ದಾವಣಗೆರೆ: ಜಿಲ್ಲೆಯಲ್ಲಿ ಪೂರ್ವ ಮುಂಗಾರು ಅವಧಿಯಲ್ಲಿ ವಾಡಿಕೆಗಿಂತ ಶೇ 64ರಷ್ಟು ಹೆಚ್ಚು ಮಳೆ ಸುರಿದಿದ್ದು, ರೈತರಲ್ಲಿ ಈ ವರ್ಷ ಉತ್ತಮ ಮಳೆಯಾಗುವ ಆಶಾಭಾವ ಮೂಡಿಸಿದೆ.
ಮಾರ್ಚ್ 1ರಿಂದ ಮೇ ಅಂತ್ಯದವರೆಗಿನ ಅವಧಿಯನ್ನು ಪೂರ್ವ ಮುಂಗಾರು ಎಂದು ಪರಿಗಣಿಸಲಾಗುತ್ತದೆ. ಮೇ ತಿಂಗಳು ಮುಗಿಯುವ ಮುನ್ನವೇ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಪ್ರಮಾಣದಲ್ಲಿ ವರ್ಷಧಾರೆ ಆಗಿರುವುದು ಅನ್ನದಾತರಲ್ಲಿ ಹುಮ್ಮಸ್ಸು ತುಂಬಿದೆ. ಜೂನ್ 1ರಿಂದ ಮುಂಗಾರು ಮಳೆಯ ಆರ್ಭಟ ಶುರುವಾಗುವ ಲಕ್ಷಣ ಗೋಚರಿಸಿವೆ.
ಮಾರ್ಚ್ 1ರಿಂದ ಮೇ 16ರ ವರೆಗೆ ಜಿಲ್ಲೆಯಲ್ಲಿ ಸರಾಸರಿ 6.74 ಸೆ.ಮೀ. ವಾಡಿಕೆ ಮಳೆ ಆಗಬೇಕಿತ್ತು. ಆದರೆ, ನಿರೀಕ್ಷೆಗೂ ಮೀರಿ ಜಿಲ್ಲೆಯಲ್ಲಿ ಸರಾಸರಿ 11.07 ಸೆ.ಮೀ. ಮಳೆಯಾಗಿದೆ. ಶೇ 64ರಷ್ಟು ಹೆಚ್ಚು ಮಳೆಯಾಗಿರುವುದರಿಂದ ರೈತರು ವಿವಿಧ ಬೀಜಗಳ ಬಿತ್ತನೆಗೆ ಜಮೀನುಗಳನ್ನು ಹದಗೊಳಿಸಲು ನೆರವಾಗಿದೆ. ಜಿಲ್ಲೆಯಲ್ಲಿ ಮೆಕ್ಕೆಜೋಳ ಹಾಗೂ ಭತ್ತವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ತೊಗರಿ, ಶೇಂಗಾ, ರಾಗಿ ಬೆಳೆಯನ್ನೂ ಬೆಳೆಯಲಾಗುತ್ತಿದೆ.
ಪೂರ್ವ ಮುಂಗಾರು ಅವಧಿಯಲ್ಲಿ ಜಿಲ್ಲೆಯ ವಿವಿಧೆಡೆ ಒಟ್ಟು 39 ಹೆಕ್ಟೇರ್ ತೋಟಗಾರಿಕಾ ಬೆಳೆ ಹಾನಿಗೀಡಾಗಿದೆ. ದಾವಣಗೆರೆ ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಾಳೆ, ಪಪ್ಪಾಯ ಹಾಗೂ ಟೊಮೆಟೊ ಬೆಳೆ ನಾಶವಾಗಿದೆ. 21 ಹೆಕ್ಟೇರ್‌ನಲ್ಲಿ ಬಾಳೆ, 13 ಹೆಕ್ಟೇರ್‌ನಲ್ಲಿ ಪಪ್ಪಾಯ ಬೆಳೆ, 3.20 ಹೆಕ್ಟೇರ್‌ನಲ್ಲಿ ವೀಳ್ಯದೆಲೆ ಬೆಳೆ ಹಾನಿಗೊಳಗಾಗಿದೆ. ಟೊಮೆಟೊ ಹಾಗೂ ನುಗ್ಗೆಕಾಯಿ ಬೆಳೆಯೂ ಒಂದಿಷ್ಟು ಪ್ರಮಾಣದಲ್ಲಿ ವರುಣನ ಆರ್ಭಟಕ್ಕೆ ತುತ್ತಾಗಿದೆ.
‘ಜಿಲ್ಲೆಯಲ್ಲಿ ಪೂರ್ವ ಮುಂಗಾರು ಅವಧಿಯ ಈ ವರೆಗೂ ಒಂದು ಮನೆ, ದನದ ಕೊಟ್ಟಿಗೆ ಹಾಗೂ ಸರ್ಕಾರಿ ಶಾಲಾ ಕೊಠಡಿಗೆ ಹಾನಿಯಾಗಿದೆ. ಶೇ 25 ಕ್ಕಿಂತ ಹೆಚ್ಚು ಭಾಗ ಹಾನಿಗೀಡಾದರೆ ಮಾತ್ರ ಪರಿಹಾರಕ್ಕೆ ಪರಿಗಣಿಸಲು ನಿಯಮಗಳಲ್ಲಿ ಅವಕಾಶ ಇದೆ. ಹೀಗಾಗಿ ಮನೆ, ಕೊಟ್ಟಿಗೆ, ಶಾಲಾ ಕೊಠಡಿಗಳು ಸೇರಿದಂತೆ ಇನ್ನಿತರ ಕಟ್ಟಡಗಳಿಗೆ ಸಣ್ಣಪುಟ್ಟ ಹಾನಿಯಾಗಿದ್ದರೂ, ಅವುಗಳನ್ನು ದಾಖಲಿಸಿಲ್ಲ’ ಎಂದು ಜಿಲ್ಲಾಧಿಕಾರಿ ಕಾರ್ಯಾಲಯದ ಸಿಬ್ಬಂದಿ ಮಾಹಿತಿ ನೀಡಿದರು.
ಮೇ 12ರಂದು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರು ಮುಂಗಾರು ಅವಧಿಯಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಸಲಹೆ ನೀಡಿದರು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಟಾಸ್ಕ್‌ಫೋರ್ಸ್ ರಚಿಸುವಂತೆಯೂ ಸೂಚಿಸಿದರು.
ಜಿಲ್ಲೆಯಲ್ಲಿ ಜೂನ್ ಮೊದಲ ವಾರದಿಂದ ಬಿತ್ತನೆ ಕಾರ್ಯ ಶುರುವಾಗುವ ಸಾಧ್ಯತೆ ಇದೆ. ರೈತರಿಗೆ ವಿತರಿಸಲು ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ದಾಸ್ತಾನು ಮಾಡಿಕೊಳ್ಳಲಾಗಿದೆಶ್ರೀನಿವಾಸ್ ಚಿಂತಾಲ್ ಜಂಟಿ ನಿರ್ದೇಶಕ ಕೃಷಿ ಇಲಾಖೆ
ನೀರಾವರಿ ಬೋರ್‌ವೆಲ್ ಸೌಲಭ್ಯ ಇರುವ ಪ್ರದೇಶದಲ್ಲಿ ಭತ್ತದ ಕೊಯ್ಲು ನಡೆಯುತ್ತಿದೆ. ಕುಷ್ಕಿ (ಬೆದ್ದಲು) ಜಮೀನುಗಳನ್ನು ಹದ ಮಾಡಿಕೊಳ್ಳಲಾಗಿದ್ದು ಬೀಜ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆಬಿ.ಎಂ.ಷಣ್ಮುಖಯ್ಯ ರೈತ ಆವರಗೊಳ್ಳ
ಈ ಬಾರಿ ಉತ್ತಮ ಮಳೆಯಾಗಿದ್ದು ಜಮೀನುಗಳನ್ನು ಹಸನು ಮಾಡಿಕೊಳ್ಳಲಾಗಿದೆ. ಈರುಳ್ಳಿ ಬೀಜ ಬಿತ್ತನೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆಮುನಿ ಎಸ್.ಎಂ. ರೈತ ಜಗಳೂರು
Cut-off box -
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.