ADVERTISEMENT

ಮೆಡಿಕಲ್‍ ಕಾಲೇಜು ಸ್ಥಾಪನೆಗೆ ಹೋರಾಟದ ನಿರ್ಣಯ

​ಪ್ರಜಾವಾಣಿ ವಾರ್ತೆ
Published 6 ಜುಲೈ 2021, 2:20 IST
Last Updated 6 ಜುಲೈ 2021, 2:20 IST
ಮೆಡಿಕಲ್‍ ಕಾಲೇಜು ಸ್ಥಾಪನೆಗಾಗಿ ಹೋರಾಟದ ರೂಪುರೇಷೆಗಳನ್ನು ಚರ್ಚಿಸಲು ಹರಿಹರದ ರಚನಾ ಕ್ರೀಡಾ ಟ್ರಸ್ಟ್‌ ಸಭಾಂಗಣದಲ್ಲಿ ವಿವಿಧ ಸಂಘ-ಸಂಸ್ಥೆಗಳ ಸಭೆ ಸೋಮವಾರ ನಡೆಯಿತು.
ಮೆಡಿಕಲ್‍ ಕಾಲೇಜು ಸ್ಥಾಪನೆಗಾಗಿ ಹೋರಾಟದ ರೂಪುರೇಷೆಗಳನ್ನು ಚರ್ಚಿಸಲು ಹರಿಹರದ ರಚನಾ ಕ್ರೀಡಾ ಟ್ರಸ್ಟ್‌ ಸಭಾಂಗಣದಲ್ಲಿ ವಿವಿಧ ಸಂಘ-ಸಂಸ್ಥೆಗಳ ಸಭೆ ಸೋಮವಾರ ನಡೆಯಿತು.   

ಹರಿಹರ: ನಗರದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗಾಗಿ ಪಕ್ಷಾತೀತಾವಾಗಿ ಎಲ್ಲಾ ಸಂಘಟನೆಗಳು ಒಟ್ಟಾಗಿ ಹೋರಾಟ ಮಾಡಲು ಹೋರಾಟ ವೇದಿಕೆಯನ್ನು ರೂಪಿಸಲು ರಚನಾ ಕ್ರೀಡಾ ಟ್ರಸ್ಟ್‌ ಸಭಾಂಗಣದಲ್ಲಿ ಸೋಮವಾರ ವಿವಿಧ ಸಂಘಟನೆಗಳು ಆಯೋಜಿಸಿದ್ದ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.

ಮಾಜಿ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ‘ರಾಜ್ಯದ ಹೃದಯ ಭಾಗದಲ್ಲಿರುವ ನಗರ ವಿವಿಧ ಜಿಲ್ಲೆಗಳ ಗಡಿಯನ್ನು ಹಂಚಿಕೊಂಡಿದೆ. ನಗರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸುವುದರಿಂದ ಅಕ್ಕಪಕ್ಕದ ಜಿಲ್ಲೆಗಳ ರೋಗಿಗಳಿಗೆ ಹಾಗೂ ಆರ್ಥಿಕ ಅಭಿವೃದ್ಧಿಗೆ ಅನುಕೂಲವಾಗಲಿದೆ’ ಎಂದರು.

ಮೆಡಿಕಲ್‍ ಕಾಲೇಜು ಸ್ಥಾಪನೆಗೆ ಅಗತ್ಯವಾದ ಕಾರ್ಯಗಳನ್ನು ಪರಸ್ಪರ ಸಹಮತದಿಂದ ಹಂಚಿಕೊಳ್ಳುವ ಮೂಲಕ ಹೋರಾಟದ ಕಾವು ಆರದಂತೆ ನೋಡಿಕೊಳ್ಳುವ ಹೊಣೆ ಸಮಿತಿಯ ಮೇಲಿದೆ. ಈ ನಿಟ್ಟಿನಲ್ಲಿ ಚಿಂತನೆ ನಡೆಸುವ ಮೂಲಕ ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ತೇಜಸ್ವಿ ಪಟೇಲ್‍ ಸಲಹೆ ನೀಡಿದರು.

ADVERTISEMENT

ಮುಖಂಡ ಎನ್‍.ಎಚ್‍. ಶ್ರೀನಿವಾಸ್‍ ಮಾತನಾಡಿ, ‘ನಗರಕ್ಕೆ ಮೆಡಿಕಲ್‍ ಕಾಲೇಜು ಹೋರಾಟ ಅನಿವಾರ್ಯ. ಈ ನಿಟ್ಟಿನಲ್ಲಿ ಮಂಗಳವಾರ ಸಾರ್ವಜನಿಕರಿಂದ ಸಹಿ ಸಂಗ್ರಹ ಚಳವಳಿ ಆರಂಭಿಸಲಾಗುವುದು’ ಎಂದು ಹೇಳಿದರು.

ಹಲವು ದಶಕಗಳಿಂದ ನಗರದಲ್ಲಿ ಹೆರಿಗೆ ಆಸ್ಪತ್ರೆ ಹಾಗೂ ಮಕ್ಕಳ ಆಸ್ಪತ್ರೆ ಸ್ಥಾಪನೆಗೆ ಮನವಿ ಸಲ್ಲಿಸಲಾಗುತ್ತಿದೆ. ಪ್ರಸ್ತುತ ನಗರಕ್ಕೆ ಮೆಡಿಕಲ್‍ ಕಾಲೇಜಿನ ಅಗತ್ಯವಿದ್ದು, ಸರ್ಕಾರ ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು ಎಂದು ನಿವೃತ್ತ ಡಿಎಚ್‍ಒ ಡಾ.ಜಗನ್ನಾಥ್‍ ಆಗ್ರಹಿಸಿದರು.

ಡಾ.ಶೈಲೇಶ್‍ ಕುಮಾರ್‍ ಮಾತನಾಡಿ, ನಗರದಲ್ಲಿ ಮೆಡಿಕಲ್‍ ಕಾಲೇಜು ಸ್ಥಾಪನೆಯ ಅಗತ್ಯತೆ ಹಾಗೂ ಪೂರಕವಾದ ದಾಖಲೆಗಳನ್ನು ಸಂಗ್ರಹಿಸಿ ಸರ್ಕಾರಕ್ಕೆ ಸಲ್ಲಿಸಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಎಚ್‍. ನಿಜಗುಣ, ದಾವಣಗೆರೆ ಹಾಗೂ ಹರಿಹರ ಅವಳಿ ನಗರಗಳಾಗಿದ್ದು, ನಗರಕ್ಕೆ ಮೆಡಿಕಲ್‍ ಕಾಲೇಜಿನ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಎಲ್ಲಾ ಪಕ್ಷದ ರಾಜಕೀಯ ಮುಖಂಡರು ಹಾಗೂ ಪೀಠಾಧಿಪತಿಗಳು ಹೋರಾಟವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್‍ ಜಿಲ್ಲಾ ವಕ್ತಾರ ಎಂ. ನಾಗೇಂದ್ರಪ್ಪ, ಸಾಹಿತಿಗಳಾದ ಸಿ.ವಿ. ಪಾಟೀಲ್, ಎಚ್.ಕೆ. ಕೊಟ್ರಪ್ಪ. ಜೆ. ಕಲೀಂಬಾಷಾ, ನಗರಸಭಾ ಮಾಜಿ ಸದಸ್ಯರಾದ ಬಿ.ಕೆ. ಸೈಯದ್ ರೆಹಮಾನ್, ಬಿ. ರೇವಣಸಿದ್ದಪ್ಪ, ಮುಖಂಡರಾದ ಮರಿಯೋಜಿರಾವ್, ಜಿ.ಎಚ್‍. ಕೃಷ್ಣಮೂರ್ತಿ, ಸಿ.ಎನ್‍. ಹುಲಿಗೇಶ್, ಟಿ.ಜೆ. ಮುರುಗೇಶಪ್ಪ, ಡಿಎಸ್‍ಎಸ್ ತಾಲ್ಲೂಕು ಸಂಚಾಲಕ ಪಿ.ಜೆ. ಮಹಾಂತೇಶ್ ಅವರೂ ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.