ಸಿದ್ದರಾಮಯ್ಯ , ಮುಖ್ಯಮಂತ್ರಿ
ದಾವಣಗೆರೆ: ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ನಿಧನದಿಂದ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಎದುರಾಗಲಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನೀಡುವಂತೆ ಮುಸ್ಲಿಂ ಸಮುದಾಯ ಬೇಡಿಕೆ ಇಟ್ಟಿದೆ. ಮುಖಂಡರ ಅಹವಾಲು ಆಲಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ವರದಿ ನೀಡುವೆ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದರು.
‘ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್‌ನ ಪ್ರಮುಖ ನಾಯಕರಾಗಿದ್ದರು. 2023ರ ಚುನಾವಣೆಯೇ ಅಂತಿಮ ಎಂಬುದಾಗಿ ಅವರು ಘೋಷಣೆ ಮಾಡಿದ್ದರು. ಮುಂಬರುವ ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡುವುದಾಗಿ ಅವರು ಭರವಸೆ ನೀಡಿದ್ದರು ಎಂಬುದಾಗಿ ಮುಖಂಡರು ಹೇಳುತ್ತಿದ್ದಾರೆ. ಇದನ್ನು ವರದಿಯಲ್ಲಿ ಉಲ್ಲೇಖಿಸುವೆ. ಎಐಸಿಸಿ ಗಮನಕ್ಕೂ ತರುವೆ’ ಎಂದು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ 2028ರವರೆಗೆ ಮುಂದುವರಿಯಲಿದ್ದಾರೆ. ಸಿಎಂ ಕುರ್ಚಿ ಖಾಲಿಯಾದಾಗ ಮಾತ್ರ ಮತ್ತೊಬ್ಬರನ್ನು ಮುಖ್ಯಮಂತ್ರಿ ಮಾಡುವ ಆಲೋಚನೆ ಮಾಡಬಹುದು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.
‘ಡ್ರಗ್ಸ್ ಪ್ರಕರಣದಲ್ಲಿ ದಾವಣಗೆರೆ ಪೊಲೀಸರು ಬಂಧಿಸಿರುವ ಅನ್ವರ್ ನನ್ನ ಆಪ್ತನಲ್ಲ, ಪರಿಚಿತ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಆಹ್ವಾನದ ಮೇರೆಗೆ ಅನ್ವರ್ ಗೃಹ ಪ್ರವೇಶ ಹಾಗೂ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.