ADVERTISEMENT

ದಾವಣಗೆರೆ: ಆರೋಗ್ಯದ ನಿರ್ಲಕ್ಷ್ಯ ಸಲ್ಲ; ವೈದ್ಯರನ್ನು ಕಾಣಿ: ತಜ್ಞ ವೈದ್ಯರ ಸಲಹೆ

ತಜ್ಞ ವೈದ್ಯರ ಸಲಹೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2023, 4:36 IST
Last Updated 3 ಫೆಬ್ರುವರಿ 2023, 4:36 IST
ಡಾ. ಮಹಾಂತೇಶ್‌
ಡಾ. ಮಹಾಂತೇಶ್‌   

ದಾವಣಗೆರೆ: ಮದ್ಯಪಾನ, ಧೂಮಪಾನ, ತಂಬಾಕು ಸೇವನೆ ಸೇರಿದಂತೆ ಯಾವುದೇ ದುಶ್ಚಟ ಇಲ್ಲದಿದ್ದರೂ ಕ್ಯಾನ್ಸರ್‌ ಬರುತ್ತದೆಯೇ, ವಂಶವಾಹಿಗಳು ಕ್ಯಾನ್ಸರ್‌ಗೆ ಕಾರಣವಾಗಬಲ್ಲವೇ? ಚಿಕ್ಕಮಕ್ಕಳಲ್ಲೂ ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್‌ ಬರಲು ಕಾರಣವೇನು ಎಂಬುದು ಸೇರಿದಂತೆ ಹಲವು ಪ್ರಶ್ನೆಗಳು ಗುರುವಾರ ನಡೆದ ‘ಪ್ರಜಾವಾಣಿ’ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಎದುರಾದವು.

ಎಲ್ಲದಕ್ಕೂ ಸಮಾಧಾನದಿಂದ ಉತ್ತರಿಸಿದ ಇಲ್ಲಿನ ಬಾಡಾ ಕ್ರಾಸ್‌ ಬಳಿಯ ವಿಶ್ವಾರಾಧ್ಯ ಕ್ಯಾನ್ಸರ್‌ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯ ತಜ್ಞ ವೈದ್ಯರಾದ ಡಾ. ಇಬ್ರಾಹಿಂ ನಾಗನೂರು, ಡಾ. ಮಹಾಂತೇಶ್‌ ಎ.ಸಿ., ಡಾ. ಅಜಯ್‌ ಸಿ., ಡಾ. ಜಗದೀಶ್‌ ತುಬಚಿ, ಡಾ.ರಾಜೀವ್‌ ಎ.ಜಿ. ಅವರು ಕ್ಯಾನ್ಸರ್‌ ಕುರಿತು ಓದುಗರಲ್ಲಿರುವ ಗೊಂದಲಗಳನ್ನು ನಿವಾರಿಸಿದರು.

ಕ್ಯಾನ್ಸರ್‌ ತಡೆಗೆ ಅರಿವು, ಜಾಗೃತಿ ಮುಖ್ಯ. ಸಮಸ್ಯೆ ಬಂದಾಗ ನಿರ್ಲಕ್ಷ್ಯ ತೋರದೇ ತಜ್ಞ ವೈದ್ಯರನ್ನು ಕಂಡು ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದರು. ಸರ್ಕಾರದ ಆರೋಗ್ಯ ಯೋಜನೆಗಳ ಅಡಿ ನಮ್ಮ ಆಸ್ಪತ್ರೆಯಲ್ಲಿ ಎಲ್ಲ ಚಿಕಿತ್ಸೆಗೆ ರಿಯಾಯಿತಿ ಇದೆ. ಖರ್ಚಿನ ಬಗ್ಗೆ ಚಿಂತಿಸದೇ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ADVERTISEMENT

l ಮೂಳೆಗಳಲ್ಲಿ ನೋವು ಇರುತ್ತದೆ. ಇದು ಮೂಳೆ ಕ್ಯಾನ‌್ಸರ್‌ ಇರಬಹುದೇ, ಹಾಗಂದರೇನು?

ಪವಮಾನ, ಚಿತ್ರದುರ್ಗ 

ಡಾ. ಮಹಾಂತೇಶ್‌: ಮೂಳೆಗಳಲ್ಲಿ ನೋವು, ಉರಿ ಇದ್ದರೆ ತಕ್ಷಣ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಳ್ಳಿ. ಆರೋಗ್ಯದಲ್ಲಿನ ಕೆಲ ಏರುಪೇರುಗಳು ಕ್ಯಾನ್ಸರ್‌ ಆಗಿರಲಾರದು. ಒಂದೊಂದು ಕ್ಯಾನ್ಸರ್‌ಗೆ ಒಂದೊಂದು ಲಕ್ಷಣ ಇರುತ್ತವೆ. ಈಗ ಸರ್ಕಾರದ ಆರೋಗ್ಯ ಯೋಜನೆಗಳ ಸೌಲಭ್ಯ ಎಲ್ಲ ಆಸ್ಪತ್ರೆಗಳಲ್ಲೂ ಲಭ್ಯ ಇವೆ. ಯಾವುದಕ್ಕೂ ಒಮ್ಮೆ ತಪಾಸಣೆ ಮಾಡಿಸಿಕೊಂಡರೆ ರೋಗ ಪತ್ತೆ ಹಚ್ಚಬಹುದು.

l ಮಕ್ಕಳಲ್ಲಿ ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್‌ ಕಾಣಿಸಿಕೊಳ್ಳಲು ಕಾರಣವೇನು? ಮಕ್ಕಳಲ್ಲಿ ರೆಟಿನೊ ಬ್ಲಾಸ್ಟೊಮಾ ಕ್ಯಾನ್ಸರ್‌ಗೆ ಕಾರಣ, ಲಕ್ಷಣವೇನು?

ಹಂಪಣ್ಣ ದಾವಣಗೆರೆ, ಬಶೀರ್‌ ಅಹಮ್ಮದ್‌, ಜಗಳೂರು

ಡಾ. ಇಬ್ರಾಹಿಂ: ವಂಶವಾಹಿಗಳು ಮಕ್ಕಳಲ್ಲಿ ಕ್ಯಾನ್ಸರ್‌ ಕಾಣಿಸಿಕೊಳ್ಳಲು ಕಾರಣ. ರೆಟಿನೊ ಬ್ಲಾಸ್ಟೊಮಾ ಬಂದರೆ ಕಣ್ಣಿನಲ್ಲಿ ಪೊರೆ ಕಾಣಿಸಿ ಕೊಳ್ಳುತ್ತದೆ. ಕಣ್ಣಿನ ಕಪ್ಪು ಗುಡ್ಡೆ ಬಿಳಿಯಾಗುತ್ತಾ ಹೋಗುತ್ತದೆ. ಇದು ಹೆಚ್ಚಾದಂತೆ ಮಕ್ಕಳಲ್ಲಿ ಅಂಧತ್ವ ಕಾಣಿಸಿಕೊಳ್ಳುವ ಅಪಾಯ ಇರುತ್ತದೆ. ತಕ್ಷಣ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯುವುದು ಉತ್ತಮ.

ಎಲೆಅಡಿಕೆಗೆ ತಂಬಾಕು ಕಡ್ಡಿ ಜತೆಗೆ ಸೂರ್ಯಕಾಂತಿ ಕಡ್ಡಿ ಮಿಶ್ರಣ ಮಾಡಿ ಬಳಸುವ ಅಭ್ಯಾಸ ಇದೆ. ಇದರಿಂದ ಸಮಸ್ಯೆ ಆಗಲಿದೆಯೇ?

ಸುರೇಶ್‌, ಚಳ್ಳಕೆರೆ

ಡಾ. ಮಹಾಂತೇಶ್‌: ಇದು ವಿಷಕ್ಕೆ ವಿಷ ಸೇರಿಸಿ ಕುಡಿದಂತೆ. ತಂಬಾಕು ಸೇವನೆ ಅಭ್ಯಾಸ ಬಿಡಿ. ಕ್ಯಾನ್ಸರ್‌ ಬರುವ ಸಾಧ್ಯತೆ ಹೆಚ್ಚು. ಸಮಸ್ಯೆ ಇದ್ದರೆ ತಕ್ಷಣ ವೈದ್ಯರನ್ನು ಕಾಣಿ.

l ಬಾಯಿ ಕ್ಯಾನ್ಸರ್ ಲಕ್ಷಣಗಳೇನು? 

ಸಂತೋಷ್‌, ಶ್ರೀನಿವಾಸ ನಗರ, ದಾವಣಗೆರೆ

ಡಾ. ಮಹಾಂತೇಶ್‌: ಬಾಯಿಯಲ್ಲಿ ಹುಣ್ಣು, ಊತ ಬಾಯಿ ಕ್ಯಾನ್ಸರ್ ಲಕ್ಷಣಗಳು. ಸಮಸ್ಯೆ ಇದ್ದರೆ ತಕ್ಷಣ ಪರೀಕ್ಷಿಸಿಕೊಳ್ಳಿ.

l ಗಂಟಲಲ್ಲಿ ಗಂಟು ಇದೆ ಎಂದು ವೈದ್ಯರಲ್ಲಿ ಪರೀಕ್ಷಿಸಿದರೆ ಹೈಪೋಥೈರಾಯ್ಡ್ ಎಂದು ಚಿಕಿತ್ಸೆ ನೀಡಿದ್ದಾರೆ. 4 ತಿಂಗಳು ಆಗಿದೆ. ರೇಡಿಯೇಷನ್‌ ಬೇಡ ಎಂದು ಮತ್ತೆ 6 ತಿಂಗಳ ನಂತರ ಬರಲು ಹೇಳಿದ್ದಾರೆ. ಏನಾದರೂ ಸಮಸ್ಯೆ ಇದೆಯೇ?

ಈರಣ್ಣ, ಹೂವಿನ ಹಡಗಲಿ, ವಿಜಯನಗರ

ಡಾ.ಮಹಾಂತೇಶ್‌: ಗಂಟಲಲ್ಲಿ ಗಂಟು ಇದ್ದರೆ ಪರೀಕ್ಷೆ ಮಾಡಿಸಿಕೊಳ್ಳಿ. 6 ತಿಂಗಳ ನಂತರ ಮತ್ತೆ ತೋರಿಸುವುದು ಉತ್ತಮ. ವೈದ್ಯರು ಮತ್ತೆ ಸ್ಕ್ಯಾನಿಂಗ್ ಮಾಡಿ ಹೆಚ್ಚಿನ ಸಮಸ್ಯೆ ಇದ್ದರೆ ತಿಳಿಸುತ್ತಾರೆ. ಪರೀಕ್ಷೆ ಮಾಡಿಕೊಳ್ಳುವುದು ಉತ್ತಮ.

l ಚಿಕ್ಕಪ್ಪನಿಗೆ ಕುಡಿತದ ಚಟ ಇದೆ. ಇದರಿಂದ ಕ್ಯಾನ್ಸರ್‌ ಬರುವ ಸಾಧ್ಯತೆ ಇದೆಯೇ?

ಕುಮಾರ್‌, ಚನ್ನಗಿರಿ

ಡಾ. ಮಹಾಂತೇಶ್‌: ಕುಡಿತ ಒಳ್ಳೆಯದಲ್ಲ, ದುಶ್ಚಟಗಳಿಂದ ಕ್ಯಾನ್ಸರ್‌ ಬರುತ್ತದೆ. ಸಮಸ್ಯೆ ಇದ್ದರೆ ಪರೀಕ್ಷಿಸಿಕೊಳ್ಳಿ.

l ಗಂಟಲು ಕೆರೆತ ಇದೆ. ಇದು ಕ್ಯಾನ್ಸರ್‌ ಲಕ್ಷಣವೇ?

ಬಸವರಾಜ್‌, ಹಿರಿಯೂರು

ಡಾ. ಇಬ್ರಾಹಿಂ: ಬೀಡಿ, ಸಿಗರೇಟು ಸೇದುವ ಅಭ್ಯಾಸ ಇದೆಯೇ? ಇಎನ್‌ಟಿ ವೈದ್ಯರನ್ನು ಕಂಡು ಗಂಟಲು ಪರೀಕ್ಷೆ ಮಾಡಿಸಿಕೊಳ್ಳಿ. ಇಲ್ಲದಿದ್ದರೆ ವಿಶ್ವಾರಾಧ್ಯ ಕ್ಯಾನ್ಸರ್‌ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಂಡರೆ ಪರಿಹಾರ ಸಿಗುತ್ತದೆ.

l ಗುಟ್ಕಾ ಸೇವನೆಯಿಂದ ಹೇಗೆ ಕ್ಯಾನ್ಸರ್‌ ಬರುತ್ತದೆ?

ಸಂತೋಷ್‌, ದಾವಣಗೆರೆ

ಡಾ. ಇಬ್ರಾಹಿಂ: ಗುಟ್ಕಾದ ರಾಸಾಯನಿಕ ಅಂಶಗಳು ಬಾಯಿ ಕ್ಯಾನ್ಸರ್‌ಗೆ ಕಾರಣ. ಇದರಿಂದ ಬಾಯಿಯಿಂದ ಕರುಳಿನವರೆಗೆ ಯಾವುದೇ ಕ್ಯಾನ್ಸರ್‌ ಬರಬಹುದು. ಇದನ್ನು ಬಿಡಿ.

l ಕ್ಯಾನ್ಸರ್‌ ಇದೆಯೇ ಎಂದು ಹೇಗೆ ಗೊತ್ತಾಗುತ್ತದೆ? ಜನರಲ್‌ ಪರೀಕ್ಷೆ ಇದೆಯೇ?

ಭರತ್ ಬಿದ್ದಪ್ಪ, ದಾವಣಗೆರೆ

ಡಾ. ಇಬ್ರಾಹಿಂ: ರಕ್ತದ ಮಾದರಿ ತೆಗೆದುಕೊಂಡು ಪರೀಕ್ಷೆ ಮಾಡಿಸಿದರೆ ಕ್ಯಾನ್ಸರ್‌ ರೋಗ ಇದೆಯೇ ಇಲ್ಲವೋ ಎಂಬುದು ತಿಳಿಯುತ್ತದೆ.

l ಚಿಕ್ಕಮ್ಮನಿಗೆ ಗರ್ಭಕೋಶದ ಕ್ಯಾನ್ಸರ್‌ ಇದೆ. ರಕ್ತ ನೀಡಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಯಾವ ಹಂತದಲ್ಲಿದೆ?

ಶರತ್‌, ಶಿಕಾರಿಪುರ, ಶಿವಮೊಗ್ಗ

ಡಾ. ಅಜಯ್‌: ಯಾವ ಹಂತ ಎಂದು ವಿಳಂಬ ಮಾಡದೇ ತಕ್ಷಣ ನಮ್ಮ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಳ್ಳಿ. ಪರಿಹಾರ ಸಾಧ್ಯ.

l ಕ್ಯಾನ್ಸರ್‌ ವಂಶಪಾರಂಪರ್ಯವಾಗಿ ಬರುತ್ತದೆಯೇ?

ಶುಭಾ, ದಾವಣಗೆರೆ; ಸ್ಪಂದನ, ಹರಿಹರ

ಡಾ.ರಾಜೀವ್‌: ಹೌದು ವಂಶವಾಹಿಗಳು ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಮಹಿಳೆಯರಲ್ಲಿ ಸ್ತನ, ಗರ್ಭಕಂಠದ ಕ್ಯಾನ್ಸರ್‌ ಹಾಗೂ ‍ಪುರುಷರಲ್ಲಿ ಹಲವು ಬಗೆಯ ಕ್ಯಾನ್ಸರ್‌ ಕಾಣಿಸಿಕೊಳ್ಳುತ್ತದೆ. ಕುಟುಂಬದವರಲ್ಲಿ ಕ್ಯಾನ್ಸರ್‌ ಲಕ್ಷಣ ಇದ್ದರೆ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಿ.

l ಗುಟ್ಕಾ ತಿನ್ನುವ ಅಭ್ಯಾಸ ಇದೆ. ಇದರಿಂದ ಕ್ಯಾನ್ಸರ್‌ ಬರುತ್ತದೆಯೇ? ಬಾಯಿಯಲ್ಲಿ ಗುಳ್ಳೆಗಳು ಎದ್ದಿವೆ.

ಶ್ರೀಧರ್‌, ಚಿತ್ರದುರ್ಗ

ಡಾ. ರಾಜೀವ್‌: ಹೌದು
ಗುಟ್ಕಾ ಸೇವೆನೆಯಿಂದ ಬಾಯಿ, ಶ್ವಾಸಕೋಶದ ಕ್ಯಾನ್ಸರ್ ಬರುತ್ತದೆ. ದುಶ್ಚಟ ಬಿಡಿ.

l ಗಂಟಲು ಕಟ್ಟಿಕೊಳ್ಳುತ್ತದೆ, ಉಗುಳು ನುಂಗಲು ಆಗುತ್ತಿಲ್ಲ. ಇದು ಕ್ಯಾನ್ಸರ್‌ ಲಕ್ಷಣವೇ?

ಆಂಜನೇಯ ಮೂರ್ತಿ,
ದಾವಣಗೆರೆ

ಡಾ. ಜಗದೀಶ್: ಯಾವುದಕ್ಕೂ ಒಮ್ಮೆ ಆಸ್ಪತ್ರೆಗೆ ಬಂದು ಪರೀಕ್ಷೆ
ಮಾಡಿಸಿಕೊಳ್ಳಿ

................

l ಅಡುಗೆ ಎಣ್ಣೆಯನ್ನು ವಿಪರೀತವಾಗಿ ಬಳಸುವುದರಿಂದ ಕ್ಯಾನ್ಸರ್‌ ಬರುವ ಸಾಧ್ಯತೆ ಇದೆಯೇ?

ಸದಾನಂದ, ದಾವಣಗೆರೆ

ಡಾ. ಮಹಾಂತೇಶ್‌:  ಅತಿ ಹೆಚ್ಚು ಅಡುಗೆ ಎಣ್ಣೆ ಸೇವನೆಯಿಂದ ಕೊಬ್ಬು ಜಾಸ್ತಿ ಆಗಿ ಕ್ಯಾನ್ಸರ್‌ ಬರುವ ಸಾಧ್ಯತೆ ಇರುತ್ತದೆ. ಅದಕ್ಕೆ ಕಲಬೆರಕೆ ಎಣ್ಣೆ ಬಳಸದೆ ಶುದ್ಧ, ಅಥವಾ ರಾಸಾಯನಿಕ ಮಿಶ್ರಣ ಮಾಡದ ಗಾಣದ ಎಣ್ಣೆ ಬಳಸುವುದರಿಂದ ಕ್ಯಾನ್ಸರ್‌ ತಡೆ ಸಾಧ್ಯ. ಈ ಬಗ್ಗೆ ಜಾಗೃತಿ ಅಗತ್ಯ.

.................

l ಯಾವುದೇ ದುಶ್ಟಟ ಇಲ್ಲದಿದ್ದರೂ ಕೆಲವರಿಗೆ ಕ್ಯಾನ್ಸರ್‌ ಬರುತ್ತಿದೆ. ಇದಕ್ಕೆ ಕಾರಣವೇನು?

– ಹೇಮಂತ್‌ ಮಲ್ಲನಾಯಕನಹಳ್ಳಿ

ಡಾ. ಇಬ್ರಾಹಿಂ: ದುಶ್ಚಟ ಇಲ್ಲದಿದ್ದರೂ ಕ್ಯಾನ್ಸರ್‌ ಬರಲು ಹಲವಾರು ಕಾರಣಗಳಿವೆ. ವಂಶವಾಹಿ, ವಾಯುಮಾಲಿನ್ಯ ಹಾಗೂ ಶುಚಿತ್ವದ ಕೊರತೆಯಿಂದಲೂ ಕ್ಯಾನ್ಸರ್‌ ಬರುತ್ತದೆ. ಈಗ ಶುದ್ಧ ಗಾಳಿ ಸಿಗುತ್ತಿಲ್ಲ. ವಾಯು ಮಾಲಿನ್ಯದಿಂದಾಗಿ ಗಂಟಲು, ಶ್ವಾಸಕೋಶದ ಸಮಸ್ಯೆ ತಲೆದೋರಬಹುದು. ಬೇರೆಯವರು ಧೂಮಪಾನ ಮಾಡುತ್ತಿದ್ದರೆ ಪಕ್ಕದಲ್ಲಿರುವ ನಿಮಗೂ ಅದರ ದುಷ್ಪರಿಣಾಮ ಆಗುತ್ತದೆ. ನಿಮಗೂ ಗಂಟಲು ಕ್ಯಾನ್ಸರ್‌ ಬರುವ ಸಾಧ್ಯತೆ ಇರುತ್ತದೆ. ಎಚ್ಚರ ವಹಿಸುವುದು ಒಳಿತು.

...........

ಕ್ಯಾನ್ಸರ್‌ಗೆ ಹಲವು ಕಾರಣ: ಪರಿಹಾರವೂ ಲಭ್ಯ

ಕ್ಯಾನ್ಸರ್‌ಗೆ ತಡೆಯುವ ಬಗೆ ಹೇಗೆ? ಮಹಿಳೆಯರಲ್ಲಿ ದುಶ್ಚಟ ಇಲ್ಲದಿದ್ದರೂ ಕ್ಯಾನ್ಸರ್ ಬರಲು ಕಾರಣ ಏನು? ಚಿಕಿತ್ಸೆಗೆ ವಯಸ್ಸಿನ ಮಿತಿ ಇದೆಯೇ? ಎಂಬ ಹಲವು ಪ್ರಶ್ನೆಗಳು ಫೋನ್‌ ಇನ್‌ನಲ್ಲಿ ಎದುರಾದವು. ಅದಕ್ಕೆ ತಜ್ಞರು ಸಮರ್ಪಕ ಉತ್ತರ ನೀಡಿದರು.

ಕ್ಯಾನ್ಸರ್‌ ಬರಲು ಮುಖ್ಯ ಕಾರಣ ಕುಡಿತ, ತಂಬಾಕು ಸೇವೆನೆಯಂತಹ ದುಶ್ಚಟಗಳು. ಇದನ್ನು ತ್ಯಜಿಸಿದಲ್ಲಿ ಉತ್ತಮ ಆರೋಗ್ಯ ಸಿಗುತ್ತದೆ. ಕೆಲವೊಮ್ಮೆ ವಂಶವಾಹಿಗಳು ಕಾರಣವಾಗುತ್ತವೆ. ಇದಲ್ಲದೇ ಶುಚಿತ್ವದ ಕೊರತೆಯೂ ಕ್ಯಾನ‌್ಸರ್‌ಕಾರಕ. ನಮ್ಮ ದೇಶದಲ್ಲಿ ಗರ್ಭಕಂಠದ ಕ್ಯಾನ್ಸರ್‌ ಹೆಚ್ಚು. ಗ್ರಾಮೀಣ ಮಹಿಳೆಯರಲ್ಲಿ ಶುಚಿತ್ವ ಇಲ್ಲದಿರುವುದೇ ಇದಕ್ಕೆ ಕಾರಣ ಎಂದು ವೈದ್ಯರು ತಿಳಿಸಿದರು.

ವಯಸ್ಸಿನ ಮಿತಿ ಇಲ್ಲ: ವಯಸ್ಸಿನ ಮಿತಿ ಇಲ್ಲ. ಇದು ಕೇವಲ ಸಂಖ್ಯೆ ಅಷ್ಟೇ. ವ್ಯಕ್ತಿಯ ಸಾಮರ್ಥ್ಯ ಆಧರಿಸಿ ಚಿಕಿತ್ಸೆ ನೀಡುತ್ತೇವೆ. ಚೇತರಿಸಿಕೊಳ್ಳುವ ಶಕ್ತಿ ಇದ್ದರೆ ಎಲ್ಲ ವಯಸ್ಸಿನವರಿಗೂ ಚಿಕಿತ್ಸೆ ಸಿಗುತ್ತದೆ. ಈಗ ಆಧುನಿಕ ಚಿಕಿತ್ಸೆ ಲಭ್ಯ ಇದೆ. ಕಿಮೊ ಥೆರೆಪಿಗೆ ಬೇರೆ ಬೇರೆ ಮಾಲಿಕ್ಯೂಲ್ಸ್‌ ಇವೆ ಎಂದು ತಜ್ಞ ವೈದ್ಯರಾದ ಡಾ. ಅಜಯ್‌, ಡಾ. ಇಬ್ರಾಹಿಂ ತಿಳಿಸಿದರು.

ಪ್ರತಿ ಕ್ಯಾನ್ಸರ್‌ಗೂ ಪ್ರತ್ಯೇಕ ಚಿಕಿತ್ಸೆ: ಒಂದೊಂದು ಕ್ಯಾನ್ಸರ್‌ಗೆ ಒಂದೊಂದು ಪರೀಕ್ಷೆ ಇರುತ್ತದೆ. ರೇಡಿಯೇಷನ್‌, ಸರ್ಜರಿ, ಕಿಮೋಥೆರಪಿ ಎಂಬ ವಿಧಾನಗಳು ಇವೆ. ಕ್ಯಾನ್ಸರ್‌ನ ಹಂತ, ಯಾವ ಕ್ಯಾನ್ಸರ್‌ ಎಂದು ಅರಿತು ಚಿಕಿತ್ಸೆ ನೀಡಲಾಗುತ್ತದೆ ಎಂದು ಡಾ. ಮಹಾಂತೇಶ್ ವಿವರಿಸಿದರು.

ಕ್ಯಾನ್ಸರ್‌ಗೆ ಜಾಗೃತಿಯೇ ಮದ್ದು ಎಂದು ವೈ‌ದ್ಯರು ಒತ್ತಿ ಹೇಳಿದರು.

.................

ಸಂಪರ್ಕ ವಿಳಾಸ

ವಿಶ್ವಾರಾಧ್ಯ ಕ್ಯಾನ್ಸರ್‌ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ

ಬಾಡಾ ಕ್ರಾಸ್‌, ದಾವಣಗೆರೆ

ಮೊ: 9742455516 / 9480777755

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.