ADVERTISEMENT

ಜರ್ಮನಿಯಲ್ಲಿ ಮೊಬೈಲ್‌ ಸ್ಫೋಟ: ದಾವಣಗೆರೆಯ ವಿದ್ಯಾರ್ಥಿ ಸಾವು

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2022, 6:21 IST
Last Updated 16 ಡಿಸೆಂಬರ್ 2022, 6:21 IST
ಸಂತೋಷ್ ಕುಮಾರ್
ಸಂತೋಷ್ ಕುಮಾರ್   

ದಾವಣಗೆರೆ: ಮೊಬೈಲ್‌ ದೂರವಾಣಿ ಉಪಕರಣ ಸ್ಫೋಟಗೊಂಡ ಪರಿಣಾಮ ಕೊಠಡಿಯಲ್ಲಿ ವಿದ್ಯುತ್‌ ಶಾರ್ಟ್‌ ಸರ್ಕೀಟ್‌ ಆಗಿ ಇಲ್ಲಿನ ಸರಸ್ವತಿ ನಗರ ಬಡಾವಣೆಯ ವಿದ್ಯಾರ್ಥಿಯೊಬ್ಬರು ಮೃತಪಟ್ಟಿರುವ ಘಟನೆ ಈಚೆಗೆ ಜರ್ಮನಿಯಲ್ಲಿ ಸಂಭವಿಸಿದೆ.

ಇಲ್ಲಿನ ನಿವಾಸಿಗಳಾದ ಕೆ.ರೇವಪ್ಪ, ಎ. ಇಂದಿರಮ್ಮ ಅವರ ಪುತ್ರ,ಜರ್ಮಿನಿಯಕೆಮ್‌‌ನಿಟ್ಸ್‌ ವಿಶ್ವವಿದ್ಯಾಲಯದಲ್ಲಿ ಎಂ.ಎಸ್‌ ಓದುತ್ತಿದ್ದ ಸಂತೋಷ್‌ಕುಮಾರ್ ಕೆ.ಆರ್‌. (30) ಮೃತ ವಿದ್ಯಾರ್ಥಿ.

ಸಂತೋಷ್‌ಕುಮಾರ್‌ ನವೆಂಬರ್‌ 30ರಂದು ಮೃತಪಟ್ಟಿದ್ದು, ಪಾರ್ಥಿವ ಶರೀರವು ಗುರುವಾರ ನಗರಕ್ಕೆ ತಲುಪಿದೆ. ಸ್ವಗ್ರಾಮ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಪುಣಬಘಟ್ಟದಲ್ಲಿ ಶುಕ್ರವಾರ (ಡಿ.16ರಂದು) ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ADVERTISEMENT

‘ಜರ್ಮಿನಿಯಕೆಮ್‌‌ನಿಟ್ಸ್‌ ನಗರದ ಪಿ.ಜಿ. ಒಂದರಲ್ಲಿ ವಾಸವಾಗಿದ್ದ ಸಂತೋಷ್‌ಕುಮಾರ್‌, ರಾತ್ರಿ ಮಲಗುವ ವೇಳೆ ಮೊಬೈಲ್‌ ಅನ್ನು ಚಾರ್ಜ್‌ಗೆ ಇಟ್ಟಿದ್ದರು. ಆಗ ಸ್ಫೋಟ ಸಂಭವಿಸಿ, ವಿದ್ಯುತ್‌ ಶಾರ್ಟ್‌ ಸರ್ಕೀಟ್‌ ಉಂಟಾಗಿದೆ. ಇದರಿಂದ ಕೊಠಡಿಯಲ್ಲಿ ಹೊಗೆ ಆವರಿಸಿಕೊಂಡು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಶೀತ ಗಾಳಿ ಹೆಚ್ಚಿರುವ ಕಾರಣ ಕೊಠಡಿ ಬಾಗಿಲು ಸಂಪೂರ್ಣ ಬಂದ್ ಮಾಡಿದ್ದರಿಂದ ಉಸಿರು ಕಟ್ಟಿದೆ ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ’ ಎಂದು ಮೃತರ ಸಂಬಂಧಿ ಗಿರೀಶ್ ತಿಳಿಸಿದರು.

‘ಕರೆ ಸ್ವೀಕರಿಸದ್ದರಿಂದ ಅವರ ಸ್ನೇಹಿತರ ಮೂಲಕ ವಿಚಾರಿಸಿದಾಗ ವಿಷಯ ಗೊತ್ತಾಗಿದೆ.ಮೃತದೇಹವನ್ನು ಸ್ವದೇಶಕ್ಕೆ ತರಲು ಸಾಕಷ್ಟು ಪ್ರಯಾಸ ಪಡಲಾಗಿದೆ’ ಎಂದು ಹೇಳಿದರು.

‘ಎಂ.ಟೆಕ್‌ ಓದಿದ್ದ ಸಂತೋಷ್‌ಕುಮಾರ್‌ ಬೆಂಗಳೂರಿನಲ್ಲಿ ಎರಡು ವರ್ಷ ಕೆಲಸ ಮಾಡಿದ್ದರು. ಉನ್ನತ ವ್ಯಾಸಂಗ, ಉದ್ಯೋಗದ ನಿಮಿತ್ತ ತರಬೇತಿ ಪಡೆಯಲು 2017ರಲ್ಲಿ ಜರ್ಮನಿಗೆ ಹೋಗಿದ್ದರು. ಮುಂದಿನ ವರ್ಷ ಮದುವೆ ಮಾಡಲು ಯೋಜಿಸಲಾಗಿತ್ತು. ಶಿಕ್ಷಕರಾಗಿರುವ ಕೆ.ರೇವಪ್ಪ ಹಾಗೂ ಇಂದಿರಮ್ಮ ಅವರ ಮೊದಲ ಮಗ ಶ್ರೀಧರ್‌ ಆರು ವರ್ಷಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದರು. ಈಗ ಎರಡನೇ ಮಗನನ್ನೂ ಕಳೆದುಕೊಂಡಿದ್ದಾರೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.