ದಾವಣಗೆರೆ: ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಎ. ರವೀಂದ್ರನಾಥ ಭಾನುವಾರ ಇಲ್ಲಿ ಚುನಾವಣಾ ನಿವೃತ್ತಿಯನ್ನು ಸೂಚ್ಯವಾಗಿ ಘೋಷಿಸಿದರು.
ಬಿಜೆಪಿಯ ಉತ್ತರ ವಿಧಾನಸಭಾ ಕ್ಷೇತ್ರದ ಹಿಂದುಳಿದ ವರ್ಗಗಳ ಮೋರ್ಚಾ ತಮಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಈ ನಿರ್ಧಾರವನ್ನು ಪ್ರಕಟಿಸಿದರು. ‘ಇದು ನನ್ನ ಕೊನೆ ಚುನಾವಣೆ ಎಂದುಕೊಂಡಿದ್ದೇನೆ. ನನಗೂ ಈಗ 72 ವರ್ಷ ಆಯಿತು. ಚುನಾವಣೆ ಸಾಕೆನಿಸುತ್ತಿದೆ’ ಎಂದು ತಿಳಿಸಿದರು.
‘ಈ ಹಿಂದೆ ನಾಲ್ಕು ಬಾರಿ ಗೆದ್ದು ವಿಧಾನಸಭೆಗೆ ಹೋದಾಗ ಯಾರೂ ಆಶ್ಚರ್ಯದಿಂದ ನನ್ನನ್ನು ನೋಡಿರಲಿಲ್ಲ. ಆದರೆ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ವಿರುದ್ಧ ಈಗ ಗೆದ್ದು ವಿಧಾನಸಭೆಗೆ ಹೋದಾಗ ನನ್ನನ್ನು ಪ್ರದರ್ಶನಕ್ಕೆ ಇಟ್ಟವನಂತೆ ಎಲ್ಲರೂ ಬೆರಗಿನಿಂದ ನೋಡುತ್ತಿದ್ದಾರೆ. 72 ವರ್ಷ ತುಂಬಿದರೂ ಚುನಾವಣೆಗೆ ನಿಂತು ಗೆದ್ದು ಬಂದಿರುವುದಕ್ಕೆ ಹಲವರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಅವರು ನಗೆ ಬೀರಿದರು.
‘ನನ್ನನ್ನು ಗೆಲ್ಲಿಸಿದ ನಿಮ್ಮ ಋಣ ತೀರಿಸಲು ಸಾಧ್ಯವಾಗುತ್ತದೆಯೋ ಇಲ್ಲವೋ ಗೊತ್ತಿಲ್ಲ’ ಎಂದು ಭಾವುಕರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.