ADVERTISEMENT

ಮಾದರಿ ಗ್ರಾಮವಾಗಿ ಉಚ್ಚಂಗಿದುರ್ಗ ಅಭಿವೃದ್ಧಿ

ಕಾಮಗಾರಿಗೆ ಪೂಜೆ ನೆರವೇರಿಸಿದ ಶಾಸಕ ರಾಮಚಂದ್ರ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2021, 5:00 IST
Last Updated 18 ಆಗಸ್ಟ್ 2021, 5:00 IST
ಉಚ್ಚಂಗಿದುರ್ಗ ಗ್ರಾಮದ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣಕ್ಕೆ ಮಂಗಳವಾರ ಭೂಮಿ ಪೂಜೆ ನೆರವೇರಿಸಲಾಯಿತು.
ಉಚ್ಚಂಗಿದುರ್ಗ ಗ್ರಾಮದ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣಕ್ಕೆ ಮಂಗಳವಾರ ಭೂಮಿ ಪೂಜೆ ನೆರವೇರಿಸಲಾಯಿತು.   

ಅರಸೀಕೆರೆ (ಉಚ್ಚಂಗಿದುರ್ಗ): ಅರಸೀಕೆರೆ ಹೋಬಳಿಯ ಏಳು ಗ್ರಾಮ ಪಂಚಾಯಿತಿ ಸೇರಿ ಉಚ್ಚಂಗಿದುರ್ಗ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು.

ಗ್ರಾಮದ ಬೀರನಕಟ್ಟೆ ಬಳಿ ₹ 60.44 ಲಕ್ಷ ವೆಚ್ಚದಲ್ಲಿ ಹೈಟೆಕ್ ಬಸ್ ನಿಲ್ದಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಲಕ್ಷಾಂತರ ಭಕ್ತರು, ಪ್ರವಾಸಿಗರು ಭೇಟಿ ನೀಡುವ ಐತಿಹಾಸಿಕ‌ ಧಾರ್ಮಿಕ ಪ್ರಸಿದ್ಧ ಉಚ್ಚೆಂಗೆಮ್ಮ ದೇವಿ ಸನ್ನಿಧಿಯನ್ನು ಸುಂದರ ಪ್ರವಾಸಿ ತಾಣವಾಗಿಸಲು ಶತಾಯಗತಾಯ
ಪ್ರಯತ್ನಿಸುತ್ತೇನೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಯೋಜನೆ ಅಡಿ ಉಚ್ಚಂಗಿದುರ್ಗ, ಅರಸೀಕೆರೆ, ಕೆರೆಗುಡಿಹಳ್ಳಿ, ಹೊಸಕೋಟೆ ಗ್ರಾಮಗಳಲ್ಲಿ ಅಂಗನವಾಡಿ, ಕಾಂಕ್ರೀಟ್‌ ರಸ್ತೆ, ಸಮುದಾಯ ಭವನ, ಬಸ್ ನಿಲ್ದಾಣ ಸೇರಿ ಒಟ್ಟು ₹ 6.76 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿ ಕೈಗೊಳ್ಳ
ಲಾಗುವುದು ಎಂದು ತಿಳಿಸಿದರು.

ADVERTISEMENT

ಸಂಸದ ಜಿ.ಎಂ ಸಿದ್ದೇಶ್ವರ ಮಾತನಾಡಿ, ‘ಕೊರೊನಾ ಸಂಕಷ್ಟದ ನಡುವೆಯೂ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ವಹಿಸಿಕೊಂಡ ತಿಂಗಳ ಅವಧಿಯಲ್ಲೇ ಅನೇಕ ಜನಪರ ಯೋಜನೆಗಳನ್ನು ಘೋಷಿಸಿದ್ದಾರೆ. 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ 750 ಅಮೃತ ಗ್ರಾಮಗಳನ್ನು ನಿರ್ಮಾಣ ಮಾಡಲು ಘೋಷಿಸಲಾಗಿದೆ. ಯೋಜನೆಗೆ ಶೀಘ್ರ ಚಾಲನೆ ದೊರೆಯಲಿದೆ’ ಎಂದು ಹೇಳಿದರು.

ಹರಪನಹಳ್ಳಿ ತಾಲ್ಲೂಕಿನ 60 ಕೆರೆ ತುಂಬಿಸುವ ಗರ್ಭಗುಡಿ ಕಂ ಬ್ಯಾರೇಜ್ ಯೋಜನೆ ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ. ಜಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ 57 ಕೆರೆ ತುಂಬಿಸುವ ಯೋಜನೆ ಪೈಪ್‌ಲೈನ್‌ ಕಾಮಗಾರಿ ತ್ವರಿತಗರಿಯಲ್ಲಿ ಸಾಗಿದ್ದು, ಒಂದೆರಡು ದಿನಗಳಲ್ಲೇ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಿ. ಸಿದ್ದಪ್ಪ , ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಪಾಟೀಲ್ ಕೆಂಚನಗೌಡ, ಕಾರ್ಮಿಕ ಇಲಾಖೆಯ ಇಬ್ರಾಹಿಂ, ಎಂಜಿನಿಯರ್ ಲಿಂಗಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಕ್ಕಮ್ಮ, ಉಪ ತಹಶೀಲ್ದಾರ್ ಫಾತಿಮಾ, ಮುಖಂಡರಾದ ಹನುಮಂತಪ್ಪ, ಚಟ್ನಿಹಳ್ಳಿ ರಾಜಪ್ಪ, ಬಾಲೇನಹಳ್ಳಿ ಕೆಂಚನಗೌಡ, ಫಣಿಯಾಪುರ ಲಿಂಗರಾಜ, ಚೌಡಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.