ADVERTISEMENT

ಹರಿಹರ: ವಿಶೇಷ ಪ್ರವಚನದಲ್ಲಿ ಹಿಂದೂ ಸಮುದಾಯದವರೂ ಭಾಗಿ

ನಮ್ಮೂರ ಮಸೀದಿ ನೋಡಬನ್ನಿ ವಿಶಿಷ್ಟ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 15:31 IST
Last Updated 26 ಜುಲೈ 2024, 15:31 IST
ಹರಿಹರದ ಪ್ರಶಾಂತನಗರದ ಮಸ್ಜಿದ್-ಎ-ಅಲಿ ಮಸೀದಿಯಲ್ಲಿ ಶುಕ್ರವಾರ ಆಯೋಜಿಸಿದ್ದ ‘ನಮ್ಮೂರ ಮಸೀದಿ ನೋಡಬನ್ನಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಿಂದೂ ಸಮುದಾಯದ ಮಹಿಳೆಯರು ಮಸೀದಿಯನ್ನು ವೀಕ್ಷಿಸಿದರು
ಹರಿಹರದ ಪ್ರಶಾಂತನಗರದ ಮಸ್ಜಿದ್-ಎ-ಅಲಿ ಮಸೀದಿಯಲ್ಲಿ ಶುಕ್ರವಾರ ಆಯೋಜಿಸಿದ್ದ ‘ನಮ್ಮೂರ ಮಸೀದಿ ನೋಡಬನ್ನಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಿಂದೂ ಸಮುದಾಯದ ಮಹಿಳೆಯರು ಮಸೀದಿಯನ್ನು ವೀಕ್ಷಿಸಿದರು    

ಹರಿಹರ: ನಗರದ ಪ್ರಶಾಂತ ನಗರದ ಮಸ್ಜಿದ್-ಎ-ಅಲಿ ಮಸೀದಿಯಲ್ಲಿ ಜಮಾತೆ ಇಸ್ಲಾಂ ಹಿಂದ್ ಹರಿಹರ ಘಟಕದಿಂದ ಶುಕ್ರವಾರ ಆಯೋಜಿಸಿದ್ದ ‘ನಮ್ಮೂರ ಮಸೀದಿ ನೋಡಬನ್ನಿ’ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರೆಯಿತು.

ಮಧ್ಯಾಹ್ನ 12.30ಕ್ಕೆ ಅಜಾನ್ ಕೂಗಿದ ನಂತರ ವಿಶೇಷ ಪ್ರವಚನ ಹಾಗೂ ನಮಾಜ್‌ಗೆಂದು ಮುಸ್ಲಿಂ ಸಮುದಾಯದವರು ಮಸೀದಿಗೆ ಆಗಮಿಸಿದರು. ಜೊತೆಗೆ ಹಿಂದೂ ಸಮುದಾಯದವರೂ ಮಸೀದಿ ಪ್ರವೇಶಿಸಿ ಕನ್ನಡ ಭಾಷೆಯಲ್ಲಿ ನಡೆದ ವಿಶೇಷ ಪ್ರವಚನ ಆಲಿಸಿದರು.

‘ಜಗತ್ತಿನ ಎಲ್ಲರೂ ಪರಸ್ಪರ ಸಹೋದರತ್ವದಿಂದ ಬದುಕಬೇಕು. ದೇವರನ್ನು ನಾವು ಅಲ್ಲಾಹು ಎಂದು ಕರೆದರೆ, ಇನ್ನೊಂದು ಧರ್ಮದವರು ಬೇರೊಂದು ಹೆಸರಿನಲ್ಲಿ ಗುರುತಿಸುತ್ತಾರೆ. ಪರಸ್ಪರರ ಧಾರ್ಮಿಕ ಕೇಂದ್ರಗಳಿಗೆ ನಿಯಮಿತವಾಗಿ ಭೇಟಿ ನೀಡಿದರೆ ಸಾಮರಸ್ಯ, ಸ್ನೇಹ, ವಿಶ್ವಾಸ ಬೆಳೆಯುತ್ತದೆ’ ಎಂದು ಪ್ರವಚನ ನೀಡಿದ ಜಮಾತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ ತಿಳಿಸಿದರು.

ADVERTISEMENT

‘ನಮ್ಮೂರ ಮಸೀದಿ ನೋಡಬನ್ನಿ ಕಾರ್ಯಕ್ರಮ ಈಗಿನ ಸಂದರ್ಭಕ್ಕೆ ಅಗತ್ಯವಿತ್ತು. ಮಸೀದಿಯೊಳಗೆ ನಡೆಯುವ ಪ್ರವಚನ, ನಮಾಜು ಮಾಡುವ ರೀತಿ, ನೀತಿಗಳನ್ನು ನೋಡಲು ಅವಕಾಶ ಸಿಕ್ಕಿತು’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ಜೆ.ಮುರುಗೇಶಪ್ಪ ಸಂತಸ ವ್ಯಕ್ತಪಡಿಸಿದರು.

ವಿವಿಧ ಧರ್ಮ, ಜಾತಿ, ಜನಾಂಗದವರು ಸಾಮರಸ್ಯದಿಂದ ಬದುಕಿದರೆ ಅದೇ ದೇಶದ ಶಕ್ತಿ. ಆಗ ಭಾರತ ಜಾಗತಿಕ ಶಕ್ತಿಯಾಗಿ ಬೆಳೆಯಲು ಸಾಧ್ಯ. ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು ಎಂದು ಹಿರಿಯ ಕಾರ್ಮಿಕ ಮುಖಂಡ ಎಚ್.ಕೆ.ಕೊಟ್ರಪ್ಪ ಅಭಿಪ್ರಾಯಪಟ್ಟರು.

ಬಿಜೆಪಿ ಮುಖಂಡ ಪರಶುರಾಮ ಕಾಟ್ವೆ, ಹರಿಹರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎ.ಕೆ.ಭೂಮೇಶ್, ಸುರೇಶ್, ಮಂಜುನಾಥ್ ಎಸ್., ಗಿರೀಶ್, ಕಾವ್ಯ, ಸುಮಂಗಲ, ಮಂಜುಳಾ, ಬಸವಲಿಂಗಮ್ಮ, ಜಮಾತೆ ಇಸ್ಲಾಂ ಹಿಂದ್ ಹರಿಹರ ಘಟಕದ ಅಧ್ಯಕ್ಷ ಅಬ್ದುಲ್ ಖಯೂಂ ಎಕ್ಕೆಗೊಂದಿ, ಮಸೀದಿಯ ಅಧ್ಯಕ್ಷ ಗುಲಾಂ ನಬಿ, ಆರ್.ಸಿ.ಉಬೇದ್ ಉಲ್ಲಾ, ಸೈಯದ್ ರಿಯಾಜ್ ಅಹಮ್ಮದ್, ಅಬ್ದುಸಲಾಂ, ಇಖ್ರಾ ಅಕಾಡಮಿ ಶಾಲೆ ಮುಖ್ಯಸ್ಥ ಅಬ್ದುಲ್ ರಹಮಾನ್, ಫಾರೂಖ್ ಖಾನ್, ನಜೀಬ್ ಉಲ್ಲಾ ಖಾನ್, ಉಸ್ಮಾನ್ ಖಾನ್, ಅದ್ನಾನ್ ಸಾಖಿಬ್ ಎಕ್ಕೆಗೊಂದಿ, ಅಫ್ಜಲ್ ಹುಸೇನ್, ಅಬ್ದುಲ್ ರಹೀಂ, ಮುಸೇಬ್ ಅನಸ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.