ADVERTISEMENT

ಕನ್ನಡಕ್ಕಾಗಿ ಕನ್ನಡಾಭಿಮಾನಿಯ ಯಾತ್ರೆ

ರಾಣೆಬೆನ್ನೂರು ತಾಲ್ಲೂಕಿನ ಐರಣಿ ಗ್ರಾಮದ ನಾಗಬಸಯ್ಯ ಮಳಲಿಮಠ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2021, 5:57 IST
Last Updated 27 ಅಕ್ಟೋಬರ್ 2021, 5:57 IST
ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಐರಣಿ ಗ್ರಾಮದ ನಾಗಬಸಯ್ಯ ಮಳಲಿಮಠ ಅವರು ಚನ್ನಗಿರಿ ಪಟ್ಟಣದಲ್ಲಿ ಈಚೆಗೆ ಪ್ರಚಾರ ನಡೆಸಿದರು.
ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಐರಣಿ ಗ್ರಾಮದ ನಾಗಬಸಯ್ಯ ಮಳಲಿಮಠ ಅವರು ಚನ್ನಗಿರಿ ಪಟ್ಟಣದಲ್ಲಿ ಈಚೆಗೆ ಪ್ರಚಾರ ನಡೆಸಿದರು.   

ಎಚ್.ವಿ. ನಟರಾಜ್

ಚನ್ನಗಿರಿ: ಕನ್ನಡವನ್ನು ಉಳಿಸಿ, ಬೆಳೆಸುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ನಾಡಿನಾದ್ಯಂತ ಸಂಚಾರ ನಡೆಸುತ್ತಿದ್ದಾರೆ ಕನ್ನಡಾಭಿಮಾನಿ ನಾಗಬಸಯ್ಯ ಮಳಲಿಮಠ. ತಮ್ಮ ಜಾಗೃತಿ ಜಾಥಾದ ಭಾಗವಾಗಿ ಪಟ್ಟಣದಲ್ಲೂ ಪ್ರಚಾರ ನಡೆಸಿದರು.

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ
ಐರಣಿ ಗ್ರಾಮದವರಾದ ನಾಗಬಸಯ್ಯ ಮಳಲಿಮಠ ಅವರು ತಮ್ಮ ಬೈಕ್‌ಗೆ ಕನ್ನಡದ ಬಾವುಟಗಳನ್ನು ಕಟ್ಟಿಕೊಂಡು ರಾಜ್ಯದಾದ್ಯಂತ ಪ್ರಚಾರ
ಮಾಡುತ್ತಿದ್ದಾರೆ. ನಾಗಬಸಯ್ಯ ಅವರು ಬೆಂಗಳೂರಿನ ಎ.ಆರ್. ಕಲರ್ ಕ್ರಾಫ್ಟ್‌ ಕಂಪನಿಯಲ್ಲಿ
ಉದ್ಯೋಗಿಯಾಗಿದ್ದು, ಅವರ ಸತತ 6 ವರ್ಷಗಳ ಈ ಸುತ್ತಾಟಕ್ಕೆ ಕಂಪನಿ ಮಾಲೀಕರಾದ ರವಿಕುಮಾರ್‌ ಅವರೂ ಪೂರ್ಣ ಬೆಂಬಲ ನೀಡಿದ್ದಾರೆ. ಅಗತ್ಯ ಧನ ಸಹಾಯವನ್ನೂ ಒದಗಿಸುತ್ತಿದ್ದಾರೆ.

ADVERTISEMENT

‘ಕನ್ನಡ ನಾಡಿನಲ್ಲಿ ಕನ್ನಡಿಗರು ಬಹುಸಂಖ್ಯಾತರಾಗಿದ್ದರೂ ಪರ ಭಾಷಾ ವ್ಯಾಮೋಹದಿಂದಾಗಿ
ಕನ್ನಡ ಶಾಲೆಗಳು ಮುಚ್ಚುವ ಸ್ಥಿತಿ ತಲುಪಿವೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ 6 ವರ್ಷಗಳಿಂದ ವರ್ಷದ 365 ದಿನಗಳೂ ರಾಜ್ಯದಾದ್ಯಂತ ಸುತ್ತಾಟ ನಡೆಸಿದ್ದೇನೆ. ಕನ್ನಡ
ಉಳಿಸಿ, ಬೆಳೆಸುವಂತೆ ಧ್ವನಿವರ್ಧಕದ
ಮೂಲಕ ಪ್ರಚಾರ ಮಾಡುತ್ತಿದ್ದೇನೆ’ ಎಂದು ನಾಗಬಸಯ್ಯ ಮಳಲಿಮಠ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನವಂಬರ್ ಪೂರ್ತಿ ನಾಡಿನ ಗಡಿಭಾಗಗಳಲ್ಲಿ ಜಾಗೃತಿ ಮೂಡಿಸಲು ತೆರಳುತ್ತಿದ್ದೇನೆ. ಕನ್ನಡಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕನ್ನಡ ಭಾಷೆ ಉಳಿಯಬೇಕೆಂಬುದು ನನ್ನ ಮಹದಾಸೆ. ವಿಷ್ಣುವರ್ಧನ್ ಅಭಿಮಾನಿಯೂ ಆಗಿರುವ ನಾನು ಅವರ ಭಾವಚಿತ್ರಗಳನ್ನೂ ಬೈಕ್‌ಗೆ ಕಟ್ಟಿದ್ದೇನೆ.
ನನ್ನ ಜೀವ ಇರುವವರೆಗೂ ಕನ್ನಡದ ಕುರಿತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಕೊಳ್ಳುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.