ADVERTISEMENT

ಮತ್ತೆ ಅವಿಶ್ವಾಸ ಗೊತ್ತುವಳಿಗೆ ಸಭೆ ನಿಗದಿ

ಹರಪನಹಳ್ಳಿ ತಾ.ಪಂ. ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ ಸದಸ್ಯರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2019, 14:10 IST
Last Updated 13 ಮಾರ್ಚ್ 2019, 14:10 IST
ಹರಪನಹಳ್ಳಿ ತಾಲ್ಲೂಕು ಪಂಚಾಯಿತಿ
ಹರಪನಹಳ್ಳಿ ತಾಲ್ಲೂಕು ಪಂಚಾಯಿತಿ   

ಹರಪನಹಳ್ಳಿ: ಇಲ್ಲಿನ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ, ಉಪಾಧ್ಯಕ್ಷರ ವಿರುದ್ಧ ಎರಡನೇ ಬಾರಿಗೆ ಅವಿಶ್ವಾಸ ಗೊತ್ತುವಳಿ ಮಂಡಿಸಿದ ಪರಿಣಾಮ ಮಾರ್ಚ್‌ 20ರಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಮತಾ ಹೊಸಗೌಡರ ವಿಶೇಷ ಸಭೆ ಕರೆದಿದ್ದಾರೆ.

ಒಟ್ಟು 26 ಸದಸ್ಯರನ್ನು ಒಳಗೊಂಡಿರುವ ತಾಲ್ಲೂಕು ಪಂಚಾಯಿತಿಯಲ್ಲಿ ಬಿಜೆಪಿಯ ಆಡಳಿತವಿದೆ. ‘ಅಧ್ಯಕ್ಷೆ, ಉಪಾಧ್ಯಕ್ಷರ ಬಗ್ಗೆ ನಮಗೆ ವಿಶ್ವಾಸವಿಲ್ಲ’ ಎಂದು 10 ಬಿಜೆಪಿ ಸದಸ್ಯರು, 8 ಕಾಂಗ್ರೆಸ್, ಒಬ್ಬರು ಪಕ್ಷೇತರ ಸೇರಿ ಒಟ್ಟು 19 ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದಾರೆ. 3 ವರ್ಷಗಳಿಂದ ಅಧ್ಯಕ್ಷರಾಗಿ ಅನ್ನಪೂರ್ಣಮ್ಮ, ಉಪಾಧ್ಯಕ್ಷರಾಗಿ ಎಲ್. ಮಂಜನಾಯ್ಕ ಕಾರ್ಯನಿರ್ವಹಿಸುತ್ತಿದ್ದಾರೆ.

ಅವಿಶ್ವಾಸಕ್ಕೆ ಸಹಿ ಹಾಕಿದ ಬಿಜೆಪಿ ಸದಸ್ಯರು:

ADVERTISEMENT

ವಿಶಾಲಾಕ್ಷಮ್ಮ (ಅರಸಿಕೇರಿ), ನೀಲಿಬಾಯಿ (ಚಟ್ನಿಹಳ್ಳಿ), ಗಂಗೂಬಾಯಿ (ಪುಣಭಗಟ್ಟ), ರಹಮತುಲ್ಲಾ (ಅಣಜಿಗೇರಿ), ಪಾಟೀಲ್ ಕೆಂಚನಗೌಡ ( ಉಚ್ಚಂಗಿದುರ್ಗ), ಪ್ರಕಾಶ ಹುಣ್ಸಿಹಳ್ಳಿ (ಸಾಸ್ವೆಹಳ್ಳಿ), ಕೆ. ವೆಂಕಟೇಶರೆಡ್ಡಿ (ಕುಂಚೂರು), ಸುಮಿತ್ರಾ (ಮಾಚಿಹಳ್ಳಿ), ಆರ್.ಲತಾ (ಬಾಗಳಿ), ರೇವನಗೌಡ ಪಾಟೀಲ್ (ಹಿರೇಮೇಗಳಗೇರಿ).

ಕಾಂಗ್ರೆಸ್ ಸದಸ್ಯರು:

ಎಚ್ .ಚಂದ್ರಪ್ಪ (ನೀಲಗುಂದ), ಓ.ರಾಮಪ್ಪ (ನಂದಿಬೇವೂರು), ಎಸ್.ಬಸವನಗೌಡ (ಚಿಗಟೇರಿ), ಗೌಡ್ರು ಮಂಜುಳಾ (ದುಗ್ಗಾವತ್ತಿ), ಜಿ.ಮಂಜುಳಾ (ತೆಲಿಗಿ), ಯಲ್ಲಮ್ಮ (ನಿಚ್ಚವನಹಳ್ಳಿ), ಶಶಿಕಲಾ (ಮತ್ತಿಹಳ್ಳಿ), ಲಕ್ಷ್ಮೀಬಾಯಿ (ಹಾರಕನಾಳು) ಹಾಗೂ ರಾಗಿಮಸಲವಾಡ ಕ್ಷೇತ್ರದ ಪಕ್ಷೇತರ ಸದಸ್ಯೆ ಮಾನಿಬಾಯಿ ಅವಿಶ್ವಾಸಕ್ಕೆ ಸಹಿ ಹಾಕಿದ್ದಾರೆ.

ಈ ಹಿಂದೆ ಅವಿಶ್ವಾಸ ಗೊತ್ತುವಳಿ ಮಂಡಿಸಲಾಗಿತ್ತು. ಫೆ.18ರಂದು ನಡೆದ ಅವಿಶ್ವಾಸ ಗೊತ್ತುವಳಿ ಸಭೆಯನ್ನು ಕೋರ್ಟ್ ಆದೇಶದ ಪ್ರಕಾರ ತಾಲ್ಲೂಕು ಪಂಚಾಯಿತಿ ಇಒ ರದ್ದುಗೊಳಿಸಿದ್ದರು. ಆಗ ಅವಿಶ್ವಾಸ ಮಂಡಿಸಿದ್ದ ಸದಸ್ಯರು ಸಭೆ ರದ್ದುಗೊಳಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಪುನಃ 19 ಸದಸ್ಯರು ನಿಯಮಾನುಸಾರ ಅಧ್ಯಕ್ಷ, ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ಮನವಿ ಸಲ್ಲಿಸಿದ್ದರು.

ಈ ಬಾರಿ ಸಭೆ ಕರೆಯಲು ನೋಟಿಸ್ ನೀಡಿದ್ದರೂ ಅಧ್ಯಕ್ಷರು ಸಭೆ ಕರೆಯಲು ವಿಫಲವಾಗಿದ್ದರು. ಆದ್ದರಿಂದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಮತಾ ಹೊಸಗೌಡರ ಮಾ.20ರಂದು ಬೆಳಿಗ್ಗೆ 11.30ಕ್ಕೆ ಅವಿಶ್ವಾಸ ಗೊತ್ತುವಳಿ ವಿಶೇಷ ಸಭೆ ನಿಗದಿಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.