ADVERTISEMENT

ನೀಟ್‌ ಪರೀಕ್ಷೆ: ನಿಸರ್ಗಗೆ 55 ನೇ ರ‍್ಯಾಂಕ್‌

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2020, 16:54 IST
Last Updated 16 ಅಕ್ಟೋಬರ್ 2020, 16:54 IST
ನಿಸರ್ಗ ಎಚ್‌.ಎಸ್‌.
ನಿಸರ್ಗ ಎಚ್‌.ಎಸ್‌.   

ದಾವಣಗೆರೆ: ಇಲ್ಲಿನ ಸರ್‌ ಎಂ.ವಿ. ಪಿಯು ಕಾಲೇಜಿನ ವಿದ್ಯಾರ್ಥಿನಿ ನಿಸರ್ಗ ಎಚ್‌.ಎಸ್‌. ನೀಟ್‌ ಪರೀಕ್ಷೆಯಲ್ಲಿ 55ನೇ ರ‍್ಯಾಂಕ್‌ ಪಡೆದು ಸಾಧನೆ ಮಾಡಿದ್ದಾಳೆ.

ನೀಟ‌್‌ ಪರೀಕ್ಷೆಯಲ್ಲಿ ಆಲ್‌ ಇಂಡಿಯಾ ರ‍್ಯಾಂಕಿಂಗ್‌ನಲ್ಲಿ 55ನೇ ರ್‍ಯಾಂಕ್‌ ಹಾಗೂ ಜನರಲ್‌ ಮೆರಿಟ್‌ನಲ್ಲಿ 42ನೇ ರ‍್ಯಾಂಕ್‌ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾಳೆ.

ನಿಸರ್ಗ ಇಲ್ಲಿನ ವಿದ್ಯಾನಗರದ ವಿನಾಯಕ ಬಡಾವಣೆಯ ನಿವಾಸಿ ಯುಬಿಡಿಟಿ ಎಂಜಿನಿಯರಿಂಗ್‌ ಕಾಲೇಜಿನ ಪ್ರಾಧ್ಯಾಪಕ ಸುದರ್ಶನ ರೆಡ್ಡಿ ಎಚ್‌.ಆರ್. ಹಾಗೂ ಹೆಚ್ಚುವರಿ ಮುಖ್ಯ ವಿದ್ಯುತ್‌ ಪರಿವೀಕ್ಷಕರಾದ ಶಶಿಕಲಾ ಬಿ.ವಿ. ದಂಪತಿ ಪುತ್ರಿ.

ADVERTISEMENT

‘ಕಠಿಣ ಪರಿಶ್ರಮ, ನಿರ್ದಿಷ್ಟ ಗುರಿ ಇದ್ದರೆ ಏನನ್ನಾದರೂ ಸಾಧನೆ ಮಾಡಬಹುದು. ಮೊದಲಿನಿಂದಲೂ ನೀಟ್‌ ಪರೀಕ್ಷೆ ಮೇಲೆಯೇ ಗಮನ ಕೇಂದ್ರೀಕರಿಸಿದ್ದೆ. ಎರಡು ವರ್ಷಗಳಿಂದ ಪರೀಕ್ಷೆಗಾಗಿ ಪರಿಶ್ರಮದಿಂದ ಓದುತ್ತಿದೆ. ಪ್ರತಿದಿನ 4 ಗಂಟೆಗೂ ಹೆಚ್ಚು ಕಾಲ ಓದುತ್ತಿದ್ದೆ. ರಾತ್ರಿ ಹೊತ್ತು ಓದುತ್ತಿದ್ದೆ. ಕಾಲೇಜಿನಲ್ಲಿ ಮಾಡುತ್ತಿದ್ದ ಪರೀಕ್ಷೆಗಳು, ಕೊರೊನಾ ನಂತರ ಆರಂಭಿಸಿದ ಆನ್‌ಲೈನ್‌ ತರಗತಿಗಳು ಹೆಚ್ಚು ಸಹಕಾರಿಯಾದವು’ ಎಂದು ನಿಸರ್ಗ ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡಳು.

‘ಮೊದಲು ತಂದೆ, ತಾಯಿಗೆ ಧನ್ಯವಾದ ಅರ್ಪಿಸುವೆ. ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕರು ಸೇರಿ ಎಲ್ಲ ಸಿಬ್ಬಂದಿ ಸಹಕಾರ ನೀಡುತ್ತಿದ್ದರು. ಇದು ಸಾಧನೆಗೆ ನೆರವಾಯಿತು. ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ’ ಎಂದು ಹೇಳಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.