ADVERTISEMENT

5ರ ನಂತರ ಆನವೇರಿ ಉಪನಾಲೆಗೆ ನೀರು

ಭತ್ತದ ನಾಟಿಗೆ ಸಿದ್ಧತೆ ಮಾಡಿಕೊಂಡು ನೀರಿಗಾಗಿ ಕಾಯುತ್ತಿರುವ ರೈತರು

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2021, 4:49 IST
Last Updated 3 ಆಗಸ್ಟ್ 2021, 4:49 IST
ಸಾಸ್ವೆಹಳ್ಳಿ ಸಮೀಪದ ಆನವೇರಿ ಹಿರೇಮಾವುರದಮ್ಮ ದೇವಸ್ಥಾನದ ಕೆಳ ಭಾಗದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಅಧಿಕಾರಿಗಳ ತಂಡ ಪರಿಶೀಲಿಸಿತು.
ಸಾಸ್ವೆಹಳ್ಳಿ ಸಮೀಪದ ಆನವೇರಿ ಹಿರೇಮಾವುರದಮ್ಮ ದೇವಸ್ಥಾನದ ಕೆಳ ಭಾಗದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಅಧಿಕಾರಿಗಳ ತಂಡ ಪರಿಶೀಲಿಸಿತು.   

ಸಾಸ್ವೆಹಳ್ಳಿ: ಹೋಬಳಿಯ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಭತ್ತದ ನಾಟಿಗೆ ಸಸಿ ಸಿದ್ಧಗೊಳಿಸಿ ಭೂಮಿಯನ್ನು ರೊಳ್ಳೆ ಹೊಡೆದು ಅಣಿಗೊಳಸಿದ್ದಾರೆ. ಈಗ ಭದ್ರಾ ನೀರಿಗಾಗಿ ಕಾಯುತ್ತಿದ್ದಾರೆ.

ಭದ್ರಾ ನಾಲೆಗೆ ಜುಲೈ 27ರಂದು ನೀರು ಹರಿಸಿ ವಾರ ಕಳೆದರೂ ಆನವೇರಿ ಉಪನಾಲೆಗೆ ಬಂದಿಲ್ಲ. ಆನವೇರಿ ಭದ್ರಾ ಶಾಖಾ ನಾಲೆಯು ಸಾಸ್ವೆಹಳ್ಳಿಗೆ ಬಹಳ ಹತ್ತಿರದಲ್ಲಿದೆ. ಭದ್ರಾವತಿ ತಾಲ್ಲೂಕಿನ ತಡಸ, ಗುಡುಮಗಟ್ಟೆ ಪಿಕಪ್‍ನಿಂದ ಪ್ರಾರಂಭಗೊಂಡು ಆನವೇರಿ, ಇಟ್ಟಿಗೆಹಳ್ಳಿ, ಅರಸನಘಟ್ಟ ಮಾರ್ಗವಾಗಿ ಹೊನ್ನಾಳಿ ತಾಲ್ಲೂಕಿನ ಗೊಲ್ಲರಹಳ್ಳಿ, ಬೇಲಿಮಲ್ಲೂರುವರೆಗೆ ಒಟ್ಟು 67 ಕಿ.ಮೀ ದೂರದವರೆಗೆ 40 ಉಪನಾಲೆಗಳನ್ನು ಹೊಂದಿದೆ. 6,300 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದ್ದು, ಬೇಗ ನೀರು ಬಿಡಲಿ ಎಂದು ರೈತರು ಬಯಸಿದ್ದಾರೆ.

ಸಾಸ್ವೆಹಳ್ಳಿ ನೀರಾವರಿ ಇಲಾಖೆಯ ಎಇಇ ಜಿ.ಇ. ರಾಜೇಂದ್ರಪ್ರಸಾದ್ ಮಾತನಾಡಿ, ‘ಆನವೇರಿ ವ್ಯಾಪ್ತಿಯ 7 ಊರ ಗ್ರಾಮದೇವತೆ ಹಿರೇಮಾವುರದಮ್ಮ ದೇವಸ್ಥಾನದ ಪಕ್ಕದಲ್ಲಿರುವ ಗುಡ್ಡದ ಕೆಳ ಭಾಗದಲ್ಲಿ ಭದ್ರನಾಲೆ ಹಾದು ಹೋಗಿದೆ. ಭಾರಿ ಮಳೆ ಬಂದಾಗ ಗುಡ್ಡದ ಭಾಗ ಕುಸಿದು ನಾಲೆಗೆ ಬೀಳುತ್ತಿತ್ತು. ಅಲ್ಲಿನ ಭಕ್ತರು ದೇವಸ್ಥಾನವು ಕುಸಿಯುವ ಹಂತದಲ್ಲಿದ್ದು, ಇದರ ರಕ್ಷಣೆಗೆ ತಡೆಗೋಡೆ ನಿರ್ಮಾಣ ಮಾಡುವಂತೆ ಮನವಿ ಮಾಡಿದ್ದರು. ತಡೆಗೋಡೆ ನಿರ್ಮಾಣ ಕೆಲಸವು ಭದ್ರಾ ನಾಲೆಯನ್ನು ಒಳಗೊಂಡಿರುವುದರಿಂದ ಒಂದು ಹಂತದ ಕಾಮಗಾರಿ ಮುಗಿದ ತಕ್ಷಣ ಆಗಸ್ಟ್ 5ರ ನಂತರ ನೀರು ಬಿಡಲಾಗುವುದು. ಉಳಿದ ಕಾಮಗಾರಿಯನ್ನು ಹಂತ ಹಂತವಾಗಿ ಪೂರ್ಣಗೊಳಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

ADVERTISEMENT

ಸಸಿಗಳು ನಾಟಿಗೆ ಸಿದ್ಧವಾಗಿವೆ. ಸರಿಯಾದ ಸಮಯದಲ್ಲಿ ಭತ್ತ ಭಿತ್ತನೆ ಮಾಡಿದರೆ ಮಾತ್ರ ಉತ್ತಮ ಇಳುವರಿ ಬರುತ್ತದೆ. ಇಲ್ಲದಿದ್ದರೆ ಇಳುವರಿ ಕುಂಠಿತಗೊಳ್ಳುವ ಸಂಭವವಿದೆ. ನೀರು ಹರಿಸುವ ವಿಚಾರವಾಗಿ ವಿಳಂಬ ಮಾಡಬಾರದು ಎಂದು ತಾಲ್ಲೂಕು ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಾಧ್ಯಕ್ಷ ಬೀರಗೊಂಡನಹಳ್ಳಿ ಉಮೇಶ್ ಒತ್ತಾಯಿಸಿದ್ದಾರೆ.

ಆನವೇರಿ ಭದ್ರಾ ಶಾಖಾ ನಾಲಾ ತಡೆಗೋಡೆ ನಿರ್ಮಾಣ ಕಾಮಗಾರಿ ವೀಕ್ಷಣೆ ಸಂದರ್ಭದಲ್ಲಿ ಎಂಜಿನಿಯರ್‌ಗಳಾದ ಪ್ರಭುಗೌಡ, ಕರಿಯಪ್ಪ, ಗುತ್ತಿಗೆದಾರ ಎಸ್.ಎಚ್. ಪಟೇಲ್ ಮತ್ತು ರುದ್ರೇಶಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.