ADVERTISEMENT

ದಾವಣಗೆರೆ: ಗೊತ್ತಿದ್ದವರೇ ರೈತ ದಂಪತಿಯ ಬರ್ಬರ ಕೊಲೆ ಮಾಡಿದರೇ?

ಎಲೆಬೇತೂರು ಗ್ರಾಮವನ್ನು ಬೆಚ್ಚಿ ಬೀಳಿಸಿದ ಘಟನೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2022, 15:54 IST
Last Updated 25 ಜನವರಿ 2022, 15:54 IST
ಗುರುಸಿದ್ದಯ್ಯ ಮಠದ ಹಾಗೂ ಸರೋಜಮ್ಮ ದಂಪತಿ
ಗುರುಸಿದ್ದಯ್ಯ ಮಠದ ಹಾಗೂ ಸರೋಜಮ್ಮ ದಂಪತಿ   

ದಾವಣಗೆರೆ: ತಾಲ್ಲೂಕಿನ ಎಲೆಬೇತೂರು ಗ್ರಾಮದಲ್ಲಿ ದುಷ್ಕರ್ಮಿಗಳು ವೃದ್ಧ ರೈತ ದಂಪತಿಯನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಈ ಭೀಕರ ಘಟನೆಯು ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ.

ಎಲೆಬೇತೂರು ಗ್ರಾಮದ ಗುರುಸಿದ್ದಯ್ಯ ಮಠದ (86) ಹಾಗೂ ಸರೋಜಮ್ಮ (68) ಕೊಲೆಯಾದ ರೈತ ದಂಪತಿ.

ಮೂವರು ಹೆಣ್ಣು ಮಕ್ಕಳನ್ನೂ ಮದುವೆ ಮಾಡಿಕೊಟ್ಟಿದ್ದ ದಂಪತಿ, ಮನೆಯಲ್ಲಿ ಇಬ್ಬರೇ ವಾಸ ಮಾಡುತ್ತಿದ್ದರು. ಮನೆಯೊಳಗೆ ಬಂದಿದ್ದ ದುಷ್ಕರ್ಮಿಗಳು ಹಾಲ್‌ನಲ್ಲಿ ಪತಿ ಹಾಗೂ ಪತ್ನಿಯ ಕತ್ತನ್ನು ಹರಿತವಾದ ಆಯುಧದಿಂದ ಸೀಳಿ ಕೊಲೆ ಮಾಡಿದ್ದಾರೆ. ರಕ್ತದ ಮಡುವಿನಲ್ಲಿ ದಂಪತಿ ಬಿದ್ದಿದ್ದ ದೃಶ್ಯ ಮನಕಲಕುವಂತಿತ್ತು. ಘಟನೆಯಿಂದ ಆತಂಕಗೊಂಡಿದ್ದ ಗ್ರಾಮದ ಜನ ಮನೆಯ ಸುತ್ತಲೂ ಸಾಗರೋಪಾದಿಯಲ್ಲಿ ಸೇರಿದ್ದರು.

ADVERTISEMENT

ಮಂಗಳವಾರ ಬೆಳಿಗ್ಗೆ ದಂಪತಿ ಮನೆಯಿಂದ ಹೊರಗೆ ಬಾರದೇ ಇರುವುದರಿಂದ ಪಕ್ಕದ ಮನೆಯವರು ಬಂದು ನೋಡಿದ್ದಾರೆ. ಮನೆಯ ಮುಂಬಾಗಿಲು ಹಾಕಿಕೊಂಡಿತ್ತು. ಹಿಂಬಾಗಿಲು ತೆರೆದುಕೊಂಡಿದ್ದು, ಹಾಲ್‌ನಲ್ಲಿ ಇಬ್ಬರೂ ಬಿದ್ದುಕೊಂಡಿರುವುದು ಕಂಡುಬಂದಿದೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ಬಂದು ಪರಿಶೀಲಿಸಿದರು. ಶ್ವಾನವು ಎಲೆಬೇತೂರಿನಿಂದ ಬಸಾಪುರದವರೆಗೂ ಓಡಿ ಹೋಗಿ ವಾಪಸ್‌ ಬಂದಿದೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌ ಸೇರಿ ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

‘ಮೂರು ಎಕರೆ ಅಡಿಕೆ ತೋಟ ಇತ್ತು. ಇದರಿಂದ ಬಂದ ಆದಾಯದಲ್ಲಿ ಸುಮಾರು ₹ 25 ಲಕ್ಷದಿಂದ ₹ 30 ಲಕ್ಷದವರೆಗೆ ತಂದೆ ಜನರಿಗೆ ಕೈಗಡವಾಗಿ ಸಾಲ ನೀಡಿದ್ದರು. ಸೋಮವಾರ ಬೆಳಿಗ್ಗೆ ತಾಯಿಗೆ ಫೋನ್‌ ಕರೆ ಮಾಡಿ ಆರೋಗ್ಯವನ್ನೂ ವಿಚಾರಿಸಿಕೊಂಡಿದ್ದೆ. ಯಾರೋ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ’ ಎಂದು ಗುರುಸಿದ್ದಯ್ಯ ಅವರ ಪುತ್ರಿ ಜ್ಯೋತಿ ಅವರು ಪೊಲೀಸ್‌ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ತನಿಖೆ ಚುರುಕು: ಪ್ರಕರಣದ ತನಿಖೆಗಾಗಿ ಪ್ರೊಬೇಷನರಿ ಐಪಿಎಸ್‌ ಅಧಿಕಾರಿ ಮಿಥುನ್‌ ನೇತೃತ್ವದ ತಂಡ ತನಿಖೆ ಚುರುಕುಗೊಳಿಸಿದೆ. ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದೆ. ಸಂಬಂಧಿಕರು, ಸ್ನೇಹಿತರು, ಗ್ರಾಮಸ್ಥರನ್ನು ಪೊಲೀಸರು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜಮೀನಿನಲ್ಲಿದ್ದ ಮರವನ್ನು ಕಟಾವು ಮಾಡಿಸಲಾಗಿತ್ತು. ಇದನ್ನು ಮಾರಾಟ ಮಾಡಿ ಬರುವ ಹಣವನ್ನು ಮೂವರೂ ಹೆಣ್ಣುಮಕ್ಕಳಿಗೆ ಹಂಚಿಕೆ ಮಾಡಬೇಕಾಗಿತ್ತು. ಈ ವಿಚಾರದಲ್ಲೇನಾದರೂ ಗಲಾಟೆ ನಡೆದಿತ್ತೇ ಎಂದು ತನಿಖೆ ನಡೆಸಲಾಗುತ್ತಿದೆ. ಗುರುಸಿದ್ದಯ್ಯ ಅವರು ಸಾಲ ಕೊಟ್ಟವರೊಂದಿಗೆ ಏನಾದರೂ ಜಗಳ ಮಾಡಿಕೊಂಡಿದ್ದರೇ ಎಂಬ ಆಯಾಮದಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದೂ ಮೂಲಗಳು ಹೇಳಿವೆ.

ಹಿಂದಿನ ಬಾಗಿಲು ತೆರೆದಿತ್ತು, ಟಿವಿ ಆನ್‌ ಆಗಿತ್ತು!

‘ರಸ್ತೆಗೆ ತಾಗಿಕೊಂಡಿರುವ ಗುರುಸಿದ್ದಯ್ಯ ಅವರ ಮನೆಯ ಮುಂದಿನ ಬಾಗಿಲು ಹಾಕಿಕೊಂಡಿತ್ತು. ಆದರೆ, ಹಿಂಬಾಗಿಲು ಮಾತ್ರ ತೆರೆದುಕೊಂಡಿತ್ತು. ಬಾಗಿಲ ಚಿಲಕವೂ ಒಡೆದಿರಲಿಲ್ಲ. ಬೆಳಿಗ್ಗೆ ಪೊಲೀಸರು ಮನೆಯೊಳಗೆ ಹೋದಾಗ ಟಿವಿ ಇನ್ನೂ ಆನ್‌ ಆಗಿಯೇ ಇತ್ತು. ಇದನ್ನು ಗಮನಿಸಿದರೆ ಸೋಮವಾರ ರಾತ್ರಿ 10ರೊಳಗೆ ಕೊಲೆ ನಡೆದಿರಬಹುದು’ ಎಂದು ಪೊಲೀಸರು ಶಂಕಿಸಿದ್ದಾರೆ.

‘ಮನೆಯಲ್ಲಿ ದರೋಡೆ ಮಾಡಿದಂತಹ ಯಾವುದೇ ಕುರುಹುಗಳು ಮೇಲ್ನೇಟಕ್ಕೆ ಕಂಡು ಬಂದಿರಲಿಲ್ಲ. ಸರೋಜಮ್ಮ ಅವರ ಮೈಮೇಲಿನ ಒಡವೆಗಳು ಇದ್ದವು. ಮೇಲ್ನೋಟಕ್ಕೆ ನೋಡಿದರೆ ಗುರುಸಿದ್ದಯ್ಯ ಅವರ ಬಗ್ಗೆ ಗೊತ್ತಿರುವವರೇ ಕೃತ್ಯ ಎಸಗಿರಬಹುದೇನೋ ಅನಿಸುತ್ತಿದೆ’ ಎಂದು ಶಂಕಿಸಲಾಗಿದೆ.

*

ದಂಪತಿ ಕೊಲೆ ಪ್ರಕರಣದ ತನಿಖೆಯನ್ನು ಎಲ್ಲಾ ಆಯಾಮಗಳಿಂದಲೂ ನಡೆಸಲಾಗುತ್ತಿದೆ. ಶೀಘ್ರದಲ್ಲೇ ಪ್ರಕರಣವನ್ನು ಭೇದಿಸಲಾಗುವುದು.

– ಸಿ.ಬಿ. ರಿಷ್ಯಂತ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.