ADVERTISEMENT

ದಾವಣಗೆರೆ: ‘ಜಿ ರಾಮ್‌ ಜಿ’ ಕಾಯ್ದೆ ಹಿಂಪಡೆಯಲು ಆಗ್ರಹ

ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 7:23 IST
Last Updated 17 ಜನವರಿ 2026, 7:23 IST
‘ವಿಬಿ– ಜಿ ರಾಮ್‌ ಜಿ’ ಕಾಯ್ದೆ ಹಿಂಪಡೆದುಕೊಳ್ಳಬೇಕು ಎಂದು ಒತ್ತಾಯಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು –ಪ್ರಜಾವಾಣಿ ಚಿತ್ರ
‘ವಿಬಿ– ಜಿ ರಾಮ್‌ ಜಿ’ ಕಾಯ್ದೆ ಹಿಂಪಡೆದುಕೊಳ್ಳಬೇಕು ಎಂದು ಒತ್ತಾಯಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು –ಪ್ರಜಾವಾಣಿ ಚಿತ್ರ   

ದಾವಣಗೆರೆ: ಕೇಂದ್ರ ಸರ್ಕಾರ ‘ಮನರೇಗಾ’ ಮಾರ್ಪಡಿಸಿ ರೂಪಿಸಿದ ‘ವಿಬಿ– ಜಿ ರಾಮ್‌ ಜಿ’ ಕಾಯ್ದೆ ದೇಶದ ಬಡ ಮತ್ತು ಮಧ್ಯಮ ವರ್ಗದ ಉದ್ಯೋಗದ ಹಕ್ಕು ಕಸಿದುಕೊಳ್ಳುತ್ತಿದೆ. ಈ ಕಾಯ್ದೆಯನ್ನು ಕೂಡಲೇ ಹಿಂಪಡೆದುಕೊಳ್ಳಬೇಕು ಎಂದು ಒತ್ತಾಯಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅಲ್ಲಿಂದ ಹೊರಟ ಮೆರವಣಿಗೆ ಪಿ.ಬಿ ರಸ್ತೆಯ ಮೂಲಕ ಜಿಲ್ಲಾಡಳಿತ ಭವನ ತಲುಪಿತು. ಜಿಲ್ಲಾಧಿಕಾರಿ ಕಚೇರಿಯ ಮೂಲಕ ರಾಷ್ಟ್ರಪತಿಗೆ ಮನವಿ ರವಾನಿಸಲಾಯಿತು.

ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಮನರೇಗಾ) ಯೋಜನೆ ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗ ಕಲ್ಪಿಸಿತ್ತು. ಇದನ್ನು ಏಕಾಏಕಿಯಾಗಿ ಬದಲಾವಣೆ ಮಾಡಿ ಒಕ್ಕೂಟ ವ್ಯವಸ್ಥೆಕ್ಕೆ ಕೇಂದ್ರ ಸರ್ಕಾರವೇ ಧಕ್ಕೆಯುಂಟು ಮಾಡಿದೆ. ಮಹಾತ್ಮ ಗಾಂಧೀಜಿ ಅವರ ಹೆಸರು ತೆಗೆದುಹಾಕಿ ಅವಮಾನಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಉದ್ಯೋಗದ ಅಗತ್ಯ ಇರುವ ಗ್ರಾಮೀಣ ಪ್ರದೇಶದ ಜನರಿಗೆ ಕೆಲಸ ಕೊಡಬೇಕು ಎಂಬುದು ‘ಮನರೇಗಾ’ ಕಾಯ್ದೆಯ ಆಶಯ. ಕೆಲಸಕ್ಕಾಗಿ ವಲಸೆ ಹೋಗುವುದನ್ನು ತಡೆಯುವುದು ಇದರ ಮೂಲ ಉದ್ದೇಶವಾಗಿತ್ತು. ಕೇಂದ್ರ ಸರ್ಕಾರದ ಅಧಿಸೂಚನೆಗೆ ಒಳಪಟ್ಟ ಗ್ರಾಮಗಳ ಜನರಿಗೆ ಮಾತ್ರ ಉದ್ಯೋಗ ನೀಡುವುದಾಗಿ ಹೊಸ ಕಾಯ್ದೆಯಲ್ಲಿ ಬದಲಾವಣೆ ಮಾಡಲಾಗಿದೆ. ಇದು ನಿಜಕ್ಕೂ ಜನವಿರೋಧಿ ಎಂದು ದೂರಿದರು.

ಮುಂಬರುವ ಬಜೆಟ್‌ನಲ್ಲಿ ಈ ಯೋಜನೆಗೆ ₹ 2 ಲಕ್ಷ ಕೋಟಿ ಅನುದಾನ ಮೀಸಲಿಡಬೇಕು. ಕಾರ್ಮಿಕರ ಕನಿಷ್ಠ ಕೂಲಿಯನ್ನು ₹ 500ಕ್ಕೆ ಹೆಚ್ಚಳ ಮಾಡಬೇಕು. ಕೇಂದ್ರ ಮತ್ತು ರಾಜ್ಯದ ಅನುದಾನದ ಅನುಪಾತ 90:10ಕ್ಕೆ ಬದಲಾವಣೆ ಮಾಡಬೇಕು. ಕಾಮಗಾರಿಯ ಆಯ್ಕೆಯಲ್ಲಿ ಗ್ರಾಮ ಸಭೆಯ ನಿರ್ಣಯವೇ ಅಂತಿಮವಾಗಬೇಕು ಎಂದು ಒತ್ತಾಯಿಸಿದರು.

ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಲ್ಲೂರು ರವಿಕುಮಾರ್‌, ಪೀಪಲ್ಸ್‌ ಲಾಯರ್ಸ್‌ ಗಿಲ್ಡ್‌ ರಾಜ್ಯ ಘಟಕದ ಸಂಚಾಲಕ ಅನೀಸ್‌ ಪಾಷ, ಕೂಲಿ ಕಾರ್ಮಿಕ ಸಂಘಟನೆಯ ಅಧ್ಯಕ್ಷ ಎ.ಕೆ. ಗುಡ್ಡದಯ್ಯ, ಮುಖಂಡರಾದ ನೇತ್ರಾವತಿ, ಕು.ವೀರಮ್ಮ, ಹೇಮಮ್ಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.