ADVERTISEMENT

ಹರಿಹರ| 10 ದಿನದೊಳಗೆ ಬಾಕಿ ಕಡತಗಳ ವಿಲೇ ಮಾಡಿ: ಶಾಸಕ ಬಿ.ಪಿ.ಹರೀಶ್

ಹರಿಹರ: ಅಧಿಕಾರಿಗಳ ಪರಿಚಯ ಸಭೆಯಲ್ಲಿ ಶಾಸಕ ಬಿ.ಪಿ.ಹರೀಶ್ ತಾಕೀತು

​ಪ್ರಜಾವಾಣಿ ವಾರ್ತೆ
Published 4 ಜೂನ್ 2023, 13:58 IST
Last Updated 4 ಜೂನ್ 2023, 13:58 IST
ಹರಿಹರ: ಹರಿಹರದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶನಿವಾರ ಶಾಸಕ ಬಿ.ಪಿ.ಹರೀಶ್ ಅಧಿಕಾರಿಗಳ ಪರಿಚಯ ಸಭೆಯಲ್ಲಿ ಮಾತನಾಡಿದರು.
ಹರಿಹರ: ಹರಿಹರದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶನಿವಾರ ಶಾಸಕ ಬಿ.ಪಿ.ಹರೀಶ್ ಅಧಿಕಾರಿಗಳ ಪರಿಚಯ ಸಭೆಯಲ್ಲಿ ಮಾತನಾಡಿದರು.   

ಹರಿಹರ: ಅಧಿಕಾರಿಗಳು ಜನರನ್ನು ಕಚೇರಿಗಳಿಗೆ ಅಲೆದಾಡಿಸಬಾರದು, ಬಾಕಿ ಕಡತಗಳನ್ನು 10 ದಿನಗಳೊಳಗೆ ವಿಲೇ ಮಾಡಬೇಕು ಎಂದು ಶಾಸಕ ಬಿ.ಪಿ.ಹರೀಶ್ ತಾಕೀತು ಮಾಡಿದರು.

ಇಲ್ಲಿನ ತಾಲ್ಲೂಕ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಅಧಿಕಾರಿಗಳ ಪರಿಚಯ ಸಭೆಯಲ್ಲಿ ಮಾತನಾಡಿದ ಅವರು, ‘ತಾಲ್ಲೂಕಿನ ಜನರು ಅಧಿಕಾರಿಗಳ ವಿಳಂಬ ಧೋರಣೆಯಿಂದಾಗಿ ಸಣ್ಣಪುಟ್ಟ ಕೆಲಸಗಳಿಗೂ ನಗರಸಭೆ, ಕಂದಾಯ ಇಲಾಖೆ, ತಾಲ್ಲೂಕು ಪಂಚಾಯಿತಿ ಸೇರಿದಂತೆ ವಿವಿಧ ಇಲಾಖೆಗಳಿಗೆ ಅಲೆದಾಡಿ ಬೇಸತ್ತಿದ್ದಾರೆ. ಅಧಿಕಾರಿಗಳು ಮುಂದಿನ 10 ದಿನಗಳೊಳಗೆ ಎಲ್ಲ ಬಾಕಿ ಕೆಲಸ ಪೂರ್ಣಗೊಳಿಸಬೇಕು’ ಎಂದು ಸೂಚಿಸಿದರು. 

‘ಯುಜಿಡಿ ಹಾಗೂ ಜಲಸಿರಿ ಯೋಜನೆಗಳಿಂದ ಹರಿಹರದ ಬಹುತೇಕ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಕೂಡಲೇ ಅವುಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಹತ್ತು ದಿನಗಳ ನಂತರ ನಗರಸಭೆಗೆ ಭೇಟಿ ನೀಡಲಿದ್ದು, ಯಾವುದೇ ದೂರು ಬರಬಾರದು’ ಎಂದು ಪೌರಾಯುಕ್ತ ಬಸವರಾಜ ಐಗೂರ ಅವರಿಗೆ ಎಚ್ಚರಿಸಿದರು.

ADVERTISEMENT

‘ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಜಲ ಜೀವನ್ ಮಿಷನ್ ಯೋಜನೆಗೆ ಕಾಂಕ್ರೀಟ್ ರಸ್ತೆಗಳನ್ನು ಒಡೆದು ಪೈಪ್ ಅಳವಡಿಸುತ್ತಿರುವುದರಿಂದ ಅಲ್ಲೂ ರಸ್ತೆಗಳು ಹಾಳಾಗುತ್ತಿವೆ. ಆದಷ್ಟು ಬೇಗ ಯೋಜನೆ ಪೂರ್ಣಗೊಳಿಸಿ, ಗ್ರಾಮಸ್ಥರಿಗೆ ನೀರು ಸರಬರಾಜು ಮಾಡಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.  

ಅಧಿಕಾರಿಗಳ ವರ್ಗಾವಣೆ ನಡೆಯುತ್ತದೆ ಎಂದು ಕೆಲವರು ಭಯ ಹುಟ್ಟಿಸುತ್ತಿದ್ದಾರೆ. ಯಾವುದೇ ಅಧಿಕಾರಿಗಳು ಭಯಪಡಬೇಕಿಲ್ಲ. ನಮಗೆ ಕ್ಷೇತ್ರದ ಅಭಿವೃದ್ಧಿ ಮತ್ತು ಜನರ ನೆಮ್ಮದಿ ಮುಖ್ಯ. ಭ್ರಷ್ಟಾಚಾರ ಕೈಬಿಟ್ಟು, ಯಾರಿಗೂ ಹೆದರದೆ, ಧೈರ್ಯವಾಗಿ ಕಾರ್ಯ ನಿರ್ವಹಿಸಬಹುದು. ಆದರೆ ಭ್ರಷ್ಟ, ಅಪ್ರಾಮಾಣಿಕ ಅಧಿಕಾರಿಗಳು ವರ್ಗಾವಣೆ ಮಾಡಿಸಲಾಗುವುದು ಎಂದರು.

ಸಭೆಯಲ್ಲಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ತಾಲ್ಲೂಕು ಪಂಚಾಯಿತಿ ಇಒ ಎನ್.ರವಿ, ತೋಟಗಾರಿಕೆ ಇಲಾಖೆಯ ಜಿ.ಪಿ. ರೇಖಾ, ಕೃಷಿ ಇಲಾಖೆಯ ನಾರನಗೌಡ, ಟಿಎಚ್‌ಒ ಚಂದ್ರಮೋಹನ್, ಬಿಇಒ ಹನುಮಂತಪ್ಪ, ಸಮಾಜ ಕಲ್ಯಾಣ ಇಲಾಖೆಯ ನಾಸಿರುದ್ದೀನ್, ಬಿಸಿಎಂ ಇಲಾಖೆಯ ನುಸ್ರತ್, ಸರ್ಕಾರಿ ಆಸ್ಪತ್ರೆ ಮುಖ್ಯ ಆಡಳಿತಾಧಿಕಾರಿ ಡಾ.ಹನುಮಾನಾಯ್ಕ್, ಬೆಸ್ಕಾಂ ಎಇಇ ನಾಗರಾಜ್‌ನಾಯ್ಕ್ ಇದ್ದರು.

ಹರಿಹರ: ಹರಿಹರದ ತಾಲ್ಲೂಕು ಪಂಚಾಯ್ತಿ ಸಬಾಂಗಣದಲ್ಲಿ ಅಧಿಕಾರಿಗಳ ಪರಿಚಯ ಸಭೆ ನಡೆಸಿದ ಶಾಸಕ ಬಿ.ಪಿ.ಹರೀಶ್‌ರನ್ನು ಸತ್ಕರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.