ದಾವಣಗೆರೆ: ದೀರ್ಘ ಕಾಲ ಸಂಸದರಾಗಿದ್ದ ಜಿ.ಎಂ.ಸಿದ್ದೇಶ್ವರ ಹಾಗೂ ಕಳೆದ ಬಾರಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ದಾವಣಗೆರೆ ಅಭಿವೃದ್ಧಿಗೆ ಯಾವುದೇ ಕೊಡುಗೆ ನೀಡಲಿಲ್ಲ. ಒಂದೂವರೆ ವರ್ಷದಿಂದ ನಡೆಯುತ್ತಿರುವ ಕಾಮಗಾರಿಗಳನ್ನು ನೋಡಿ ಹತಾಶೆಗೆ ಒಳಗಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಆರೋಪಿಸಿದರು.
ಇಲ್ಲಿನ ವಿನೋಬ ನಗರದ 2ನೇ ಮುಖ್ಯ ರಸ್ತೆಯ ಗಣೇಶ ದೇಗುಲದ ಬಳಿ ಮಂಗಳವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಚರಂಡಿ ನಿರ್ಮಾಣ ಹಾಗೂ ರಸ್ತೆ ವಿಸ್ತರಣೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ನಾಲ್ಕು ವರ್ಷ ಅಧಿಕಾರದಲ್ಲಿದ್ದವರು ಉತ್ತಮ ಕೆಲಸ ಮಾಡಲಿಲ್ಲ. ನಗರವನ್ನು ಯೋಜನಾಬದ್ಧವಾಗಿ ಅಭಿವೃದ್ಧಿಪಡಿಸುವಲ್ಲಿ ವಿಫಲರಾಗಿದ್ದಾರೆ. ಅವರು ಹಾಳು ಮಾಡಿರುವುದನ್ನು ದುರಸ್ತಿ ಮಾಡುವುದೇ ಕೆಲಸವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘30 ವರ್ಷಗಳ ಹಿಂದೆ ನಗರ ಇಷ್ಟು ಸುಸ್ಥಿತಿಯಲ್ಲಿ ಇರಲಿಲ್ಲ. ಸಣ್ಣ ಮಳೆ ಸುರಿದರೂ ಎಲ್ಲೆಡೆ ನೀರು ನುಗ್ಗುತ್ತಿತ್ತು. ಕೆಸರು ರಸ್ತೆಯಲ್ಲಿ ವಾಹನಗಳು ಸಾಗಬೇಕಿತ್ತು. ಆಟೊ ಚಾಲಕರು ನಿತ್ಯವೂ ಪ್ರತಿಭಟನೆ ನಡೆಸುತ್ತಿದ್ದರು. ಇತ್ತೀಚೆಗೆ ಎಂತಹದೇ ಮಳೆ ಬಂದರೂ ರಸ್ತೆ ಹಾಳಾಗುತ್ತಿಲ್ಲ. ಈ ಬಗ್ಗೆ ಒಂದು ದೂರು ಬಂದಿಲ್ಲ’ ಎಂದು ಹೇಳಿದರು.
‘ವಿನೋಬನಗರದ 1 ಮತ್ತು 2ನೇ ಮುಖ್ಯರಸ್ತೆಯನ್ನು ಪಿ.ಬಿ.ರಸ್ತೆಯವರೆಗೆ ಅಭಿವೃದ್ಧಿಪಡಿಸಲಾಗುತ್ತಿದೆ. ಚರಂಡಿ ನಿರ್ಮಾಣ, ರಸ್ತೆ ವಿಸ್ತರಣೆ ಮಾಡಲಾಗುತ್ತಿದೆ. ವಿದ್ಯುತ್ ಮಾರ್ಗ ಮೇಲ್ದರ್ಜೆಗೆ ಏರಿಸಿದ್ದರೆ ಅನುಕೂಲವಾಗುತ್ತಿತ್ತು. ಕಾಂಕ್ರೀಟ್ ರಸ್ತೆ, ವೈಟ್ ಟ್ಯಾಪಿಂಗ್ ಬಗ್ಗೆ ಮುಂದೆ ಆಲೋಚಿಸಲಾಗುವುದು’ ಎಂದು ಹೇಳಿದರು.
‘ಧೂಡಾ’ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಮೇಯರ್ ವಿನಾಯಕ ಪೈಲ್ವಾನ್, ಪಾಲಿಕೆ ಸದಸ್ಯ ನಾಗರಾಜ್, ಆಯುಕ್ತೆ ರೇಣುಕಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.