ADVERTISEMENT

ಸಂಗೀತಗಾರರಿಗೆ ಇಲ್ಲ ‘ನೌಕರಿ ಭಾಗ್ಯ’

ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ನೇಮಕಾತಿ

ವಿನಾಯಕ ಭಟ್ಟ‌
Published 13 ಮಾರ್ಚ್ 2019, 10:42 IST
Last Updated 13 ಮಾರ್ಚ್ 2019, 10:42 IST

ದಾವಣಗೆರೆ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಪದವೀಧರ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಮುಂದಾಗಿದ್ದು, ಸಂಗೀತ ಶಿಕ್ಷಕರಾಗುವ ಕನಸು ಕಾಣುತ್ತಿದ್ದ ಸಂಗೀತಗಾರರು ಈ ಬಾರಿಯೂ ‘ನೌಕರಿ ಭಾಗ್ಯ’ ಮರೀಚಿಕೆಯಾಗಿದೆ.

ಖಾಲಿ ಇರುವ 10,611 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6ರಿಂದ 8ನೇ ತರಗತಿ) ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಫೆಬ್ರುವರಿ 22ರಂದು ರಾಜ್ಯ ಸರ್ಕಾರ ಒಪ್ಪಿಗೆ ನೀಡಿತ್ತು. ಮಾರ್ಚ್‌ 5ರಂದು ಜಿಲ್ಲಾವಾರು ಖಾಲಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಇಂಗ್ಲಿಷ್‌, ಗಣಿತ/ ವಿಜ್ಞಾನ ಹಾಗೂ ಸಮಾಜ ವಿಜ್ಞಾನ ವಿಷಯಗಳ ಶಿಕ್ಷಕರ ಹುದ್ದೆಗಳಿಗೆ ಮಾತ್ರ ನೇಮಕ ಮಾಡಿಕೊಳ್ಳಲಾಗುತ್ತಿದೆ. ಸಂಗೀತ ಶಿಕ್ಷಕರ ನೇಮಕಾತಿಗೆ ಅವಕಾಶ ಕಲ್ಪಿಸದೆ ಇರುವುದರಿಂದ ಸಂಗೀತಗಾರರ ಭವಿಷ್ಯ ಅತಂತ್ರವಾಗಿದೆ.

ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಸಂಗೀತ, ಚಿತ್ರಕಲಾ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ 1,041 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿದರೆ ಹೆಚ್ಚಿನ ಆರ್ಥಿಕ ಹೊರೆ ಉಂಟಾಗಲಿದೆ. ಹೀಗಾಗಿ ನೇಮಕಾತಿ ಪ್ರಸ್ತಾವವನ್ನು ಒಂದು ವರ್ಷದವರೆಗೆ ಮುಂದೂಡುವಂತೆ ಆರ್ಥಿಕ ಇಲಾಖೆ ತಿಳಿಸಿದೆ ಎಂದು ಪ್ರಾಥಮಿಕ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಜನವರಿ 24ರಂದು ಮಾಹಿತಿ ಹಕ್ಕಿನಡಿ ಸಲ್ಲಿಸಿದ್ದ ಅರ್ಜಿಗೆ ಹಿಂಬರಹ ನೀಡಿರುವುದು ಆಕಾಂಕ್ಷಿಗಳಲ್ಲಿ ಆತಂಕ ಮೂಡಿಸಿತ್ತು. ಇದೀಗ ನೇಮಕಾತಿಯಲ್ಲಿ ಅವಕಾಶ ಕಲ್ಪಿಸದಿರುವುದು ‘ಗಾಯದ ಮೇಲೆ ಬರೆ’ ಎಳೆದಂತಾಗಿದೆ.

ADVERTISEMENT

ನಿರುದ್ಯೋಗಿ ಸಂಗೀತಗಾರರು: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಪ್ರತಿ ವರ್ಷ ಹಿಂದೂಸ್ಥಾನಿ ಸಂಗೀತ ಹಾಗೂ ಕರ್ನಾಟಕ ಸಂಗೀತದಲ್ಲಿ ಕಿರಿಯ ದರ್ಜೆ, ಹಿರಿಯ ದರ್ಜೆ, ವಿದ್ವತ್‌ ಪೂರ್ವ ಹಾಗೂ ವಿದ್ವತ್‌ ದರ್ಜೆ ಅಂತಿಮ ಪರೀಕ್ಷೆಗಳನ್ನು ನಡೆಸುತ್ತಿದೆ. ಪ್ರತಿ ವರ್ಷ ಒಂದು ಸಾವಿರಕ್ಕೂ ಹೆಚ್ಚು ಜನ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಿದ್ದಾರೆ. ಎಂಟು ವರ್ಷಗಳಿಂದ ರಾಜ್ಯ ಸರ್ಕಾರ ಸಂಗೀತ ಶಿಕ್ಷಕರನ್ನು ನೇಮಕ ಮಾಡಿಕೊಳ್ಳದಿರುವುದರಿಂದ ವರ್ಷದಿಂದ ವರ್ಷಕ್ಕೆ ನಿರುದ್ಯೋಗಿ ಸಂಗೀತಗಾರರ ಸಂಖ್ಯೆ ಹೆಚ್ಚುತ್ತಿದೆ.

‘ರಾಜಕಾರಣಿಗಳು, ಅಧಿಕಾರಿಗಳು ಪಠ್ಯೇತರ ಚುಟುವಟಿಕೆಗೂ ಆದ್ಯತೆ ನೀಡಿ ಎಂದು ಭಾಷಣ ಮಾಡುತ್ತಿದ್ದಾರೆ. ಆದರೆ, ಸಂಗೀತ, ಚಿತ್ರಕಲೆ ಶಿಕ್ಷಕರ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ನೇಮಕ ಮಾಡಿಕೊಳ್ಳಲು ಆರ್ಥಿಕ ಹೊರೆಯ ನೆಪ ಹೇಳಲಾಗುತ್ತಿದೆ. ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ’ ಎಂದು ನಗರದ ಖಾಸಗಿ ಶಾಲೆಯಲ್ಲಿ ಸಂಗೀತ ಶಿಕ್ಷಕರಾಗಿರುವ ಎನ್‌.ಎಸ್‌. ಪ್ರಭುಶಂಕರ್‌ ಅಳಲು ತೋಡಿಕೊಂಡರು.

ಬೆಳಗಾವಿ ಅಧಿವೇಶನದ ವೇಳೆ ಸಂಗೀತ ಶಿಕ್ಷಕರ ನೇಮಕಕ್ಕೆ ಒತ್ತಾಯಿಸಿ ಪ್ರತಿ ವರ್ಷ ಹೋರಾಟ ನಡೆಸುತ್ತಿದ್ದೇವೆ. ನೇಮಕಾತಿ ಮಾಡುವುದಾಗಿ ಸರ್ಕಾರ ನೀಡಿದ್ದ ಭರವಸೆ ಸುಳ್ಳಾಗಿದೆ. ಸಂಗೀತ, ದೈಹಿಕ ಶಿಕ್ಷಕರ ನೇಮಕಕ್ಕೆ ಮಾತ್ರ ಆರ್ಥಿಕ ಹೊರೆಯಾಗುತ್ತದೆಯೇ? ಸಂಗೀತ ಶಿಕ್ಷಕರೆಂದರೆ ಸರ್ಕಾರಕ್ಕೆ ತಾತ್ಸಾರ’ ಎಂದು ನಿರುದ್ಯೋಗಿ ಸಂಗೀತ ಶಿಕ್ಷಕರ ಹೋರಾಟ ಸಮಿತಿ ಕಾರ್ಯದರ್ಶಿ ಯಶವಂತ ಬಡಿಗೇರ ಬೇಸರ ವ್ಯಕ್ತಪಡಿಸಿದರು.

**

ನಿತ್ಯದ ತರಗತಿ ನಡೆಸಲು ತುರ್ತು ಅಗತ್ಯವಿರುವ ಪ್ರಧಾನ ವಿಷಯಗಳ ಶಿಕ್ಷಕರ ಖಾಲಿ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಮಾತ್ರ ಆದ್ಯತೆ ನೀಡಲಾಗಿದೆ.
– ಸಿ.ಆರ್‌. ಪರಮೇಶ್ವರಪ್ಪ, ಡಿಡಿಪಿಐ, ದಾವಣಗೆರೆ

**

ಸಂಗೀತ ಕಾರ್ಯಕ್ರಮಗಳನ್ನು ನೀಡಲು ಕನ್ನಡ ಸಂಸ್ಕೃತಿ ಇಲಾಖೆಯೂ ಅನುದಾನ ಕಡಿತಗೊಳಿಸಿರುವುದರಿಂದ ಕಲಾವಿದರ ಬದುಕು ಬೀದಿಗೆ ಬರುವಂತಾಗಿದೆ.
– ಯಶವಂತ ಬಡಿಗೇರ, ಕಾರ್ಯದರ್ಶಿ, ನಿರುದ್ಯೋಗಿ ಸಂಗೀತ ಶಿಕ್ಷಕರ ಹೋರಾಟ ಸಮಿತಿ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.