ADVERTISEMENT

ಆಂಜನೇಯಸ್ವಾಮಿ ಮುಳ್ಳಿನ ಗದ್ದುಗೆ ಉತ್ಸವ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2022, 4:13 IST
Last Updated 13 ಏಪ್ರಿಲ್ 2022, 4:13 IST
ಸಾಸ್ವೆಹಳ್ಳಿ ಸಮೀಪದ ಕುಳಗಟ್ಟೆ ಆಂಜನೇಯಸ್ವಾಮಿ ಮುಳ್ಳು ಗದ್ದುಗೆ ಉತ್ಸವದಲ್ಲಿ ಭಕ್ತರು ಮುಳ್ಳು ತುಳಿದು ಭಕ್ತಿ ಸಮರ್ಪಿಸಿದರು.
ಸಾಸ್ವೆಹಳ್ಳಿ ಸಮೀಪದ ಕುಳಗಟ್ಟೆ ಆಂಜನೇಯಸ್ವಾಮಿ ಮುಳ್ಳು ಗದ್ದುಗೆ ಉತ್ಸವದಲ್ಲಿ ಭಕ್ತರು ಮುಳ್ಳು ತುಳಿದು ಭಕ್ತಿ ಸಮರ್ಪಿಸಿದರು.   

ಸಾಸ್ವೆಹಳ್ಳಿ: ಹೋಬಳಿಯ ಕುಳಗಟ್ಟೆ ಗ್ರಾಮದ ಪುರಾಣ ಪ್ರಸಿದ್ಧ ಆಂಜನೇಯಸ್ವಾಮಿಯ ಮುಳ್ಳು ಗದ್ದುಗೆ ಉತ್ಸವವು ಸೋಮವಾರ ಸಂಜೆ ನಾಡಿನ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನಡೆಯಿತು.

8ರಿಂದ 10 ಟ್ರ್ಯಾಕ್ಟರ್ ಕವಳೆ ಮುಳ್ಳನ್ನು ಕಡಿದು ತಂದು ಆಂಜನೇಯ ದೇವಸ್ಥಾನದ ಮುಂಭಾಗ 20 ಅಡಿ ಅಗಲ 30 ಅಡಿ ಉದ್ದ ಚೌಕ ಆಕಾರದಲ್ಲಿ 15ರಿಂದ 20 ಅಡಿ ಎತ್ತರದ ಮುಳ್ಳಿನ ರಾಶಿಯ ಗದ್ದುಗೆ ಸಿದ್ಧಪಡಿಸಲಾಯಿತು. ಕಂಚುಗಾರನಹಳ್ಳಿ ಗಡಿಭಾಗದಿಂದ ಬೇಟೆ ಮರವನ್ನು ಪೂಜಿಸಿ ಕಡಿದು ಶಂಕ, ಚಕ್ರ, ಜಾಗಟೆ, ಕೊಂಬು, ಕಹಳೆ, ತಮಟೆ ವಾದ್ಯಗಳ ಮೂಲಕ ರಾಜಬೀದಿಗಳಲ್ಲಿ ಮೆರವಣಿಗೆಯಲ್ಲಿ ಹೊತ್ತು ತರುತ್ತಾರೆ.

ನಂತರ ಅದನ್ನು ಮುಳ್ಳಿನ ಗದ್ದುಗೆಯ ಬಳಿ ನೆಟ್ಟು ದೇವರ ಗಣಮಗ ಮಡಿಯಿಂದ ಗ್ರಾಮದ ಹೊರವಲಯದ ದೇವರ ಬಾವಿಯಲ್ಲಿ ಮಿಂದೆದ್ದು ದೇವರ ಸುರಾಯಿ ಝಳಪಿಸುತ್ತಾ ಭಕ್ತಿಯ ಪರಾಕಾಷ್ಠೆಯಲ್ಲಿ ದೇವರು ಮೈದುಂಬಿ ಆವೇಶದಿಂದ ಲಕ್ಷ್ಮೀ ರಮಣ ಗೋವಿಂದಾ.... ಗೋವಿಂದ... ಎಂದು ದೇವರ ನಾಮಸ್ಮರಣೆ ಮಾಡುತ್ತಾ ಮುಳ್ಳಿನ ರಾಶಿಯನ್ನು ಹತ್ತಿ ಭಕ್ತರ ಮನ ತಣಿಯುವಂತೆ ಮುಳ್ಳಿನ ರಾಶಿಯ ಮೇಲೆ ಕುಣಿದು ಕುಪ್ಪಳಿಸುತ್ತಾ ಮುಳ್ಳಿನ ರಾಶಿಯ ಮೇಲಿನಿಂದ ಭಕ್ತರೆಡೆಗೆ ಜಿಗಿದಾಗ ಭಕ್ತರು ಗಣ ಮಗನನ್ನು ದೇವರ ಸನ್ನಿಧಾನಕ್ಕೆ ಹೊತ್ತು ತರುವರು. ನಂತರ ಭೂತ ಗಣಾಧೀಶರಿಗೆ ಬಾಳೆಹಣ್ಣು, ಬೆಲ್ಲ, ಹಾಲು, ಅನ್ನ ಸೇವೆಯು ಭಕ್ತರ ಸಮ್ಮುಖದಲ್ಲಿ ನಡೆಯಿತು.

ADVERTISEMENT

ನಂತರ ನಾಡಿನ ವಿವಿಧ ಭಾಗಗಳಿಂದ ಬಂದಿದ್ದ ಭಕ್ತರು ತಮ್ಮ ಕಷ್ಟಕಾರ್ಪಣ್ಯ ನಿವಾರಣೆಯಾಗಲಿ ಎಂದು ಮುಳ್ಳನ್ನು ತುಳಿದು ಭಕ್ತಿ ಸಮರ್ಪಿಸಿದರು. ಮುಳ್ಳುಗದ್ದುಗೆ ಉತ್ಸವಕ್ಕೂ ಮುನ್ನ ಇಷ್ಟಾರ್ಥ ಸಿದ್ಧಿಗಾಗಿ ಭಕ್ತರಿಂದ ಉರುಳುಸೇವೆ, ದಾಸಪ್ಪರಿಂದ ಓಕುಳಿ ನಡೆಯಿತು. ಮಕ್ಕಳ ಜವಳ, ಯುವಕರಿಗೆ ದೇವರ ಮುದ್ರೆ, ಅಪ್ಪಣೆ, ಪಾನಕದ ಕೊಲ್ಲಾರಿ ಬಂಡಿ ಉತ್ಸವ
ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.