಒಟ್ಟು ₹ 11,000 ನೀಡಬೇಕು ಎಂದು ಮಹೇಶ್ವರಪ್ಪ ಅವರಿಗೆ ಪಿಡಿಒ ನಿಂಗಾಚಾರಿ ತಿಳಿಸಿದ್ದರು. ಕಡಿಮೆ ಮಾಡಲು ಮಹೇಶ್ವರಪ್ಪ ಕೇಳಿಕೊಂಡಾಗ ತಲಾ ₹ 500 ಕಡಿಮೆ ಮಾಡಿಸುವುದಾಗಿ ಪಿಡಿಒ ಹೇಳಿದ್ದರು. ಬಳಿಕ ಮಹೇಶ್ವರಪ್ಪ ಈ ಬಗ್ಗೆ ಸರ್ಕಾರಿ ವಕೀಲರನ್ನು ಸಂಪರ್ಕಿಸಿದಾಗ ಸರ್ಕಾರ ವೇತನ ನೀಡುತ್ತದೆ. ಬೇರೆಯವರಿಂದ ಪಡೆಯುವುದಿಲ್ಲ ಎಂದು ತಿಳಿಸಿದ್ದರು.

ADVERTISEMENT

ಮಹೇಶ್ವರಪ್ಪ ಈ ಬಗ್ಗೆ ಎಸಿಬಿಗೆ ಮಾಹಿತಿ ನೀಡಿದ್ದರು. ಗುರುವಾರ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ಪಿಡಿಒ ಬೈಕಲ್ಲಿ ಬಂದು ಹಣ ಸ್ವೀಕರಿಸುವಾಗ ಎಸಿಬಿ ದಾಳಿ ಮಾಡಿದೆ. ಲಂಚದ ₹ 5,000 ವಶಪಡಿಸಿಕೊಂಡಿದೆ. ವಿಚಾರಣೆ ನಡೆಯುತ್ತಿದೆ.

ಕಾರ್ಯಾಚರಣೆಯಲ್ಲಿ ಎಸಿಬಿ ಡಿವೈಎಸ್‌ಪಿ ಪರಮೇಶ್ವರ್‌, ಇನ್‌ಸ್ಪೆಕ್ಟರ್‌ಗಳಾದ ಮಧುಸೂದನ್‌, ನಾಗಪ್ಪ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.