ADVERTISEMENT

‘ಬಡವರಿಗೆ ವೈದ್ಯಕೀಯ ಶಿಕ್ಷಣ ಗಗನಕುಸುಮ’

ಎಂಬಿಬಿಎಸ್ ಮುಗಿಸಲು ಕೋಟಿ ರೂಪಾಯಿ ಅಗತ್ಯ

​ಪ್ರಜಾವಾಣಿ ವಾರ್ತೆ
Published 7 ಜುಲೈ 2019, 18:58 IST
Last Updated 7 ಜುಲೈ 2019, 18:58 IST
ದಾವಣಗೆರೆಯ ಮಾಗನೂರು ಬಸಪ್ಪ ಪಬ್ಲಿಕ್ ಸ್ಕೂಲ್‌ನಲ್ಲಿ ಭಾನುವಾರ ಸಾದರ ನೌಕರರ ಬಳಗದಿಂದ ಸಾಧಕರನ್ನು ಸನ್ಮಾನಿಸಲಾಯಿತು
ದಾವಣಗೆರೆಯ ಮಾಗನೂರು ಬಸಪ್ಪ ಪಬ್ಲಿಕ್ ಸ್ಕೂಲ್‌ನಲ್ಲಿ ಭಾನುವಾರ ಸಾದರ ನೌಕರರ ಬಳಗದಿಂದ ಸಾಧಕರನ್ನು ಸನ್ಮಾನಿಸಲಾಯಿತು   

ದಾವಣಗೆರೆ: ಶ್ರೀಸಾಮಾನ್ಯರು ತಮ್ಮ ಮಕ್ಕಳನ್ನು ವೈದ್ಯರನ್ನಾಗಿಸುವ ಕನಸು ಕಾಣುವುದು ಸಹಜ. ನೀಟ್ ಪರೀಕ್ಷೆ ಬಂದ ನಂತರ ಇದು ಬರೀ ಕನಸಾಗಿದೆ. ಎಂಬಿಬಿಎಸ್ ಶಿಕ್ಷಣ ಮುಗಿಸಲು ಆಗುವ ವೆಚ್ಚ ಕೋಟಿ ರೂಪಾಯಿ ದಾಟುತ್ತದೆ ಎಂದು ಪಶುವೈದ್ಯಕೀಯ ಇಲಾಖೆ ಜಂಟಿ ನಿರ್ದೇಶಕ ಹೆಚ್.ಎಸ್. ಜಯಣ್ಣ ವಿಷಾದ ವ್ಯಕ್ತಪಡಿಸಿದರು.

ಮಾಗನೂರು ಬಸಪ್ಪ ಶಾಲೆಯಲ್ಲಿ ಭಾನುವಾರ ಸಾದರ ನೌಕರರ ಬಳಗ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಪೋಷಕರು ತಮ್ಮ ಮಕ್ಕಳನ್ನು ವೈದ್ಯ, ಎಂಜಿನಿಯರ್ ಎಂದು ಸೀಮಿತ ಮಾಡಬೇಡಿ. ಅರಣ್ಯ, ಕೃಷಿ ಸೇರಿ ಅನೇಕ ವೈವಿಧ್ಯಮಯ ಶಿಕ್ಷಣಗಳಿವೆ. ಅವುಗಳಲ್ಲಿ ಉತ್ತಮ ಭವಿಷ್ಯ ಕಂಡುಕೊಳ್ಳಲು ಚಿಂತಿಸಬೇಕು ಎಂದು ಸಲಹೆ ನೀಡಿದರು.

ADVERTISEMENT

ಪೋಷಕರು ಮಕ್ಕಳ ಮೇಲೆ ಒತ್ತಡ ಹಾಕುವುದನ್ನು ಬಿಡಬೇಕು. ಇದರಿಂದ ಅವರು ಭವಿಷ್ಯವನ್ನು ರೂಪಿಸಿಕೊಳ್ಳಲು ಅಸಾಧ್ಯ. ಮಕ್ಕಳಿಗೆ ಇಷ್ಟವಾದ ಶಿಕ್ಷಣ ಕೊಡಿಸುವುದು ನಿಮ್ಮ ಕರ್ತವ್ಯವಾಗಿರುತ್ತದೆ. ಹಾಗೇ ಮಕ್ಕಳು ಕಷ್ಟಪಟ್ಟು ಓದಬೇಕು ಎಂದರು.

ದಾವಣಗೆರೆ ತಾಲ್ಲೂಕು ಪಂಚಾಯಿತಿ ನಿವೃತ್ತ ಇಒ ಎಲ್.ಎಸ್. ಪ್ರಭುದೇವ್ ಮಾತನಾಡಿ, ‘ನಾವು ಮಾಡುವ ಕೆಲಸದಲ್ಲಿ ಕಷ್ಟಪಟ್ಟರೆ ಮಾತ್ರ ಫಲ ದೊರಕಲಿದೆ ಅನ್ನುವ ಭಾವನೆ ಹೊಂದಬೇಕು. ಸಾಧಕರು ಯಾರೂ ಶ್ರೀಮಂತರಲ್ಲ, ಅವರು ಬಡತನದಿಂದಲೇ ಬಂದಿದ್ದು. ಈ ಸಾಧನೆಗೆ ಅವರು ಬಹಳಷ್ಟು ಕಷ್ಟಗಳನ್ನು ಎದುರಿಸಿದ್ದಾರೆ. ಸುಖವಾಗಿ ಬೆಳೆದವರು ಸಾಧನೆ ಮಾಡುವುದು ವಿರಳ’ ಎಂದು ಹೇಳಿದರು.

ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟ್‌ನ ಕಾರ್ಯದರ್ಶಿ ಎಂ.ಬಿ. ಸಂಗಮೇಶ್ವರ ಗೌಡ್ರು, ‘ಸಮಾಜದ ಕೆಲಸಕ್ಕೆ ಹಿರಿಯರಲ್ಲಿರುವ ಕಳಕಳಿ ಯುವಜನರಲ್ಲಿ ಇಲ್ಲದಿರುವುದು ವಿಷಾದಕರ ಸಂಗತಿ. ಯುವಜನರಿಗಾಗಿ ಹಿರಿಯರು ಕಷ್ಟಪಡುತ್ತಿದ್ದಾರೆ. ಯುವಜನರು ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ’ ಎಂದು ವಿಷಾದಿಸಿದರು.

ಕೃಷಿ ಸಾಧಕರಾದ ಜಿ. ಮಹೇಶ್ವರಪ್ಪ, ಎಚ್.ಕೆ. ದೇವರಾಜ್, ಡಾ. ಎಚ್.ಎಂ. ಪ್ರವೀಣ್, ಶ್ರೀಕಾಂತಪ್ಪ. ನಿವೃತ್ತ ನೌಕರರಾದ ಜಿಲ್ಲಾ
ಪಂಚಾಯಿತಿ ನಿವೃತ್ತ ಉಪ ಕಾರ್ಯದರ್ಶಿ ಷಡಾಕ್ಷರಪ್ಪ, ಜಮಖಂಡಿಯ ಶಿಕ್ಷಕರ ಶಿಕ್ಷಣ ಪ್ರವಾಚಕ ವೀರಣ್ಣ ಎಸ್. ಜತ್ತಿ, ಪಶುವೈದ್ಯಕೀಯ ಇಲಾಖೆ ಜಂಟಿ ನಿರ್ದೇಶಕ ಎಚ್.ಎಸ್. ಜಯಣ್ಣ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಕೆ.ಬಿ. ಕೊಟ್ರೇಶ್ ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾನ್ವಿತ ಮಕ್ಕಳನ್ನು ಪುರಸ್ಕರಿಸಲಾಯಿತು.

ಬಳಗದ ಅಧ್ಯಕ್ಷ ನಾಗಪ್ಪ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಎ.ಆರ್. ಉಜ್ಜನಪ್ಪ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.