ಕಡರನಾಯ್ಕನಹಳ್ಳಿ: ಸಮೀಪದ ಹೊಳೆ ಸಿರಿಗೆರೆ ಕ್ರಾಸ್‌ನಿಂದ ಯಲವಟ್ಟಿ ಮಾರ್ಗದ ಅಡಿಕೆ ತೋಟಗಳಲ್ಲಿ ಚಿರತೆ ಸೆರೆಗಾಗಿ ನಾಲ್ಕು ಕಡೆ ಬೋನು ಇಡಲಾಗಿದೆ. ಆದರೆ ಚಿರತೆಯ ಸುಳಿವೇ ಇಲ್ಲದಿರುವುದು ರೈತರನ್ನು ಆತಂಕಕ್ಕೆ ತಳ್ಳಿದೆ.
ಈಚೆಗಷ್ಟೇ 20 ಕುರಿಗಳನ್ನು ಬಲಿ ತೆಗೆದುಕೊಂಡ ಎರಡು ಚಿರತೆಗಳನ್ನು ಸೆರೆ ಹಿಡಿಯಲು ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿತ್ತು. ಆದರೆ ಬೋನುಗಳ ಬಳಿ ಕೋಳಿ, ಕುರಿ ಅಥವಾ ನಾಯಿಯನ್ನು ಕಟ್ಟಿದ್ದರೆ, ಚಿರತೆಗಳು ಅವುಗಳ ವಾಸನೆ ಹಿಡಿದು ಬರುವ ಸಾಧ್ಯತೆಯಿತ್ತು. ಆದರೆ ಖಾಲಿ ಬೋನು ಇರಿಸಿದರೆ ಅವು ಬರುವುದಾದರೂ ಹೇಗೆ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.
ಬೋನಿನ ಬಳಿ ಪ್ರಾಣಿಗಳನ್ನು ಕಟ್ಟಿ ಹಾಕಿ ಅರಣ್ಯ ಇಲಾಖೆ ಸಿಬ್ಬಂದಿ ಅವುಗಳ ಮೇಲೆ ನಿಗಾ ಇರಿಸಬೇಕು. ಆದರೆ ಭಾನುವಾರ ಅರಣ್ಯ ಇಲಾಖೆಯ ಸಿಬ್ಬಂದಿ ಇಲ್ಲೆಲ್ಲೂ ಕಾಣಿಸಲಿಲ್ಲ. ಈ ಬಗ್ಗೆ ವಿಚಾರಿಸಿದಾಗ, ‘ಶನಿವಾರ ರಾತ್ರಿ ಪೂರ್ತಿ ನಮ್ಮ ಸಿಬ್ಬಂದಿ ಅಲ್ಲಿದ್ದರು. ಇಂದೂ ಬರುತ್ತಾರೆ’ ಎಂದು ಡಿಆರ್‌ಎಫ್‌ಒ ಹಸನ್ ಭಾಷಾ ಸ್ಪಷ್ಟನೆ ನೀಡಿದರು.
‘ಭತ್ತ ನಾಟಿ ಕೆಲಸ ಸಾಕಷ್ಟಿದೆ. ಸುತ್ತಮುತ್ತ ಅಡಿಕೆ, ತೆಂಗಿನ ತೋಟಗಳಿದ್ದು, ಚಿರತೆಯ ಭೀತಿಯಲ್ಲಿ ಓಡಾಡಲು ಸಾಧ್ಯವಾಗುತ್ತಿಲ್ಲ. ಅರಣ್ಯ ಇಲಾಖೆಯು ಚಿರತೆಗಳನ್ನು ಸೆರೆ ಹಿಡಿಯಲು ಹೆಚ್ಚಿನ ಕ್ರಮ ತೆಗೆದುಕೊಳ್ಳಬೇಕು’ ಎಂದು ರೈತ ಕುಂದೂರು ಮಂಜಪ್ಪ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.