ಹೊನ್ನಾಳಿ: ತಾಲ್ಲೂಕಿನ ಕುಂದೂರು ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ 53ನೇ ವರ್ಷದ ದಸರಾ ಶರನ್ನವರಾತ್ರಿ ಮಹೋತ್ಸವದಲ್ಲಿ 6ನೇ ದಿನವಾದ ಭಾನುವಾರ ಅಪ್ಪಟ ದೇಸಿ ಕ್ರೀಡೆಯಾದ ಮಲ್ಲಗಂಬ ಪ್ರದರ್ಶನ ಕಾರ್ಯಕ್ರಮ ನಡೆಯಿತು.
ಧಾರವಾಡ ಜಿಲ್ಲೆಯ ಸಿರಗುಪ್ಪದ ರಾಜು ಶಿವನಗೌಡರ್ ಮತ್ತು ಶಿವಯೋಗಿ ಅವರ ಸ್ವಾಮಿ ವಿವೇಕಾನಂದ ಮಲ್ಲಗಂಬ ತಂಡದಲ್ಲಿ 25 ವಿದ್ಯಾರ್ಥಿಗಳು ಮಲ್ಲಗಂಬ ಪ್ರದರ್ಶನ ಮಾಡಿದರು.
5 ವರ್ಷದ ಪುಟಾಣಿಗಳಿಂದ ಹಿಡಿದು 22 ವರ್ಷದ ಯುವಕ, ಯುವತಿಯರು ಮಲ್ಲಗಂಬದ ಮೇಲೆ ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ಈ ತಂಡದ ಪ್ರತಿಯೊಬ್ಬ ಪಟುವೂ ತಮ್ಮ ಬೌದ್ಧಿಕ ಸಾಮರ್ಥ್ಯದೊಂದಿಗೆ ಚುರುಕುತನ ಹಾಗೂ ಶಕ್ತಿ ಸಮತೋಲನದ ಮೂಲಕ ದೈಹಿಕ ಕಸರತ್ತನ್ನು ಬಳಸಿ ಅದ್ಭುತ ಪ್ರದರ್ಶನ ನೀಡಿದ್ದು ಪ್ರೇಕ್ಷಕರ ಮೈನವಿರೇಳಿಸುವಂತೆ ಮಾಡಿತು.
ನಾಲ್ಕು ಬಾರಿ ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿ ವಿಜೇತಳಾದ ಯೋಗಾಪಟು ಪೂಜಾ ತಳವಾರ್, ಮಲ್ಲಗಂಬ ಮತ್ತು ಯೋಗಾಪಟು ಕೇಲೋ ಇಂಡಿಯಾ ಸ್ಪರ್ಧಿ ಶಿವಾನಂದ ಕುಂದಗೋಳ್, ಎರಡು ಬಾರಿ ಯೋಗ ಸ್ಪರ್ಧೆಯಲ್ಲಿ ನ್ಯಾಷನಲ್ ಒಲಂಪಿಯಾಡ್ ವಿಜೇತ ಪಟು ಅಪೂರ್ವ ಕುಸುಗಳ್, ಐದು ಬಾರಿ ರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಹೇಮ ಬಳಿಗೇರ್, ಮೂರು ಬಾರಿ ರಾಜ್ಯಮಟ್ಟದ ಯೋಗಾಸನದಲ್ಲಿ ಭಾಗವಹಿಸಿದ್ದ ವರುಣ್ ಕುರಹಟ್ಟಿ ಸೇರಿ ರಾಜ್ಯ, ರಾಷ್ಟ್ರಮಟ್ಟದ ಪಟುಗಳು ಮಲ್ಲಗಂಬ ಮತ್ತು ಯೋಗಾಸನ ಪ್ರದರ್ಶನ ಮಾಡಿದ್ದು ವಿಶೇಷವಾಗಿತ್ತು.
ರೋಪ್ ಸಹಾಯದಿಂದ ವಿವಿಧ ಬಗೆಯ ಯೋಗಾಸನದ ಭಂಗಿಗಳನ್ನು ಬಾಲಕಿಯರು ಪ್ರದರ್ಶನ ಮಾಡಿದರು. ವಿಶೇಷವಾಗಿ ನಾಲ್ಕು ಖಾಲಿ ಬಾಟಲಿನ ಮೇಲೆ ಟೇಬಲ್ ಅನ್ನು ಇಟ್ಟು ಅದರ ಮೇಲೆ ಪುನಃ ನಾಲ್ಕು ಖಾಲಿ ಬಾಟಲಿಗಳನ್ನು ಇಟ್ಟು, ಅದರ ಮೇಲೆ ಮತ್ತೊಂದು ಟೇಬಲ್ ಇಟ್ಟು ಈ ಟೇಬಲ್‌ನ ಮೇಲೆ ಸಮತೋಲಿತವಾಗಿ ಯೋಗವನ್ನು ಪ್ರದರ್ಶನ ಮಾಡಿದ್ದು ಎಲ್ಲರೂ ಹೆಬ್ಬೇರಿಸುವಂತೆ ಮಾಡಿತು.
ಉಪನ್ಯಾಸಕ ಎಂ.ಬಿ. ನಾಗರಾಜ್, ಮುಖಂಡರಾದ ವಿಕ್ರಂ ಪಾಟೀಲ್, ಸಿದ್ದೇಶ್, ಗ್ರಾಮ ಪಂಚಾಯಿತಿ ಸದಸ್ಯ ಕೆ.ಎನ್.ಡಿ. ವೀರನಗೌಡ, ಅನಿಲ್ ನಾಡಿಗ್ ಸೇರಿ ದಸರಾ ಉತ್ಸವ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.