ಹಳೆಮಳಲಿ (ನ್ಯಾಮತಿ): ‘ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದೇ ನಮ್ಮ ಕಾಯಕ ಎಂದು ಭಾವಿಸಿ ಶಿಕ್ಷಕರು ಕರ್ತವ್ಯ ನಿರ್ವಹಿಸಿದರೆ ಅಂತಹ ಶಾಲೆಗಳು ಅಭಿವೃದ್ಧಿಯಾಗುತ್ತವೆ’ ಎಂಬುದಕ್ಕೆ ಹಳೆಮಳಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಾಕ್ಷಿ.
ತುಂಗಭದ್ರಾ ನದಿ ದಡದಲ್ಲಿ 60 ಮನೆಗಳನ್ನು ಹೊಂದಿರುವ, ಹೊನ್ನಾಳಿ–ಶಿವಮೊಗ್ಗ ಮುಖ್ಯರಸ್ತೆಯಿಂದ 5 ಕಿ.ಮೀ ದೂರದಲ್ಲಿರುವ ಗ್ರಾಮ ಹಳೆಮಳಲಿ. ಈ ಶಾಲೆಯಲ್ಲಿ 1ರಿಂದ 5ನೇ ತರಗತಿಯವರೆಗೆ 30 ಮಕ್ಕಳಿದ್ದು ಎಸ್‌ಡಿಎಂಸಿ, ಪೋಷಕರ ಸಹಕಾರದಿಂದ ಪೂರ್ವ ಪ್ರಾಥಮಿಕ (ಎಲ್.ಕೆ.ಜಿ ಮತ್ತು ಯು.ಕೆ.ಜಿ) ವಿಭಾಗವನ್ನು 2018–19ನೇ ಸಾಲಿನಿಂದ ಆರಂಭಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 18 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಆಶಯದಂತೆ ನೂರರಷ್ಟು ದಾಖಲಾತಿ, ಹಾಜರಾತಿ ಮತ್ತು ಕಲಿಕೆಯನ್ನು ಹೊಂದಿರುವುದು ಶಾಲೆಯ ವಿಶೇಷ. ಪೂರ್ವ ಪ್ರಾಥಮಿಕ ಶಾಲೆ ಆರಂಭ ಆದಾಗಿನಿಂದ ಪಾಲಕರು ಮಕ್ಕಳನ್ನು ಖಾಸಗಿ ಕಾನ್ವೆಂಟ್‌ಗೆ ಕಳಿಸುತ್ತಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಗೋಡೆಗಳಿಗೆ ಸಾಧನ ಪದಗಳು, ವರ್ಣಮಾಲೆ, ಅಕ್ಷರಗಳ ಚಪ್ಪರ ಇವೆ. ಮಕ್ಕಳಿಗೆ ಶಿಕ್ಷಕರು ವಾರದಲ್ಲಿ 2 ದಿನ 4 ಅವಧಿಗಳಲ್ಲಿ ಲೇಜಿಮ್, ಡಂಬಲ್ಸ್, ಹೂಪ್ಸ್, ಸರಳ ವ್ಯಾಯಾಮ ಮಾಡಿಸುತ್ತಾರೆ. ಪೂರ್ವ ಪ್ರಾಥಮಿಕ ಶಾಲೆಯ ಪುಟಾಣಿಗಳು ಆಂಗ್ಲ ಮತ್ತು ಕನ್ನಡ ಭಾಷೆಯಲ್ಲಿ ಪಟಪಟನೆ ಓದುತ್ತಾರೆ. ಉತ್ತಮ ಬರವಣಿಗೆಯೂ ಇದೆ. ಮಗ್ಗಿಗಳನ್ನು ಮೇಲಿನಿಂದ ಕೆಳಕ್ಕೆ, ಕೆಳಗಿನಿಂದ ಮೇಲೆ ಮತ್ತು ಅಡ್ಡಲಾಗಿ ಹೇಳುವ ಜಾಣ್ಮೆ ಹೊಂದಿದ್ದಾರೆ.
ಇಲ್ಲಿ ಶಾಲಾವನ, ಕೈತೋಟ, ಸುಸಜ್ಜಿತ ತರಗತಿ ಕೊಠಡಿಗಳು, ತಾಲ್ಲೂಕಿನಲ್ಲಿಯೇ ಮಾದರಿಯಾದ ಹೈಟೆಕ್ ಅಡುಗೆ ಕೊಠಡಿ, ಮುಖ್ಯಶಿಕ್ಷಕರ ಕೊಠಡಿ, ಶಾಲಾ ಆವರಣದಲ್ಲಿಯೇ ಅಂಗನವಾಡಿ ಕಟ್ಟಡ, ಶೌಚಾಲಯ ಇದೆ.
ಮುಖ್ಯಶಿಕ್ಷಕ ಕರಬಸಪ್ಪ ಅವರೇ ಈ ಮಾದರಿ ಶಾಲೆಯ ರೂವಾರಿ. ಇವರಿಗೆ ಸಹಶಿಕ್ಷಕಿ
ಕೆ.ಬಿ. ಕವಿತಾ, ಗೌರವಧನ ಶಿಕ್ಷಕಿ ಎಚ್.ಕೆ. ರಂಜಿತಾ, ಬಿಸಿಯೂಟ ತಯಾರಕರಾದ ಪುಷ್ಪಾ, ಚಂದ್ರಕಲಾ ಮತ್ತು ಗ್ರಾಮಸ್ಥರ ಸಹಕಾರ ದೊರೆತಿದೆ.
ಶಾಲೆಯ ಆವರಣದಲ್ಲಿ 6 ತೆಂಗಿನಮರಗಳು, 50 ಅಡಿಕೆ ಮರ, 100 ತೇಗದ ಗಿಡ, 25 ಇತರ ಜಾತಿಯ ಮರಗಳನ್ನು ಬೆಳೆಸಿರುವುದರಿಂದ ಹಸಿರು ವಾತಾವರಣವಿದೆ. ಕೋವಿಡ್ ಸಮಯದಲ್ಲಿಯೂ ಮಕ್ಕಳಿಗೆ ಶಿಕ್ಷಣ ನೀಡಿದ್ದೇವೆ ಎಂದು ಮುಖ್ಯಶಿಕ್ಷಕ ಕರಬಸಪ್ಪ ಹೇಳಿದರು.
‘ಇಲಾಖೆಯ ಮಾರ್ಗದರ್ಶನ
ದಲ್ಲಿ ಪೋಷಕರು, ಹಳೆ ವಿದ್ಯಾರ್ಥಿಗಳು, ಗ್ರಾಮಸ್ಥರು, ದಾನಿಗಳ ಸಹಕಾರದಿಂದ ₹ 1 ಲಕ್ಷ ವೆಚ್ಚದ ಸ್ಮಾರ್ಟ್ ಕ್ಲಾಸ್ ಆರಂಭಿಸುವ ಯೋಜನೆ
ಯನ್ನು ಶಿಕ್ಷಕರು ರೂಪಿಸಿದ್ದು, ಅದಕ್ಕೆ ಸಂಪೂರ್ಣ ಸಹಕಾರ ನೀಡುತ್ತೇವೆ’ ಎಂದು ಎಸ್‌ಡಿಎಂಸಿ ಅಧ್ಯಕ್ಷ ಎಂ.ಪಿ. ಷಡಾಕ್ಷರಿ, ಉಪಾಧ್ಯಕ್ಷೆ ಮಂಜುಳಮ್ಮ ಮತ್ತು ಸದಸ್ಯರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.