ADVERTISEMENT

ದಾವಣಗೆರೆ | ಆತ್ಯಾಚಾರವೆಸಗಿ ಮಹಿಳೆ ಕೊಲೆ ಮಾಡಿದ್ದ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 4:17 IST
Last Updated 26 ಜೂನ್ 2022, 4:17 IST

ದಾವಣಗೆರೆ: ಹೊನ್ನಾಳಿ ತಾಲ್ಲೂಕಿನ ಗ್ರಾಮವೊಂದರಲ್ಲಿ ನಡೆದ ಮಹಿಳೆಯ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅದೇ ಗ್ರಾಮದ 32 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪೇಂಟಿಂಗ್ ವೃತ್ತಿ ಮಾಡುತ್ತಿದ್ದ ಆರೋಪಿ ಕೆಲಸ ಮುಗಿಸಿಕೊಂಡು ಪತಿ ಇಲ್ಲದ ಸಮಯದಲ್ಲಿ ಮದ್ಯಪಾನ ಮಾಡಿ 35 ವರ್ಷದ ಮಹಿಳೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

ಪತಿಯ ದೂರನ್ನು ಆಧರಿಸಿ ಹುಡುಕಾಡಿದ ಪೊಲೀಸರು ರಾತ್ರಿ ವೇಳೆ ಆರೋಪಿ ಮನೆಯಲ್ಲಿ ಮಲಗಿದ್ದಾಗ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ADVERTISEMENT

‘ಜೂನ್ 22ರಂದು ರಾತ್ರಿ ವೇಳೆ ಮಹಿಳೆ ಮನೆಗೆ ಹೋಗುತ್ತಿದ್ದಾಗ ಆರೋಪಿ ಹಿಂಬಾಲಿಸಿಕೊಂಡು ಹೋಗಿದ್ದಾನೆ. ಮಹಿಳೆ ಪ್ರತಿರೋಧ ವ್ಯಕ್ತಪಡಿಸಿದರೂ ಮದ್ಯಪಾನ ಮಾಡಿದ ಅಮಲಿನಲ್ಲಿ ಬಲವಂತ ಮಾಡಿದ್ದಾನೆ. ಈ ವೇಳೆ ಮಹಿಳೆಯ ಮೈಮೇಲೆ ತೀವ್ರ
ಗಾಯದ ಗುರುತುಗಳಿದ್ದವು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿಯ ಪತ್ತೆಗಾಗಿ ಚನ್ನಗಿರಿ ಉಪವಿಭಾಗದ ಡಿವೈಎಸ್‌‍ಪಿ ಸಂತೋಷ್ ಕೆ.ಎಂ. ಅವರ ಮಾರ್ಗದರ್ಶನದಲ್ಲಿ ಹೊನ್ನಾಳಿ ಪೊಲೀಸ್‌ ಸರ್ಕಲ್ ಇನ್‌ಸ್ಪೆಕ್ಟರ್ ದೇವರಾಜ್ ಟಿ.ವಿ. ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು.

ಹೊನ್ನಾಳಿ ಪೊಲೀಸ್ ಠಾಣೆಯ ಪಿಎಸ್ಐ ಬಸವರಾಜ ಬಿರಾದಾರ, ಸಿಬ್ಬಂದಿ ರಾಜು.ಕೆ, ಎ.ಎಂ. ಸಿದ್ದನಗೌಡ, ರಂಗನಾಥ್. ನಾಗನಗೌಡ, ಮೌನೇಶಾಚಾರಿ, ಜಗದೀಶ, ಯೋಗೇಶ, ಸುನೀಲ್ ಕುಮಾರ್, ಚೇತನ್ ಕುಮಾರ್, ರಾಘವೇಂದ್ರ, ತುಂಗಾ ಶ್ವಾನ ನಿರ್ವಾಹಕ ಕೆ.ಎಂ.ಪ್ರಕಾಶ ಹಾಗೂ ಎಂ.ಡಿ. ಷಫಿ ಭಾಗವಹಿಸಿದ್ದರು.

ಎಸ್‌ಪಿ ಸಿ.ಬಿ. ರಿಷ್ಯಂತ್, ಎಎಸ್‌ಪಿ ಆರ್.ಬಿ. ಬಸರಗಿ ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.

ಆರೋಪಿ ಪತ್ತೆ ಹಚ್ಚಿದ ‘ತುಂಗಾ’
ಕೊಲೆ ಆರೋಪಿ ಪತ್ತೆ ಹಚ್ಚುವಲ್ಲಿ ಪೊಲೀಸ್ ಶ್ವಾನ ದಳದ ‘ತುಂಗಾ’ ಹೆಸರಿನ ಶ್ವಾನ ಪ್ರಮುಖ ಪಾತ್ರ ವಹಿಸಿದೆ. ಅತ್ಯಾಚಾರ ನಡೆದ ಸ್ಥಳದಿಂದ ಅತ್ಯಾಚಾರವೆಸಗಿದ ಆರೋಪಿಯ ಮನೆಗೆಹೋಗಿದೆ.

ಅತ್ಯಾಚಾರ ಮಾಡಿದ ಆರೋಪಿ ಅವರ ಮನೆಗೆ ಸ್ನಾನ ಮಾಡಿದ್ದಾನೆ. ಮಹಿಳೆಯ ಮನೆಯಿಂದ ಎರಡು ಓಣಿಗಳನ್ನು ಸುತ್ತಿದ ಬಳಿಕ ಆರೋಪಿಯ ಸ್ನಾನದ ಮನೆಗೆ ಹೋಗಿ ನಿಂತಿದೆ. ಅದರ ಆಧಾರದ ಮೇಲೆ ಆರೋಪಿಯನ್ನು ಬಂಧಿಸಿದ್ದಾರೆ.

‘ತುಂಗಾ’ ಈವರೆಗೆ 75ಕ್ಕೂ ಹೆಚ್ಚು ಕೊಲೆ ಪ್ರಕರಣದಲ್ಲಿ ಆರೋಪಿಗಳ ಸುಳಿವು ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.