ADVERTISEMENT

ಜಾತ್ಯತೀತತೆ ಸಾಬೀತುಪಡಿಸಿದ ಹೊನ್ನಾಳಿ ತಾಲ್ಲೂಕು: ಶಾಸಕ ರೇಣುಕಾಚಾರ್ಯ

ವಿಧಾನಪರಿಷತ್‌ ಸದಸ್ಯ ಡಿ.ಎಸ್. ಅರುಣ್‌ಗೆೆ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2022, 4:44 IST
Last Updated 5 ಜನವರಿ 2022, 4:44 IST
ಹೊನ್ನಾಳಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರದಲ್ಲಿ ವಿಧಾನಪರಿಷತ್ ಸದಸ್ಯ ಡಿ.ಎಸ್. ಅರುಣ್ ಅವರನ್ನು ಅಭಿನಂದಿಸಲಾಯಿತು.
ಹೊನ್ನಾಳಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರದಲ್ಲಿ ವಿಧಾನಪರಿಷತ್ ಸದಸ್ಯ ಡಿ.ಎಸ್. ಅರುಣ್ ಅವರನ್ನು ಅಭಿನಂದಿಸಲಾಯಿತು.   

ಹೊನ್ನಾಳಿ: ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಡಿ.ಎಸ್. ಅರುಣ್ ಅವರಿಗೆ ತಾಲ್ಲೂಕಿನಿಂದ ಹೆಚ್ಚು ಮತಗಳು ಚಲಾವಣೆಯಾಗಿದ್ದು, ಇದು ಜಾತ್ಯತೀತ ತಾಲ್ಲೂಕು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ತಿಳಿಸಿದರು.

ಹಿರೇಕಲ್ಮಠದ ಸಮುದಾಯ ಭವನದಲ್ಲಿ ನೂತನವಾಗಿ ವಿಧಾನಪರಿಷತ್‌ಗೆ ಆಯ್ಕೆಯಾದ ಡಿ.ಎಸ್. ಅರುಣ್ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನಾನು ಮಾಡಿದ ಅಭಿವೃದ್ಧಿ ಕಾರ್ಯಗಳು ನನ್ನನ್ನು ಚುನಾವಣೆಯಲ್ಲಿ ಮೂರು ಬಾರಿ ಗೆಲ್ಲಿಸಿವೆ. ಟೀಕೆ ಮಾಡುವವರು ಮಾಡಲಿ’ ಎಂದರು.

ADVERTISEMENT

ವಿಧಾನಪರಿಷತ್ ಸದಸ್ಯ ಡಿ.ಎಸ್. ಅರುಣ್ ಮಾತನಾಡಿ, ‘ಹೊನ್ನಾಳಿ, ನ್ಯಾಮತಿ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಮತಗಳು ಸಿಗಲು ಶಾಸಕ ಎಂ.ಪಿ. ರೇಣುಕಾಚಾರ್ಯ ಕಾರಣ. ಪ್ರತಿ ವಿಧಾನಸಭಾ ಕ್ಷೇತ್ರದ ಶಾಸಕರು, ಜನಪ್ರತಿನಿಧಿಗಳೂ ಬೆಂಬಲ ನೀಡಿದರು. ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಹೇಳಿದರು.

‘ಚುನಾವಣಾ ಪೂರ್ವದಲ್ಲಿ ಪ್ರತಿ ಗ್ರಾಮ ಪಂಚಾಯಿತಿಯನ್ನು ಡಿಜಿಟಲೀಕರಣ ಮಾಡುವುದಾಗಿ ಹೇಳಿದ್ದೆ. ಇದನ್ನು ಈಡೇರಿಸಲು ಶ್ರಮಿಸುವೆ. ಗ್ರಾಮ ಪಂಚಾಯಿತಿ ಸದಸ್ಯರಿಗೆ ಗೌರವಧನ ಹೆಚ್ಚಿಸುವ ಕುರಿತು ಸದನದಲ್ಲಿ ಪ್ರಸ್ತಾಪಿಸುವೆ’ ಎಂದು ಹೇಳಿದರು.

ಶಾಂತರಾಜ್ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಪಿಎಂಸಿ ನಿರ್ದೇಶಕ ಕೆ.ಪಿ. ಕುಬೇರಪ್ಪ, ಮುಖಂಡ ಅರಕೆರೆ ನಾಗರಾಜ್, ಕೆ.ವಿ. ಚನ್ನಪ್ಪ ಮಾತನಾಡಿದರು. ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಎಚ್. ಗುರುಮೂರ್ತಿ, ಎ.ಬಿ. ಹನುಮಂತಪ್ಪ, ಬಿಜೆಪಿತಾಲ್ಲೂಕು ಅಧ್ಯಕ್ಷ ಜೆ.ಕೆ. ಸುರೇಶ್, ಪುರಸಭಾ ಅಧ್ಯಕ್ಷ ಬಾಬು ಹೋಬಳದಾರ್, ಉಪಾಧ್ಯಕ್ಷೆ ರಂಜಿತಾ ಚನ್ನಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.