ADVERTISEMENT

ಮನೋಸ್ಥೈರ್ಯವೇ ಮದ್ದು; ಶ್ವೇತಾ ಗಾಂಧಿ

ಸುಮಾ ಬಿ.
Published 1 ಫೆಬ್ರುವರಿ 2023, 5:40 IST
Last Updated 1 ಫೆಬ್ರುವರಿ 2023, 5:40 IST
ದಾವಣಗೆರೆ ನಿವಾಸಿ ಕ್ಯಾನ್ಸರ್ ರೋಗ ಗೆದ್ದ ಶ್ವೇತಾ ಗಾಂಧಿ
ದಾವಣಗೆರೆ ನಿವಾಸಿ ಕ್ಯಾನ್ಸರ್ ರೋಗ ಗೆದ್ದ ಶ್ವೇತಾ ಗಾಂಧಿ   

ಕ್ಯಾನ್ಸರ್‌ ಎಂದರೆ ಜೀವನವನ್ನೇ ಕಸಿಯುವ ಮಹಾಮಾರಿ, ಅಲ್ಲಿಗೆ ಜೀವನವೇ ಮುಗಿಯಿತು ಎಂಬ ಸಾಮಾನ್ಯ ಗ್ರಹಿಕೆ ಬಹುತೇಕರಲ್ಲಿದೆ. ಕ್ಯಾನ್ಸರ್‌ ಕಾಣಿಸಿಕೊಂಡಿದೆ ಎಂದ ತಕ್ಷಣವೇ ರೋಗಿ ಹಾಗೂ ಸಂಬಂಧಿಗಳ ಝಂಗಾಬಲವೇ ಉಡುಗಿಹೋಗುತ್ತದೆ. ದೇಹದಲ್ಲಿ ಯಾವುದೇ ಸಾಮಾನ್ಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಾಗ, ಅಂಥ ಲಕ್ಷಣಗಳು ಗೋಚರಿಸಿದಾಗ ತಕ್ಷಣವೇ ತಪಾಸಣೆಗೆ ಒಳಪಟ್ಟು, ನಿಗದಿತ ಸಮಯದೊಳಗೇ ಸೂಕ್ತ ಚಿಕಿತ್ಸೆ ಪಡೆಯುವುದರಿಂದ ಕ್ಯಾನ್ಸರ್‌ ಗೆಲ್ಲಬಹುದು. ಧೈರ್ಯ– ಸ್ಥೈರ್ಯಗಳೇ ಇದಕ್ಕೆ ಪ್ರೇರಣೆ ಎಂಬುದೂ ಅಷ್ಟೇ ಮುಖ್ಯ. ಫೆಬ್ರುವರಿ 4ರಂದು ವಿಶ್ವ ಕ್ಯಾನ್ಸರ್‌ ದಿನಾಚರಣೆ. ಈ ದಿನದ ಹಿನ್ನೆಲೆಯಲ್ಲಿ ಕ್ಯಾನ್ಸರ್‌ ಗೆದ್ದವರ ಯಶೋಗಾಥೆಯ ಸರಣಿ ನಿಮ್ಮ ನೆಚ್ಚಿನ ‘ಪ್ರಜಾವಾಣಿ’ಯಲ್ಲಿ ಇಂದಿನಿಂದ ಪ್ರಕಟವಾಗಲಿದೆ.

ದಾವಣಗೆರೆ: ಸಾಮಾನ್ಯ ಆರೋಗ್ಯ ತಪಾಸಣೆಗೆಂದು ಹೋದ ದಾವಣಗೆರೆ ನಗರದ ಆರ್‌.ಜಿ.ಇನ್‌ಸ್ಟಿಟ್ಯೂಟ್‌ ಆಫ್‌ ಕಾಮರ್ಸ್‌ ಅಂಡ್‌ ಮ್ಯಾನೆಜ್‌ಮೆಂಟ್ ಅಧ್ಯಕ್ಷೆ ಶ್ವೇತಾ ಆರ್. ಗಾಂಧಿ ಅವರಿಗೆ ಯೂಟ್ರಸ್‌ ಕ್ಯಾನ್ಸರ್‌ ಇರುವುದು ಪತ್ತೆಯಾಯಿತು. ದುತ್ತೆಂದು ಎದುರಾದ ಆಘಾತವನ್ನು ಸಮಚಿತ್ತದಿಂದ ಸ್ವೀಕರಿಸಿದ ಅವರು ಈಗ ಕ್ಯಾನ್ಸರ್‌ ಗೆದ್ದು ಎಲ್ಲರಂತೆ ಬದುಕುತ್ತಿದ್ದಾರೆ.

ಕ್ಯಾನ್ಸರ್‌ನೊಂದಿಗೆ ಸತತ ಆರೇಳು ತಿಂಗಳು ಹೋರಾಟ ನಡೆಸಿದ ಅವರು ಮನೋಸ್ಥೈರ್ಯದೊಂದಿಗೆ ಅದನ್ನು ಹಿಮ್ಮೆಟ್ಟಿಸಿದ್ದಾರೆ.

ADVERTISEMENT

2019ರ ನವೆಂಬರ್‌ನಲ್ಲಿ ನಡೆಸಲಾದ ವೈದ್ಯಕೀಯ ತಪಾಸಣೆಯಿಂದ ಶ್ವೇತಾ ಅವರಿಗೆ ಕ್ಯಾನ್ಸರ್‌ ಇರುವುದು ದೃಢವಾಗಿತ್ತು. ‘2ನೇ ಹಂತ ತಲುಪಿದ್ದು, ಕೂಡಲೇ ಶಸ್ತ್ರ ಚಿಕಿತ್ಸೆ ಅಗತ್ಯ’ ಎಂದು ವೈದ್ಯರು ಸಲಹೆ ನೀಡಿದರು. ಅದನ್ನು ಆತ್ಮವಿಶ್ವಾಸದಿಂದಲೇ ಸ್ವೀಕರಿಸಿದ ಅವರು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು, ಬಳಿಕ 45 ದಿನಗಳ ರೇಡಿಯೇಶನ್‌ ಚಿಕಿತ್ಸೆ ಪಡೆದು ಕ್ಯಾನ್ಸರ್‌ ಅನ್ನು ಹೊಡೆದೋಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

‘ಮನೋಸ್ಥೈರ್ಯ, ನಿರಂತರ ಯೋಗ, ವೈದ್ಯರ ಸಲಹೆ ಪಾಲನೆಯಿಂದ ನಾನು ಕ್ಯಾನ್ಸರ್‌ ಗೆದ್ದಿರುವೆ’ ಎಂದು ವಿಶ್ವಾಸದಿಂದ ನುಡಿಯುವ ಶ್ವೇತಾ, ‘ಕ್ಯಾನ್ಸರ್‌ ಎಂದು ಗೊತ್ತಾದೊಡೆನೆ ಮೊದಲು ಭಯಪಡುವುದನ್ನು ಬಿಡಿ, ಧೈರ್ಯದಿಂದ ಈ ರೋಗವನ್ನು ಎದುರಿಸಿ. ವೈದ್ಯರು ಹೇಳಿದ್ದನ್ನು ಚಾಚೂ ತಪ್ಪದೆ ಪಾಲಿಸಿ’ ಎಂದು ಸಲಹೆ ನೀಡುತ್ತಾರೆ.

‘ಕ್ಯಾನ್ಸರ್‌ ರೋಗಿಗಳಷ್ಟೇ ಅಲ್ಲ, ಸಾಮಾನ್ಯರೂ ಆಗಾಗ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅತಿ ಅಗತ್ಯ. ಆಗ ದೇಹದಲ್ಲಿನ ಸಮಸ್ಯೆಯನ್ನು ಬೇಗ ಪತ್ತೆಹಚ್ಚಬಹುದು. ಇದರಿಂದ ತ್ವರಿತ ಚಿಕಿತ್ಸೆ ಪಡೆಯಲು ಸಹಕಾರಿಯಾಗುತ್ತದೆ’ ಎಂಬ ಸಲಹೆ ಅವರದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.