ADVERTISEMENT

ಹರಿಹರ| ನೈಸರ್ಗಿಕ ಕರೆ: ವಿದ್ಯಾರ್ಥಿಗಳಿಗೆ ಬಯಲೇ ಗತಿ

ಸಾರಥಿ: 113 ವರ್ಷಗಳ ಸರ್ಕಾರಿ ಶಾಲೆಯಲ್ಲಿ ಸೌಲಭ್ಯಗಳ ಕೊರತೆ

ಇನಾಯತ್ ಉಲ್ಲಾ ಟಿ.
Published 9 ಫೆಬ್ರುವರಿ 2023, 5:14 IST
Last Updated 9 ಫೆಬ್ರುವರಿ 2023, 5:14 IST
ಹರಿಹರ ತಾಲ್ಲೂಕಿನ ಸಾರಥಿ ಗ್ರಾಮದ ಶತಮಾನ ಕಂಡ ಶಾಲೆ.
ಹರಿಹರ ತಾಲ್ಲೂಕಿನ ಸಾರಥಿ ಗ್ರಾಮದ ಶತಮಾನ ಕಂಡ ಶಾಲೆ.   

ಹರಿಹರ: ಸರ್ಕಾರಿ ಶಾಲೆಗಳು ಮೂಲ ಸೌಲಭ್ಯಗಳ ಕೊರತೆ ಎದುರಿಸುತ್ತಿವೆ ಎನ್ನುವುದಕ್ಕೆ ತಾಲ್ಲೂಕಿನ ಸಾರಥಿ ಗ್ರಾಮದ 113 ವರ್ಷಗಳ ಹಳೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾಕ್ಷಿಯಾಗಿದೆ.

1910ರಲ್ಲಿ ಆರಂಭವಾದ ಈ ಶಾಲೆಯಲ್ಲಿ ಪ್ರಸ್ತುತ 127 ವಿದ್ಯಾರ್ಥಿನಿಯರು, 155 ವಿದ್ಯಾರ್ಥಿಗಳು ಸೇರಿ ಒಟ್ಟು 282 ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ 155 ವಿದ್ಯಾರ್ಥಿಗಳು ನೈಸರ್ಗಿಕ ಕರೆಗೆ ಓಗೊಡಲು ಈಗಲೂ ಬಯಲನ್ನೇ ಅವಲಂಬಿಸಿದ್ದಾರೆ.

ತಾಲ್ಲೂಕಿನಲ್ಲಿ ಹೆಚ್ಚು ವಿದ್ಯಾರ್ಥಿಗಳಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಪೈಕಿ ಈ ಶಾಲೆ 3ನೇ ಸ್ಥಾನದಲ್ಲಿದೆ. ಆದರೂ ಇಲ್ಲಿ ಸಮಸ್ಯೆಗಳ ಸರಮಾಲೆಯೇ ಇದೆ. ಗ್ರಾಮದ ಸಿರಿವಂತರ ಮಕ್ಕಳು ಹರಿಹರ, ದಾವಣಗೆರೆಯ ಖಾಸಗಿ ಶಾಲೆಗಳಲ್ಲಿ ಓದುತ್ತಿದ್ದಾರೆ. ಬಡವರ ಮಕ್ಕಳಿಗೆ ಈ ಶಾಲೆಯೇ ಗತಿಯಾಗಿದ್ದು ಅಭಿವೃದ್ಧಿ ಮರೀಚಿಕೆಯಾಗಿದೆ.

ADVERTISEMENT

ಶಾಲೆಯಲ್ಲಿ ಶೌಚಾಲಯವಿದೆ. ಆದರೆ, ಅದು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಇಲ್ಲದ್ದರಿಂದ ಅದನ್ನು ವಿದ್ಯಾರ್ಥಿನಿಯರಿಗೆ ಮೀಸಲಿಡಲಾಗಿದೆ. ಅದೂ ಕಿರಿದಾಗಿದ್ದರಿಂದ ಅವರೆಲ್ಲ ಶೌಚಾಲಯದ ಎದುರು ಸರದಿ ಸಾಲಲ್ಲಿ ನಿಂತು ಕಾಯುವ ಶಿಕ್ಷೆ ಅನುಭವಿಸುತ್ತಾರೆ.

ಮನೆಯಿಂದ ತಟ್ಟೆ ತರಬೇಕು: ಬಿಸಿ ಊಟ ಸೇವಿಸಲು ಈ ಶಾಲೆಯ ವಿದ್ಯಾರ್ಥಿಗಳು ಮನೆಯಿಂದಲೇ ತಟ್ಟೆ ತರುತ್ತಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ತಟ್ಟೆಗಳಿಲ್ಲದ್ದರಿಂದ ವಿದ್ಯಾರ್ಥಿಗಳು ಪಾಟಿ ಚೀಲದಲ್ಲಿ ಪುಸ್ತಕಗಳ ಜೊತೆಗೆ ತಟ್ಟೆಯನ್ನೂ ಇಟ್ಟುಕೊಂಡು ಬರುವುದು ಅನಿವಾರ್ಯವಾಗಿದೆ.

ಕುಡುಕರ ಕಾಟ: ಶಾಲಾ ಕಾಂಪೌಡ್ ಕಿರಿದಾಗಿದ್ದು, ಪ್ರವೇಶದ್ವಾರಕ್ಕೆ ಅಳವಡಿಸಿರುವ ಗೇಟ್‌ ಮುರಿದಿರುವುದರಿಂದ ಶಾಲಾ ಅವಧಿಯ ನಂತರ ಕುಡುಕರ ಪಾರ್ಟಿ ಆರಂಭವಾಗುತ್ತದೆ. ಬೆಳಿಗ್ಗೆ ಶಾಲೆಗೆ ಬರುವ ಶಿಕ್ಷಕರು, ಬಿಸಿ ಊಟ ಸಿಬ್ಬಂದಿ ಒಡೆದ ಮದ್ಯದ ಬಾಟಲಿ, ಸೈಡ್ಸ್ ಉಳಿಕೆಯನ್ನು ಆಯ್ದು ಸ್ವಚ್ಛ ಮಾಡಬೇಕಿದೆ. ಶಾಲಾ ಕಾಂಪೌಂಡ್ ಎತ್ತರಿಸಿ, ಗೇಟ್‌ ನಿರ್ಮಿಸಿ, ಸಿ.ಸಿ. ಟಿವಿ ಕ್ಯಾಮೆರಾ ಅಳವಡಿಸಿದರೆ ಈ ಸಮಸ್ಯೆಗೆ ಪರಹಾರ ಸಿಗಲಿದೆ ಎಂಬುದು ಪಾಲಕರ ಅಭಿಪ್ರಾಯ.

ಕೊಠಡಿ ಶಿಥಿಲ: ಈ ಶಾಲೆಯಲ್ಲಿ ಒಟ್ಟು 13 ಕೊಠಡಿಗಳಿವೆ. ಈ ಪೈಕಿ ಶತಮಾನ ಕಂಡ 5 ಕೆಂಪು ಹೆಂಚಿನ ಕೊಠಡಿಗಳಿದ್ದು, ಅವು ಶಿಥಿಲಗೊಂಡಿವೆ. ಮಳೆಗಾಲದಲ್ಲಿ ಸೋರುತ್ತವೆ. ಮೇಲಿಂದ ಮೇಲೆ ದುರಸ್ತಿಗೆ ಬರುತ್ತವೆ. 5 ಆರ್‌ಸಿಸಿ ಕೊಠಡಿಗಳನ್ನು ನಿರ್ಮಿಸಬೇಕಿದೆ.

ಬೆಂಚುಗಳು ಬೇಕು: 7ನೇ ತರಗತಿ ಹೊರತುಪಡಿಸಿ ಉಳಿದ ತರಗತಿಗಳಲ್ಲಿ ವಿದ್ಯಾರ್ಥಿಗಳು ನೆಲದ ಮೇಲೆ ಕುಳಿತು ಪಾಠ, ಪ್ರವಚನ ಕೇಳಬೇಕು. ಚಳಿ ಮತ್ತು ಮಳೆಗಾಲದಲ್ಲಿ ವಿದ್ಯಾರ್ಥಿಗಳು ನೆಲದ ಮೇಲೆ ಕುಳಿತುಕೊಳ್ಳುವುದು ಕಷ್ಟಕರವೆನಿಸುತ್ತದೆ. ಎಲ್ಲಾ ತರಗತಿಗಳಿಗೆ ಬೆಂಚಿನ ವ್ಯವಸ್ಥೆಯಾಗಬೇಕಿದೆ ಎಂದು ಎಸ್‌ಡಿಎಂಸಿ ಸದಸ್ಯರು ಮನವಿ ಮಾಡಿದ್ದಾರೆ.

.......

ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯ ಸಂಕೀರ್ಣ ನಿರ್ಮಿಸಬೇಕು. 1ರಿಂದ 4ನೇ ತರಗತಿವರೆಗಿನ ಇಂಗ್ಲಿಷ್‌ ಮಾಧ್ಯಮ ತರಗತಿಗಳಿಗೆ ಪ್ರತ್ಯೇಕ ಶಿಕ್ಷಕರನ್ನು ನೇಮಿಸಬೇಕು.

-ಡಿ.ಡಿ. ಹನುಮಂತಪ್ಪ, ಸದಸ್ಯರು, ಶಾಲಾಭಿವೃದ್ಧಿ ಸಮಿತಿ, ಸಾರಥಿ

**

ಶಾಲೆಗೆ ಅಗತ್ಯವಾದ ಸೌಲಭ್ಯಗಳನ್ನು ರೂಪಿಸಲು ಶಿಕ್ಷಣ ಇಲಾಖೆಗೆ ಪ್ರಸ್ತಾಪ ಸಲ್ಲಿಸಲಾಗಿದೆ. ಹಂತ, ಹಂತವಾಗಿ ಈಡೇರುವ ವಿಶ್ವಾಸವಿದೆ.

-ಜಮಾಲುದ್ದೀನ್, ಮುಖ್ಯಶಿಕ್ಷಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.