ಮಲೇಬೆನ್ನೂರು: ‘ಖಿನ್ನತೆಗೆ ಒಳಗಾದವರು ಸಮಾಲೋಚನೆ ಚಿಕಿತ್ಸೆ ಪಡೆದು ಆತ್ಮಹತ್ಯೆ ಆಲೋಚನೆಯಿಂದ ಪಾರಾಗಬೇಕು’ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಅಬ್ದುಲ್ ಖಾದರ್ ಹೇಳಿದರು.
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸೆ. 10ರಂದು ‘ವಿಶ್ವ ಆತ್ಮಹತ್ಯೆ ತಡೆ ದಿನʼ ಆಚರಿಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಖಿನ್ನತೆಗೆ ಒಳಗಾಗಬೇಡಿ. ಆರೋಗ್ಯ ಸಹಾಯವಾಣಿ 104 ಅಥವಾ 14416ಕ್ಕೆ ಕರೆ ಮಾಡಿ ಸಮಾಲೋಚಿಸಿ ಪರಿಹಾರ ಪಡೆದುಕೊಳ್ಳಿ. ಸತ್ಸಂಗ, ಧ್ಯಾನ, ಸಂಗೀತ ಆಲಿಸುವುದು, ಗುಂಪು ಚರ್ಚೆ, ಯೋಗ ಶಿಬಿರ, ಪುಸ್ತಕ, ದಿನಪತ್ರಿಕೆ ಓದುವ ಅಭ್ಯಾಸ ಬೆಳೆಸಿಕೊಳ್ಳಿ’ ಎಂದರು.
ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಉಮ್ಮಣ್ಣ ಮಾತನಾಡಿ, ‘ಆಟ, ಪಾಠ, ಊಟ, ನಿದ್ರೆ ಇವೇ ಆರೋಗ್ಯದ ಗುಟ್ಟು. ಆತ್ಮಹತ್ಯೆ ಎಂಬ ಪದವನ್ನು ಮನಸ್ಸಿನಿಂದ ತೆಗೆದು ಹಾಕಿ. ಸತ್ಪ್ರಜೆಯಾಗಿ’ ಎಂದು ಹೇಳಿದರು.
ತಾಲ್ಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ನಾಗರಾಜ್ ಮಾತನಾಡಿದರು. ಪ್ರಭಾರಿ ಪ್ರಾಂಶುಪಾಲ ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ನಿರೀಕ್ಷಣಾಧಿಕಾರಿ ಕಿರಣ್, ಸುಮಯ್ಯ ಬಾನು, ವಿದ್ಯಾರ್ಥಿಗಳು ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.