ADVERTISEMENT

ಶವ ಸಾಗಣೆಗೆ ಹಣವಿಲ್ಲದೇ ಪರದಾಟ

ದಾವಣಗೆರೆ: ಎರಡು ಗಂಟೆ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲೇ ಉಳಿದ ಶವ

​ಪ್ರಜಾವಾಣಿ ವಾರ್ತೆ
Published 1 ಮೇ 2021, 6:02 IST
Last Updated 1 ಮೇ 2021, 6:02 IST
ದಾವಣಗೆರೆಯ ಜಿಲ್ಲಾ ಆಸ್ಪತ್ರೆ ಎದುರು ಮೃತದೇಹ
ದಾವಣಗೆರೆಯ ಜಿಲ್ಲಾ ಆಸ್ಪತ್ರೆ ಎದುರು ಮೃತದೇಹ   

ದಾವಣಗೆರೆ: ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯೊಬ್ಬರ ಶವ ಸಾಗಿಸಲು ಹಣವಿಲ್ಲದೇ ಸಂಬಂಧಿಕರು ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಎರಡು ಗಂಟೆಗಳ ಕಾಲ ಶವವನ್ನು ಇಟ್ಟು ಪರದಾಡಬೇಕಾಯಿತು.

ಶವವನ್ನು ಅಂತ್ಯ ಸಂಸ್ಕಾರ ನಡೆಸಲು ಚಿತಾಗಾರಕ್ಕೆ ತೆಗೆದುಕೊಂಡು ಹೋಗಬೇಕಿತ್ತು. ಆದರೆ ಆಸ್ಪತ್ರೆಯ ಆವರಣದಲ್ಲಿ ಆಂಬುಲೆನ್ಸ್ ಇರಲಿಲ್ಲ. ಮೃತಪಟ್ಟ ವ್ಯಕ್ತಿಯ ಸಂಬಂಧಿಕರು ಖಾಸಗಿ ಆಂಬುಲೆನ್ಸ್ ಕರೆತಂದಿದ್ದು, ಚಾಲಕ ₹4 ಸಾವಿರ ಕೊಡದೇ ಹೋಗುವುದಿಲ್ಲ ಎಂದು ಪಟ್ಟು ಹಿಡಿದ. ಇದರಿಂದಾಗಿ ಎರಡು ಗಂಟೆಗಳಿಗೂ ಹೆಚ್ಚು ಕಾಲ ಖಾಸಗಿ ಆಂಬುಲೆನ್ಸ್‌ನಲ್ಲಿ ಶವ ಇಟ್ಟುಕೊಂಡು ಕಾಯಬೇಕಾದ ಪರಿಸ್ಥಿತಿ ಬಂದಿತು.

‘ಹಣವನ್ನು ಆಮೇಲೆ ಕೊಡ್ತೀವಿ’ ಎಂದು ಎಷ್ಟೇ ಬೇಡಿಕೊಂಡರು ಖಾಸಗಿ ಆಂಬುಲೆನ್ಸ್ ಚಾಲಕ ‘ಮೊದಲು ದುಡ್ಡು ಹೊಂದಿಸಿಕೊಳ್ಳಿ, ಆಮೇಲೆ ಹೋಗೋಣ’ ಎಂದು ಹೇಳಿ ಹೋಗಿದ್ದ. ಹೀಗಾಗ ಮೃತನ ಸಂಬಂಧಿಕರು ಕೂಡ ಹಣ ಹೊಂದಿಸುವುದಕ್ಕಾಗಿ ಹೆಣಗಾಡುತ್ತಿದ್ದ ಪರಿಸ್ಥಿತಿ ಮನಕಲಕುವಂತೆ ಇತ್ತು.

ADVERTISEMENT

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್. ಬಸವಂತಪ್ಪ ಅವರು ಸ್ಥಳಕ್ಕೆಬಂದು ಮಹಾನಗರಪಾಲಿಕೆ ಅಧಿಕಾರಿಗಳ ಮನವೊಲಿಸಿ ‘ಮುಕ್ತಿವಾಹಿನಿ’ ವಾಹನ ಒದಗಿಸಿಕೊಡುವಂತೆ ಮನವಿ ಮಾಡಿದರು. ಬಳಿಕ ಖಾಸಗಿ ಆಂಬುಲೆನ್ಸ್‌ನಿಂದ ಶವವನ್ನು ಇಳಿಸಿ ಮುಕ್ತಿವಾಹಿನಿಗೆ ಹಾಕಿಕೊಂಡು ಚಿತಾಗಾರಕ್ಕೆ ತೆಗೆದುಕೊಂಡು ಹೋಗಲಾಯಿತು.

‘ಕೋವಿಡ್ ಪರಿಸ್ಥಿತಿಯಲ್ಲೂ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಇಲ್ಲದೇ ಪರದಾಡಬೇಕಾದ ಪರಿಸ್ಥಿತಿ ಬಂದಿದೆ. ಪ್ರತಿನಿತ್ಯ ಕೋವಿಡ್‌ನಿಂದ ಮೃತಪಡುವವರ ಸಂಖ್ಯೆ ಹೆಚ್ಚುತ್ತಿದ್ದು, ಜಿಲ್ಲಾಡಳಿತ ಕೂಡಲೇ ಶವಗಳನ್ನ ಸಾಗಿಸಲು ವ್ಯವಸ್ಥೆ ಮಾಡಬೇಕು. ಆಂಬುಲೆನ್ಸ್ ಖರೀದಿಗೆ ಜಿಲ್ಲಾಧಿಕಾರಿ ಅನುಮತಿ ನೀಡಿದ್ದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್‌. ಬಸವಂತಪ್ಪ ದೂರಿದ್ದಾರೆ.

‘ಮಹಾನಗರ ಪಾಲಿಕೆಯಿಂದ ಒಂದು ಮುಕ್ತಿವಾಹನವಿದ್ದು, ಎರಡು ಆಂಬುಲೆನ್ಸ್‌ ಖರೀದಿಸುವ ಕಾರ್ಯ ಪ್ರಗತಿಯಲ್ಲಿದೆ. ಶೀಘ್ರ ಆಂಬುಲೆನ್ಸ್ ಖರೀದಿಸಲಾಗುವುದು’ ಎಂದು ಡಿಎಚ್‌ಒ ಡಾ.ನಾಗರಾಜ್
ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.