ADVERTISEMENT

ದಾವಣಗೆರೆ: ಹಾಲಿನ ಉತ್ಪಾದನೆ ಹೆಚ್ಚಳ, ಮಾರಾಟ ಕುಸಿತ

ಶಿಮುಲ್‌ ವಹಿವಾಟಿನ ಮೇಲೆ ಲಾಕ್‌ಡೌನ್‌ ಪರಿಣಾಮ

ವಿನಾಯಕ ಭಟ್ಟ‌
Published 1 ಏಪ್ರಿಲ್ 2020, 19:45 IST
Last Updated 1 ಏಪ್ರಿಲ್ 2020, 19:45 IST
ಮಾರಾಟಕ್ಕೆ ಸಿದ್ಧವಾಗಿರುವ ನಂದಿನಿ ಹಾಲು
ಮಾರಾಟಕ್ಕೆ ಸಿದ್ಧವಾಗಿರುವ ನಂದಿನಿ ಹಾಲು   

ದಾವಣಗೆರೆ: ಲಾಕ್‌ಡೌನ್‌ ಪರಿಣಾಮ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಶಿಮುಲ್‌) ವ್ಯಾಪ್ತಿಯಲ್ಲಿ ಒಂದೆಡೆ ಹಾಲಿನ ಉತ್ಪಾದನೆ ಹೆಚ್ಚಾಗಿದ್ದು, ಇನ್ನೊಂದೆಡೆ ಮಾರಾಟ ಅಲ್ಪ ಪ್ರಮಾಣದಲ್ಲಿ ಕುಸಿದಿದೆ.

ಗೃಹ ಬಳಕೆ ವೃದ್ಧಿ; ವಾಣಿಜ್ಯ ಕುಸಿತ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಹೋಟೆಲ್‌ಗಳು, ಶಾಲಾ–ಕಾಲೇಜುಗಳ ಹಾಸ್ಟೆಲ್‌ಗಳು, ನವೋದಯ, ಮೊರಾರ್ಜಿ ವಸತಿನಿಲಯಗಳು ಬಂದ್‌ ಆಗಿರುವುದರಿಂದ ಹಾಲಿನ ವಾಣಿಜ್ಯ ಬಳಕೆ ಪ್ರಮಾಣ ಕುಸಿದಿದೆ. ಜೊತೆಗೆ ಜನ ಮನೆಯಲ್ಲೇ ಉಳಿಯುತ್ತಿರುವುದರಿಂದ ಹಾಲಿನ ಗೃಹ ಬಳಕೆ ಪ್ರಮಾಣ ಹೆಚ್ಚಾಗಿದೆ ಎನ್ನುತ್ತಾರೆ ಶಿಮುಲ್‌ನ ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಎಂ. ಲೋಹಿತೇಶ್ವರ.

‘ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಸುಮಾರು 85 ಸಾವಿರಕ್ಕೂ ಹೆಚ್ಚು ರೈತರು ಸೊಸೈಟಿಗಳಿಗೆ ಹಾಲು ಹಾಕುತ್ತಿದ್ದಾರೆ. ಸುಮಾರು 1,250 ಹಾಲು ಉತ್ಪಾದಕರ ಸಂಘಗಳಿವೆ. ಸದ್ಯ ಮೂರು ಜಿಲ್ಲೆಗಳಿಂದ ದಿನಕ್ಕೆ ಸರಾಸರಿ 5.25 ಲಕ್ಷ ಲೀಟರ್‌ ಹಾಲು ಸಂಗ್ರಹವಾಗುತ್ತದೆ. ಸರಾಸರಿ 2.20 ಲಕ್ಷ ಲೀಟರ್‌ ಹಾಲು ಮಾರಾಟವಾಗುತ್ತಿತ್ತು. ಲಾಕ್‌ಡೌನ್‌ ಇರುವುದರಿಂದ ಹಾಲಿನ ಮಾರಾಟ ಸರಾಸರಿ 20 ಸಾವಿರ ಲೀಟರ್‌ವರೆಗೂ ಕಡಿಮೆಯಾಗುತ್ತಿದೆ’ ಎಂದು ಲೋಹಿತೇಶ್ವರ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಬೇಸಿಗೆಯಾಗಿರುವುದರಿಂದ ಮೊಸರು 30 ಸಾವಿರದಿಂದ 35 ಸಾವಿರ ಲೀಟರ್‌ವರೆಗೂ ಮಾರಾಟವಾಗುತ್ತಿತ್ತು. ಆದರೆ, ಈಗ 20 ಸಾವಿರದಿಂದ 25 ಸಾವಿರ ಲೀಟರ್‌ ಮಾತ್ರ ಮಾರಾಟವಾಗುತ್ತಿದೆ. ಹೋಟೆಲ್‌ಗಳು, ವಸತಿನಿಲಯಗಳು ಬಂದ್‌ ಆಗಿರುವುದು ಹಾಗೂ ಮದುವೆಯಂತಹ ಕಾರ್ಯಕ್ರಮಗಳು ನಡೆಯದೇ ಇರುವುದರಿಂದ ಹಾಲು ಹಾಗೂ ಹಾಲಿನ ಉತ್ಪನ್ನಗಳ ವಹಿವಾಟು ಕುಸಿದಿದೆ. ಹಾಗೆ ನೋಡಿದರೆ ಸುಮಾರು 50 ಸಾವಿರ ಲೀಟರ್‌ ಹಾಲು ಮಾರಾಟವಾಗದೇ ಉಳಿಯಬೇಕಾಗಿತ್ತು. ಹೊರ ರಾಜ್ಯಗಳಿಂದ ಖಾಸಗಿ ಕಂಪನಿಗಳ ಹಾಲು ಮಾರುಕಟ್ಟೆಗೆ ಸರಿಯಾಗಿ ಬರುತ್ತಿಲ್ಲ. ಜನ ನಂದಿನಿ ಹಾಲನ್ನೇ ಹೆಚ್ಚು ಖರೀದಿಸುತ್ತಿದ್ದಾರೆ. ಹೀಗಾಗಿ ಮಾರಾಟದಲ್ಲಿ ಶೇ 5ರಷ್ಟು ಮಾತ್ರ ಕಡಿಮೆಯಾಗಿದೆ. ಹಲವು ದಿನಗಳ ಕಾಲ ಇಟ್ಟು ಬಳಸಬಹುದಾದ ಗುಡ್‌ಲೈಫ್‌ ಹಾಲು ಮೊದಲಿಗಿಂತಲೂ ಈಗ ಹೆಚ್ಚು ಮಾರಾಟವಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಉತ್ಪಾದನೆ ಹೆಚ್ಚಳ: ‘15 ದಿನಗಳಿಂದ ಸುಮಾರು 10 ಸಾವಿರ ಲೀಟರ್‌ ಹಾಲಿನ ಉತ್ಪಾದನೆ ಹೆಚ್ಚಾಗಿದೆ. ಲಾಕ್‌ಡೌನ್‌ ಆಗಿರುವುದರಿಂದ ರೈತರಿಗೆ ಬೇರೆ ಆದಾಯ ಸಿಗುತ್ತಿಲ್ಲ. ಮನೆಯಲ್ಲೇ ಉಳಿಯುತ್ತಿರುವುದರಿಂದ ಹೈನುಗಾರಿಕೆಗೆ ಒತ್ತು ನೀಡುತ್ತಿದ್ದಾರೆ’ ಎಂದು ಅವರು ಅಭಿಪ್ರಾಯಪಟ್ಟರು.

ಸ್ವೀಟ್ಸ್‌ ಉತ್ಪಾದನೆಗೆ ಮಿತಿ: ‘ಪೇಡೆ, ಮೈಸೂರು ಪಾಕ್‌ನಂತಹ ಸಿಹಿ ಉತ್ಪನ್ನಗಳು ಜೀವನಾವಶ್ಯಕ ವಸ್ತುಗಳಲ್ಲ. ಇದನ್ನು ತಯಾರಿಸಲು ಕಾರ್ಮಿಕರು ಒಂದು ಕಡೆ ಸೇರಬೇಕಾಗುತ್ತದೆ. ಘಟಕದಲ್ಲಿ ಹೆಚ್ಚಿನ ಕಾರ್ಮಿಕರು ಸೇರಿದಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟ. ಹೀಗಾಗಿ ನಾವೇ ಸಿಹಿ ಉತ್ಪನ್ನಗಳನ್ನು ಕಡಿಮೆ ಪ್ರಮಾಣದಲ್ಲಿ ಉತ್ಪಾದಿಸುತ್ತಿದ್ದೇವೆ’ ಎಂದು ತಿಳಿಸಿದರು.

ಭದ್ರಾ ಅಚ್ಚುಕಟ್ಟಿನಲ್ಲಿ ಉತ್ಪಾದನೆ ಹೆಚ್ಚು

ಸಾಮಾನ್ಯವಾಗಿ ಬೇಸಿಗೆಯಲ್ಲಿ ಹಸಿ ಮೇವು ಸಿಗದಿರುವುದರಿಂದ ಹಾಲಿನ ಉತ್ಪಾದನೆ ಕಡಿಮೆಯಾಗುತ್ತದೆ. ಆದರೆ, ಭದ್ರಾ ಅಚ್ಚುಕಟ್ಟೆ ಪ್ರದೇಶವಾದ ಭದ್ರಾವತಿ, ಶಿವಮೊಗ್ಗ, ಚನ್ನಗಿರಿ, ಹೊನ್ನಾಳಿ, ಹರಿಹರ ಹಾಗೂ ದಾವಣಗೆರೆ ತಾಲ್ಲೂಕುಗಳಲ್ಲಿ ಜಲಾಶಯದ ನೀರು ಸಿಗುವುದರಿಂದ ಹಸಿ ಮೇವು ಸಿಗುತ್ತಿದೆ. ಹೀಗಾಗಿ ಇಲ್ಲೆಲ್ಲ ಹೆಚ್ಚಿನ ಪ್ರಮಾಣದಲ್ಲಿ ಹಾಲು ಉತ್ಪಾದನೆಯಾಗುತ್ತಿದೆ ಎಂದು ಲೋಹಿತೇಶ್ವರ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.