ADVERTISEMENT

‘ಸುಳ್ಳು ಜಾತಿ ಪ್ರಮಾಣಪತ್ರ ಪಡೆಯುವುದರ ವಿರುದ್ಧ ಹೋರಾಟ’

​ಪ್ರಜಾವಾಣಿ ವಾರ್ತೆ
Published 3 ಜನವರಿ 2022, 4:22 IST
Last Updated 3 ಜನವರಿ 2022, 4:22 IST

ದಾವಣಗೆರೆ: ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಸೇರದೇ ಇದ್ದವರೂ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ಪಡೆಯುತ್ತಿರುವ ದುಷ್ಟ ಶಕ್ತಿಗಳ ವಿರುದ್ಧ ದಲಿತ ಸಮುದಾಯಗಳ ಸ್ವಾಮೀಜಿಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ಮಾದಿಗ ದಂಡೋರ ಜಿಲ್ಲಾ ಸಮಿತಿಯ ಸಭೆಯಲ್ಲಿ ಭಾನುವಾರ ನಿರ್ಧರಿಸಲಾಗಿದೆ.

ಮಾದಿಗ ದಂಡೋರ ಜಿಲ್ಲಾ ಸಮಿತಿಯ ಅಧ್ಯಕ್ಷ ಎಚ್‌.ಸಿ. ಗುಡ್ಡಪ್ಪ ಮಾತನಾಡಿ, ‘ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುವವರಿಗೆ ಜನಪ್ರತಿನಿಧಿಗಳು ಸಹಕರಿಸುತ್ತಿದ್ದಾರೆ. ಶೋಷಿತ ಸಮುದಾಯಗಳನ್ನು ಮೇಲಕ್ಕೆ ತರಲು ಇರುವ ಮೀಸಲಾತಿಯನ್ನು ಕೆಲವರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಶೋಷಿತ ಸಮಾಜಗಳಿಗೆ ಅನ್ಯಾಯ ಆಗುತ್ತಿದೆ. ಇದರ ವಿರುದ್ಧ ಹೋರಾಟ ಅನಿವಾರ್ಯ’ ಎಂದು ತಿಳಿಸಿದರು.

ಪ್ರತಿಭಟನೆ ಹಮ್ಮಿಕೊಂಡಾಗ ಲಂಬಾಣಿ, ಭೋವಿ, ಛಲವಾದಿ, ಕೊರಚ, ಕೊರಮ ಸಮಾಜಗಳೂ ಸೇರಿದಂತೆ ಎಲ್ಲ ಪರಿಶಷ್ಟ ಜಾತಿ ಸಮುದಾಯಗಳ ಜನರು ಭಾಗವಹಿಸಬೇಕು ಎಂದು ಅವರು ಕೋರಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎ.ಕೆ. ನಾಗಪ್ಪ, ‘ಮಾದರ ಚನ್ನಯ್ಯ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿ. ಉಳಿದ ಸ್ವಾಮೀಜಿಗಳು ಭಾಗವಹಿಸಲಿ’ ಎಂದು ಸಲಹೆ ನೀಡಿದರು. ಸಮಾಜದ ಮುಖಂಡ ಡಿ.ಎಸ್‌. ಜಯಪ್ಪ, ಎಚ್‌. ಚಿದಾನಂದಪ್ಪ, ಶಾಮನೂರು ದಾನಪ್ಪ ದೊಡ್ಡಮನೆ, ಕೆ.ಎಚ್‌. ರಂಗಪ್ಪ, ಪಿ. ರುದ್ರೇಶ್‌, ಎ.ಕೆ. ತಿಪ್ಪೇಶ್‌ ಬಾಡ, ಈಚಘಟ್ಟದ ಕೆಂಚಪ್ಪ, ಬಸವರಾಜ, ಕೃಷ್ಣಮೂರ್ತಿ, ಪರಶುರಾಮಪ್ಪ, ನಾಗೇಂದ್ರಪ್ಪ, ಮರಿಯಪ್ಪ, ನಾಗರಾಜ ಅವರೂ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.